ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ದಸರಾ ವೇಳೆ ಕಂಬಳ ನಡೆಸುವ ಅಗತ್ಯವಿರಲಿಲ್ಲ: ಯದುವೀರ್ ಒಡೆಯರ್.

ದಸರಾ ವೇಳೆ ಕಂಬಳ ನಡೆಸುವ ಅಗತ್ಯವಿರಲಿಲ್ಲ: ಯದುವೀರ್ ಒಡೆಯರ್.

 





ಮೈಸೂರು: ಕಂಬಳವು ಕರಾವಳಿ ಭಾಗದ ಸಾಂಪ್ರದಾಯಿಕ ಗ್ರಾಮೀಣ ಕ್ರೀಡೆಯಾಗಿದ್ದು, ಅದಕ್ಕೆ ತನ್ನದೇ ಆದ ಸಂಪ್ರದಾಯ ಮತ್ತು ವೈಶಿಷ್ಟ್ಯವಿದೆ. ಹೀಗಾಗಿ ದಸರಾ ಸಂದರ್ಭದಲ್ಲಿ ಕಂಬಳ ಆಯೋಜಿಸುವ ಅಗತ್ಯವಿರಲಿಲ್ಲ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಪಟ್ಟರು.


ಮೈಸೂರಿನಲ್ಲಿ ಬುಧವಾರ ಪತ್ರಕರ್ತರೊಂದಿಗೆ ಸಂವಾದ ನಡೆಸಿದ ಅವರು, ಕಂಬಳ ಕ್ರೀಡೆಗೆ ತಮ್ಮ ಯಾವುದೇ ವಿರೋಧವಿಲ್ಲ. ಆದರೆ ದಸರಾ ಸಂದರ್ಭದಲ್ಲಿ ಕಂಬಳ ನಡೆಸುತ್ತಿರುವುದಕ್ಕೆ ಆರಂಭದಿಂದಲೂ ಆಕ್ಷೇಪವಿದೆ ಎಂದು ಸ್ಪಷ್ಟಪಡಿಸಿದರು.


ಚಾಮುಂಡಿಬೆಟ್ಟದಲ್ಲಿ ಮಹಿಷ ದಸರಾ ಬೇಡ


ಮಹಿಷ ದಸರಾ ಕುರಿತು ಪ್ರತಿಕ್ರಿಯಿಸಿದ ಯದುವೀರ್, ಸಂವಿಧಾನ ಎಲ್ಲರಿಗೂ ಧಾರ್ಮಿಕ ಹಕ್ಕುಗಳನ್ನು ನೀಡಿದೆ. ಇತರರ ಭಾವನೆಗಳಿಗೆ ಧಕ್ಕೆಯಾಗದಂತೆ ಯಾವುದೇ ಆಚರಣೆಯನ್ನು ನಡೆಸಬಹುದು ಎಂದರು.


ಆದರೆ ಚಾಮುಂಡಿಬೆಟ್ಟದಲ್ಲಿ ಮಹಿಷ ದಸರಾ ಆಚರಣೆ ನಡೆಸುವುದು ಬೇಡ ಎಂಬುದು ತಮ್ಮ ಸ್ಪಷ್ಟ ನಿಲುವು. ಕೇವಲ ಆಚರಣೆಯಾಗಿ ನಡೆಸುವುದಕ್ಕೆ ವಿರೋಧವಿಲ್ಲ. ಆದರೆ ಮಹಿಷ ದಸರಾ ಆಚರಣೆಯ ಹಿಂದಿರುವ ನಿಲುವು ಮತ್ತು ಉದ್ದೇಶವನ್ನು ಸ್ಪಷ್ಟಪಡಿಸಬೇಕು ಎಂದು ಅವರು ಹೇಳಿದರು.


ಅಭಿವೃದ್ಧಿ ಕಾರ್ಯಗಳ ಆಧಾರದಲ್ಲಿ ಮುಂದಿನ ಚುನಾವಣೆ


ತಮ್ಮ ಮುಂದಿನ ರಾಜಕೀಯ ಜೀವನದ ಕುರಿತು ಮಾತನಾಡಿದ ಯದುವೀರ್, ಮೈಸೂರು–ಕೊಡಗು ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳು ಮುಂದುವರಿಯುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಅವರ ‘ವಿಕಸಿತ ಭಾರತ’ ಪರಿಕಲ್ಪನೆಗೆ ಪೂರಕವಾಗಿ ಕ್ಷೇತ್ರದಲ್ಲಿ ಇನ್ನಷ್ಟು ಕೆಲಸ ಮಾಡಬೇಕಿದೆ ಎಂದರು.


ಮೋದಿ ಅವರ ವಿಕಸಿತ ಭಾರತದ ಕಲ್ಪನೆ ಹಾಗೂ ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಮುಂದಿನ ಚುನಾವಣೆಯನ್ನು ಎದುರಿಸುವುದಾಗಿ ಅವರು ತಿಳಿಸಿದರು. ಸದ್ಯ ಜನರ ಆಶಯಗಳಿಗೆ ತಕ್ಕಂತೆ ಕೆಲಸ ಮಾಡಿರುವ ತೃಪ್ತಿ ಇದೆ ಎಂದರು.


ಅರಸು, ಸಿದ್ದರಾಮಯ್ಯ ಉತ್ತಮ ನಾಯಕರು


ರಾಜಕೀಯದಲ್ಲಿ ಪಕ್ಷಭೇದವಿಲ್ಲದೆ ಕೆಲವು ನಾಯಕರನ್ನು ವೈಯಕ್ತಿಕವಾಗಿ ಇಷ್ಟಪಡುವುದಾಗಿ ಯದುವೀರ್ ಹೇಳಿದರು. ತಮ್ಮಂತೆಯೇ ಸಣ್ಣ ಸಮುದಾಯದಿಂದ ಬಂದಿದ್ದ ದೇವರಾಜ ಅರಸು ಅವರು ಎಲ್ಲರೂ ಒಪ್ಪುವಂತಹ ಆಡಳಿತ ನೀಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ರಾಜಕೀಯವಾಗಿ ಉತ್ತಮ ನಾಯಕರು ಎಂದು ಅವರು ಅಭಿಪ್ರಾಯಪಟ್ಟರು.


ರಾಜಕೀಯ ನಿಲುವು ಬೇರೆ, ವೈಯಕ್ತಿಕ ಅಭಿಪ್ರಾಯಗಳು ಬೇರೆ ಎಂದು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಯದುವೀರ್, ರಾಜಕೀಯ ಕ್ಷೇತ್ರದಲ್ಲಿ ವಿವಿಧ ನಾಯಕರ ಬಗ್ಗೆ ವೈಯಕ್ತಿಕವಾಗಿ ಗೌರವ ಮತ್ತು ಮೆಚ್ಚುಗೆ ಹೊಂದಿರುವುದರಲ್ಲಿ ತಪ್ಪಿಲ್ಲ ಎಂದು ಹೇಳಿದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!