ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ವಿದ್ಯುತ್ ಆಘಾತಕ್ಕೆ ತಾಯಿ-ಮಗ ಬಲಿ: ಮೂಡಬಿದ್ರೆಯಲ್ಲಿ ದಾರುಣ ಘಟನೆ

ವಿದ್ಯುತ್ ಆಘಾತಕ್ಕೆ ತಾಯಿ-ಮಗ ಬಲಿ: ಮೂಡಬಿದ್ರೆಯಲ್ಲಿ ದಾರುಣ ಘಟನೆ

 


ಮೂಡುಬಿದಿರೆ: ಸ್ನಾನ ಮುಗಿಸಿ ಒದ್ದೆ ಬಟ್ಟೆಗಳನ್ನು ಒಣಗಿಸಲು ಹೋದ ಯುವಕನಿಗೆ ವಿದ್ಯುತ್ ಆಘಾತ ತಗುಲಿದ್ದು, ಆತನನ್ನು ರಕ್ಷಿಸಲು ಧಾವಿಸಿದ ತಾಯಿಯೂ ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿ ಇಬ್ಬರೂ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ವರ್ಣಬೆಟ್ಟುವಿನ ಪೊಸಲಾಯಿ ಕೆಳಗಿನ ಮನೆಯಲ್ಲಿ ಸಂಭವಿಸಿದೆ

ಮೃತರನ್ನು ವರ್ಣಬೆಟ್ಟುವಿನ ನಿವಾಸಿ ಮರ್ಸಿ ಮಸ್ಕರೇನಸ್ (45) ಹಾಗೂ ಅವರ ಪುತ್ರ, ಮೂಡುಬಿದಿರೆಯ ಹೋಲಿ ರೋಸರಿ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಶೋನ್ ಮಸ್ಕರೇನಸ್ (18) ಎಂದು ಗುರುತಿಸಲಾಗಿದೆ.

ಬಟ್ಟೆ ಒಣಗಿಸುವಾಗ ಸಂಭವಿಸಿದ ದುರಂತ

ಸ್ಥಳೀಯರ ಮಾಹಿತಿಯ ಪ್ರಕಾರ, ಬುಧವಾರ ಸಂಜೆ ಸುಮಾರು 6:30ರಿಂದ 7 ಗಂಟೆಯ ನಡುವೆ ಈ ದುರಂತ ಸಂಭವಿಸಿರುವ ಶಂಕೆಯಿದೆ. ಸ್ನಾನ ಮುಗಿಸಿ ಬಂದ ಶೋನ್ ಮನೆಯ ಹೊರಭಾಗದಲ್ಲಿದ್ದ ಬಟ್ಟೆ ಒಣಗಿಸುವ ತಂತಿಗೆ ಒದ್ದೆ ಬಟ್ಟೆಗಳನ್ನು ಹಾಕಲು ತೆರಳಿದ್ದರು.

ಮನೆಯ ಮೇಲ್ಛಾವಣಿಗೆ ಮರದ ಬದಲಾಗಿ ಕಬ್ಬಿಣದ ಪಕ್ಕಾಸುಗಳನ್ನು ಅಳವಡಿಸಲಾಗಿತ್ತು ಎನ್ನಲಾಗಿದೆ. ವಿದ್ಯುತ್ ಕಂಬದಿಂದ ಮನೆಗೆ ಸಂಪರ್ಕ ಕಲ್ಪಿಸಿದ್ದ ಸರ್ವೀಸ್ ವೈರ್ ಹಾನಿಗೊಂಡು ಕಬ್ಬಿಣದ ಪಕ್ಕಾಸಿಗೆ ವಿದ್ಯುತ್ ಪ್ರವಹಿಸಿರಬಹುದು ಎಂದು ಶಂಕಿಸಲಾಗಿದೆ. ಬಟ್ಟೆ ಒಣಗಿಸುವ ತಂತಿಯೂ ಕಬ್ಬಿಣದ ಪಕ್ಕಾಸಿನ ಸಂಪರ್ಕದಲ್ಲಿದ್ದ ಕಾರಣ, ಬಟ್ಟೆ ಹಾಕುವ ಸಂದರ್ಭದಲ್ಲಿ ಶೋನ್‌ಗೆ ವಿದ್ಯುತ್ ಆಘಾತ ತಗುಲಿರುವ ಸಾಧ್ಯತೆಯಿದೆ.


ಮಗನ ಕಿರುಚಾಟ ಕೇಳಿ ರಕ್ಷಣೆಗೆ ಧಾವಿಸಿದ ತಾಯಿ ಮರ್ಸಿ, ಆತನನ್ನು ರಕ್ಷಿಸಲು ಮುಂದಾದಾಗ ಅವರಿಗೂ ವಿದ್ಯುತ್ ಆಘಾತ ತಗುಲಿದೆ. ಪರಿಣಾಮ ತಾಯಿ-ಮಗ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.


ಬೆಳಗ್ಗೆ ಕಾರ್ಮಿಕ ಬಂದಾಗ ಘಟನೆ ಬೆಳಕಿಗೆ

ಮರ್ಸಿ ಅವರ ಪತಿ ಸೈಮನ್ ಮಸ್ಕರೇನಸ್ ಸುಮಾರು 15 ವರ್ಷಗಳ ಹಿಂದೆಯೇ ನಿಧನರಾಗಿದ್ದರು. ತಾಯಿ ಮತ್ತು ಮಗ ಇಬ್ಬರೇ ಮನೆಯಲ್ಲಿ ವಾಸವಿದ್ದು, ಕೃಷಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ರಾತ್ರಿ ನಡೆದ ದುರಂತ ಯಾರ ಗಮನಕ್ಕೂ ಬಂದಿರಲಿಲ್ಲ.

ಗುರುವಾರ ಬೆಳಗ್ಗೆ ಸುಮಾರು 7ರಿಂದ 8 ಗಂಟೆಯ ನಡುವೆ ತೋಟದ ಕೆಲಸಕ್ಕೆಂದು ಮನೆಗೆ ಬಂದ ಕಾರ್ಮಿಕ ಸುಂದರ ಪೂಜಾರಿ ಅವರು ತಾಯಿ-ಮಗ ಮೃತಪಟ್ಟಿರುವುದನ್ನು ಗಮನಿಸಿದ ಬಳಿಕ ಘಟನೆ ಬೆಳಕಿಗೆ ಬಂದಿದೆ.


ಅಧಿಕಾರಿಗಳಿಂದ ಪರಿಶೀಲನೆ, ತನಿಖೆ ಆರಂಭ


ಘಟನೆಯ ಮಾಹಿತಿ ತಿಳಿದ ತಹಶೀಲ್ದಾರ್ ಶ್ರೀಧರ ಮುಂದಲಮನಿ, ಪಾಲಡ್ಕ ಗ್ರಾಮ ಪಂಚಾಯತ್‌ನ ಮಾಜಿ ಉಪಾಧ್ಯಕ್ಷ ಸುಕೇಶ್ ಶೆಟ್ಟಿ ಕೇಮಾರು, ಮೂಡುಬಿದಿರೆ ಪೊಲೀಸರು ಹಾಗೂ ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ವಿದ್ಯುತ್ ಸಂಪರ್ಕದಲ್ಲಿ ಉಂಟಾಗಿರಬಹುದಾದ ದೋಷದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!