ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಮೊಸರು ಕುಡಿಕೆಯ ಸಂಭ್ರಮದ ನಡುವೆ ಮಾನವೀಯತೆಯ ಸಿಹಿ! ಅನಾರೋಗ್ಯದಿಂದ ಬಳಲುತ್ತಿದ್ದ ಬಡ ಕುಟುಂಬದ ಬಾಲಕಿಗೆ ಪಡ್ಲಾಡಿ ಮೊಸರು ಕುಡಿಕೆ ಸಮಿತಿಯಿಂದ ₹10 ಸಾವಿರ ನೆರವು

ಮೊಸರು ಕುಡಿಕೆಯ ಸಂಭ್ರಮದ ನಡುವೆ ಮಾನವೀಯತೆಯ ಸಿಹಿ! ಅನಾರೋಗ್ಯದಿಂದ ಬಳಲುತ್ತಿದ್ದ ಬಡ ಕುಟುಂಬದ ಬಾಲಕಿಗೆ ಪಡ್ಲಾಡಿ ಮೊಸರು ಕುಡಿಕೆ ಸಮಿತಿಯಿಂದ ₹10 ಸಾವಿರ ನೆರವು

 

 

 

ಬೆಳ್ತಂಗಡಿ: ಮೊಸರು ಕುಡಿಕೆ ಒಡೆಯುವ ಸಂಭ್ರಮ. ವಿವಿಧ ಆಟೋಟ ಸ್ಪರ್ಧೆಯಲ್ಲಿ ಜಾತಿ, ಧರ್ಮ  ಮರೆತು   ಗ್ರಾಮಸ್ಥರ ಪಾಲ್ಗೊಳ್ಳುವಿಕೆ,,. ಕೇಕೆ, ಚಪ್ಪಾಳೆ, ಸಂಭ್ರಮದಿಂದ ತುಂಬಿದ ವಾತಾವರಣ... ಈ ಎಲ್ಲದರ ನಡುವೆ ಅನಾರೋಗ್ಯದಿಂದ ಬಳಲುತ್ತಿರುವ ಪುಟ್ಟ ಬಾಲಕಿಯ ಕುಟುಂಬದ ಕಣ್ಣೀರನ್ನು ಕಂಡು ಮಿಡಿದ ಪಡ್ಲಾಡಿ ಮೊಸರು ಕುಡಿಕೆ ಉತ್ಸವ ಸಮಿತಿ, ಹಬ್ಬದ ಸಂಭ್ರಮಕ್ಕೆ ಮಾನವೀಯತೆಯ ಸಿಹಿ ಬೆರೆಸಿದೆ.

ಲಾಯಿಲ ಗ್ರಾಮದ ಪಡ್ಲಾಡಿ ಶಾಲಾ ವಠಾರದಲ್ಲಿ ಕಳೆದ ಸುಮಾರು 34 ವರ್ಷಗಳಿಂದ ಊರವರ ಸಹಕಾರದೊಂದಿಗೆ ಮೊಸರು ಕುಡಿಕೆ ಉತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ವರ್ಷದಿಂದ ವರ್ಷಕ್ಕೆ ಉತ್ಸವದ ಕಳೆ ಹೆಚ್ಚುತ್ತಲೇ ಬಂದಿದ್ದು, ಈ ಬಾರಿಯೂ 35ನೇ ವರ್ಷದ ಮೊಸರು ಕುಡಿಕೆ ಕಾರ್ಯಕ್ರಮವು‌ ಸೆ 04 ರಂದು ಪಡ್ಲಾಡಿ ಶಾಲಾ ವಠಾರದಲ್ಲಿ ನಡೆಯಿತು. ಕಳೆದ ನಾಲ್ಕು ವರ್ಷಗಳಿಂದ ಈ ಸಂಭ್ರಮಕ್ಕೆ ಮತ್ತೊಂದು ಅರ್ಥವೂ ಸೇರ್ಪಡೆಯಾಗಿದೆ. ತಮ್ಮ ಸಂತೋಷದ ಜತೆಗೆ ಸಂಕಷ್ಟದಲ್ಲಿರುವವರ ಬದುಕಿನಲ್ಲೂ ಒಂದಷ್ಟು ಬೆಳಕು ಮೂಡಿಸುವ ಸಮಾಜಮುಖಿ ಕಾರ್ಯಕ್ಕೆ ಸಮಿತಿ ಮುಂದಾಗಿದೆ.

ಬಡ ಕುಟುಂಬಗಳಿಗೆ ಆರ್ಥಿಕ ನೆರವು, ಅಗತ್ಯವಿರುವವರಿಗೆ ಆಹಾರ ಕಿಟ್‌ಗಳ ವಿತರಣೆ ಸೇರಿದಂತೆ ವಿವಿಧ ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿರುವ ಸಮಿತಿ, 35 ನೇ ವರ್ಷದ  ಈ ಬಾರಿ ಲಾಯಿಲ ಗ್ರಾಮದ ಒಂದನೇ ವಾರ್ಡಿನ ಅನಾರೋಗ್ಯದಿಂದ ಬಳಲುತ್ತಿರುವ ಬಡ ಕುಟುಂಬದ ಬಾಲಕಿಯ ನೆರವಿಗೆ ಧಾವಿಸಿದೆ.

ಬಾಲಕಿಯ ಅನಾರೋಗ್ಯ ಮತ್ತು ಕುಟುಂಬದ ಸಂಕಷ್ಟವನ್ನು ಅರಿತ ಸಮಿತಿಯು ಚಿಕಿತ್ಸಾ ವೆಚ್ಚ ಹಾಗೂ ಕುಟುಂಬದ ಅಗತ್ಯಗಳಿಗೆ ನೆರವಾಗುವ ಉದ್ದೇಶದಿಂದ ₹10 ಸಾವಿರ ಆರ್ಥಿಕ ಸಹಾಯ ನೀಡಿತು.

ಸಮಿತಿಯ ಗೌರವಾಧ್ಯಕ್ಷ ಪ್ರಸಾದ್ ಶೆಟ್ಟಿ ಎಣಿಂಜೆ, ಅಧ್ಯಕ್ಷ ಅನಿಲ್ ವಿಕ್ರಂ ಡಿಸೋಜ, ಜೊತೆ ಕಾರ್ಯದರ್ಶಿ ಹರೀಶ್ ನೆನಪು ಹಾಗೂ ಸದಸ್ಯ ದಿವಾಕರ್ ಕುರುವ ಸೇರಿದಂತೆ ಇತರರು  ಬಾಲಕಿಯ ಮನೆಗೆ ತೆರಳಿ ಆಕೆಯ ಆರೋಗ್ಯ ವಿಚಾರಿಸಿದರಲ್ಲದೇ  ಬಾಲಕಿ ಶೀಘ್ರ ಗುಣಮುಖಳಾಗಲಿ ಎಂದು ಹಾರೈಸಿ, ಕುಟುಂಬಕ್ಕೆ  ನೆರವಿನ ಮೊತ್ತವನ್ನು ಹಸ್ತಾಂತರಿಸಿದರು.

ಉತ್ಸವದ ಮೈದಾನದಲ್ಲಿ ಮೊಸರು ಕುಡಿಕೆ ಒಡೆಯುವ ಕ್ಷಣಕ್ಕೆ ಜನರು ಕಾತರದಿಂದ ಕಾಯುತ್ತಿದ್ದರೆ, ಇತ್ತ ಸಮಿತಿಯ ಸದಸ್ಯರು ಮತ್ತೊಂದು ಮನೆಯ ನೋವು ಕಡಿಮೆ ಮಾಡುವ ಯೋಚನೆಯಲ್ಲಿ  ತೊಡಗಿದ್ದರು. ಒಂದು ಕಡೆ ಹಬ್ಬದ ಸಂಭ್ರಮ; ಮತ್ತೊಂದು ಕಡೆ ಸಂಕಷ್ಟದಲ್ಲಿರುವ ಕುಟುಂಬದ ಕಣ್ಣೀರು... ಈ ಎರಡರ ನಡುವಿನ ಮಾನವೀಯ ಸೇತುವೆಯಾಗಿ ಪಡ್ಲಾಡಿ ಮೊಸರು ಕುಡಿಕೆ ಸಮಿತಿ ನಿಂತಿತು.

ಸಂಭ್ರಮ ಎಂದರೆ ಕೇವಲ ನಮ್ಮ ಸಂತೋಷವನ್ನು ಆಚರಿಸುವುದಲ್ಲ; ನಮ್ಮ ಸಂತೋಷದ ಪಾಲನ್ನು ಸಂಕಷ್ಟದಲ್ಲಿರುವವರ ಬದುಕಿಗೂ ಹಂಚಿಕೊಳ್ಳುವುದು ಎಂಬ ಸಂದೇಶವನ್ನು ಸಮಿತಿಯ ಈ ಕಾರ್ಯ ಸಾರಿದೆ.

ಸುಮಾರು 35 ವರ್ಷಗಳ ಪರಂಪರೆಯ ಮೊಸರು ಕುಡಿಕೆ ಉತ್ಸವಕ್ಕೆ ಕಳೆದ ನಾಲ್ಕು ವರ್ಷಗಳಿಂದ ಸಮಾಜಮುಖಿ ಸೇವೆಯ ಹೊಸ ಆಯಾಮ ಸೇರ್ಪಡೆಯಾಗಿದೆ. ಊರವರು, ದಾನಿಗಳು ಹಾಗೂ ಹಿತೈಷಿಗಳ ಸಹಕಾರದಿಂದ ನಡೆಯುತ್ತಿರುವ ಈ ಕಾರ್ಯಗಳು ಗ್ರಾಮದಲ್ಲಿ ಪರಸ್ಪರ ಸಹಕಾರ, ಒಗ್ಗಟ್ಟು ಮತ್ತು ಮಾನವೀಯ ಮೌಲ್ಯಗಳಿಗೆ ಮತ್ತಷ್ಟು ಬಲ ತುಂಬುತ್ತಿವೆ.

ಮೊಸರು ಕುಡಿಕೆಯ ಮಡಕೆ ಒಡೆದಾಗ ಹಾಲು-ಮೊಸರು ಹರಿಯಬಹುದು; ಆದರೆ ಮತ್ತೊಬ್ಬರ ಕಣ್ಣೀರನ್ನು ಒರೆಸಿದಾಗ ಹರಿಯುವುದು ಮಾನವೀಯತೆಯ ಸಿಹಿ. ಪಡ್ಲಾಡಿ ಮೊಸರು ಕುಡಿಕೆ ಉತ್ಸವ ಸಮಿತಿಯ ಈ ಸೇವಾ ಕಾರ್ಯ ಅದಕ್ಕೆ ಸಾಕ್ಷಿಯಾಗಿದೆ.

ಹಬ್ಬದ ಸಂಭ್ರಮ ಕ್ಷಣಿಕವಾಗಿರಬಹುದು. ಆದರೆ ಸಂಕಷ್ಟದಲ್ಲಿರುವವರ ಬದುಕಿನಲ್ಲಿ ಮೂಡಿಸಿದ ಭರವಸೆ ಬಹುಕಾಲ ಉಳಿಯುತ್ತದೆ. ಪಡ್ಲಾಡಿಯ ಮೊಸರು ಕುಡಿಕೆ ಉತ್ಸವ ಈ ಬಾರಿ ಇಂತಹದ್ದೊಂದು ಮಾನವೀಯ ನೆನಪನ್ನು ಊರಿನ ಮನಸ್ಸಿನಲ್ಲಿ ಮೂಡಿಸಿದೆ.ಅದಲ್ಲದೇ ಮುಂದಿನ ವರ್ಷದಿಂದ 5 ಮಂದಿ ವಾರ್ಡಿನ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸುವ  ಯೋಚನೆಯನ್ನೂ ಸಮಿತಿ ಹಮ್ಮಿಕೊಂಡಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!