ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ನ್ಯಾಯಾಧೀಶರ ಎದುರು ಬಿಚ್ಚಿಕೊಂಡ ಮುಗುಳಿ ಬಿಸಿಎಂ ವಸತಿನಿಲಯದ ಅವ್ಯವಸ್ಥೆ! ಕಳಪೆ ಆಹಾರ, ಗಬ್ಬುನಾರುವ ಶೌಚಾಲಯ, ಸ್ಯಾನಿಟರಿ ಪ್ಯಾಡ್‌ಗಳಿಗೂ ಕೊರತೆ; ಹಲವು ಸಮಸ್ಯೆಗಳನ್ನು ಹೇಳಿಕೊಂಡ ವಿದ್ಯಾರ್ಥಿನಿಯರು:

ನ್ಯಾಯಾಧೀಶರ ಎದುರು ಬಿಚ್ಚಿಕೊಂಡ ಮುಗುಳಿ ಬಿಸಿಎಂ ವಸತಿನಿಲಯದ ಅವ್ಯವಸ್ಥೆ! ಕಳಪೆ ಆಹಾರ, ಗಬ್ಬುನಾರುವ ಶೌಚಾಲಯ, ಸ್ಯಾನಿಟರಿ ಪ್ಯಾಡ್‌ಗಳಿಗೂ ಕೊರತೆ; ಹಲವು ಸಮಸ್ಯೆಗಳನ್ನು ಹೇಳಿಕೊಂಡ ವಿದ್ಯಾರ್ಥಿನಿಯರು:




ಬೆಳ್ತಂಗಡಿ: ವಿದ್ಯಾರ್ಥಿನಿಯರ ಸುರಕ್ಷತೆ, ಆರೋಗ್ಯ ಮತ್ತು ಶಿಕ್ಷಣಕ್ಕೆ ಪೂರಕ ವಾತಾವರಣ ಕಲ್ಪಿಸಬೇಕಾದ ಮುಗುಳಿ ಬಿಸಿಎಂ ವಿದ್ಯಾರ್ಥಿನಿಲಯದಲ್ಲಿ ಆಹಾರ, ಸ್ವಚ್ಛತೆ ಹಾಗೂ ಮೂಲಭೂತ ಸೌಲಭ್ಯಗಳ ನಿರ್ವಹಣೆಯಲ್ಲಿ ಹಲವು ಲೋಪಗಳು ಕಂಡುಬಂದಿವೆ. ಸುರಕ್ಷಿತ ಬಾಲ್ಯ ಅಭಿಯಾನದಡಿ ಪೋಕ್ಸೋ ಕಾಯ್ದೆ ಕುರಿತು ಕಾನೂನು ಅರಿವು ಮೂಡಿಸಲು ಭೇಟಿ ನೀಡಿದ ನ್ಯಾಯಾಧೀಶರ ಎದುರು ವಿದ್ಯಾರ್ಥಿನಿಯರು ನಿಲಯದ ಅವ್ಯವಸ್ಥೆಯ ಬಗ್ಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ.



ಬೆಳ್ತಂಗಡಿಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್‌ಸಿ ರಾಮಲಿಂಗಪ್ಪ ಅವರು ಮಹಿಳಾ ಪ್ಯಾನಲ್ ವಕೀಲರು, ನ್ಯಾಯಾಲಯದ ಸಿಬ್ಬಂದಿ ಮತ್ತು ಪೊಲೀಸ್ ಸಿಬ್ಬಂದಿಯೊಂದಿಗೆ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿನಿಯರಿಗೆ ಪೋಕ್ಸೋ ಕಾಯ್ದೆ ಹಾಗೂ ಮಕ್ಕಳ ಸುರಕ್ಷತೆಯ ಕುರಿತು ಮಾಹಿತಿ ನೀಡಿದರು. ಬಳಿಕ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿ ಅವರ ಸಮಸ್ಯೆ ಹಾಗೂ ಕುಂದುಕೊರತೆಗಳನ್ನು ಆಲಿಸಿದರು.





93 ವಿದ್ಯಾರ್ಥಿನಿಯರ ಹೆಸರು, ಹಾಜರಿದ್ದವರು 50ಕ್ಕಿಂತ ಕಡಿಮೆ!


ವಿದ್ಯಾರ್ಥಿನಿಲಯದ ದಾಖಲಾತಿ ಪಟ್ಟಿಯಲ್ಲಿ 93 ವಿದ್ಯಾರ್ಥಿನಿಯರ ಹೆಸರುಗಳಿದ್ದರೂ, ಪರಿಶೀಲನೆಯ ಸಂದರ್ಭದಲ್ಲಿ 50ಕ್ಕಿಂತ ಕಡಿಮೆ ವಿದ್ಯಾರ್ಥಿನಿಯರು ಮಾತ್ರ ಹಾಜರಿದ್ದರು. ನಿಗದಿತ ಆಹಾರಪಟ್ಟಿಯಂತೆ ಊಟ ನೀಡುತ್ತಿಲ್ಲ, ಬೆಳಗಿನ ಉಪಾಹಾರ ಕಳಪೆ ಗುಣಮಟ್ಟದ್ದಾಗಿದ್ದು, ಸಾಂಬಾರಿನಲ್ಲಿ ಅಗತ್ಯ ಪ್ರಮಾಣದ ಬೇಳೆ ಮತ್ತು ತರಕಾರಿಗಳಿರುವುದಿಲ್ಲ ಎಂದು ವಿದ್ಯಾರ್ಥಿನಿಯರು ದೂರಿದರು.



ವಿದ್ಯಾರ್ಥಿನಿಯರ ದೂರಿನ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಸೇರಿದಂತೆ ತಂಡದ ಸದಸ್ಯರು ನಿಲಯದಲ್ಲಿ ತಯಾರಿಸಿದ್ದ ರಾತ್ರಿ ಊಟವನ್ನು ಸ್ವತಃ ಸೇವಿಸಿ ಪರಿಶೀಲಿಸಿದರು. ಅಂದು ಊಟಕ್ಕೆ ಕೇವಲ ಅನ್ನ ಮತ್ತು ತೆಳುವಾದ, ಸಮರ್ಪಕ ರುಚಿ ಹಾಗೂ ಗುಣಮಟ್ಟವಿಲ್ಲದ ಸಾಂಬಾರು ನೀಡಿರುವುದು ಗಮನಕ್ಕೆ ಬಂದಿತು.




ಕೋಳಿ ಮಾಂಸ ವಿತರಣೆಯಲ್ಲೂ ಅವ್ಯವಹಾರದ ಆರೋಪ


ಮಾಂಸಾಹಾರ ವಿತರಣೆಯಲ್ಲಿಯೂ ಅಕ್ರಮ ನಡೆಯುತ್ತಿದೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿನಿಗೆ ಕೇವಲ ಒಂದು ತುಂಡು ಕೋಳಿ ಮಾಂಸ ನೀಡಿ, ಉಳಿದ ಮಾಂಸವನ್ನು ಬೇರೆಡೆ ಸಾಗಿಸಲಾಗುತ್ತಿದೆ ಎಂಬ ಗಂಭೀರ ದೂರನ್ನೂ ಅವರು ಮುಂದಿಟ್ಟಿದ್ದಾರೆ. ಈ ಆರೋಪಗಳ ಸತ್ಯಾಸತ್ಯತೆ ಸ್ವತಂತ್ರ ತನಿಖೆಯಿಂದ ದೃಢಪಡಬೇಕಾಗಿದೆ.


ಶೌಚಾಲಯ ಅಶುಚಿತನ, ವರ್ಷದಿಂದ ಸ್ಯಾನಿಟರಿ ಪ್ಯಾಡ್ ಇಲ್ಲ!


ವಿದ್ಯಾರ್ಥಿನಿಲಯದ ಶೌಚಾಲಯ ಮತ್ತು ಸ್ನಾನಗೃಹಗಳು ಅಶುಚಿಯಿಂದ ಕೂಡಿದ್ದು, ದುರ್ವಾಸನೆ ಬೀರುತ್ತಿರುವುದು ಪರಿಶೀಲನೆಯ ವೇಳೆ ಕಂಡುಬಂದಿದೆ. ವಿದ್ಯಾರ್ಥಿನಿಯರಿಂದಲೇ ಶೌಚಾಲಯಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ ಹಾಗೂ ಕಳೆದ ಒಂದು ವರ್ಷದಿಂದ ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸುತ್ತಿಲ್ಲ ಎಂದು ವಿದ್ಯಾರ್ಥಿನಿಯರು ದೂರಿದ್ದಾರೆ.


ನಿಲಯದಲ್ಲಿರುವ ಸಿಸಿಟಿವಿ ಕ್ಯಾಮೆರಾಗಳ ಪೈಕಿ ಒಂದು ಕ್ಯಾಮೆರಾ ಕಾರ್ಯನಿರ್ವಹಿಸುತ್ತಿಲ್ಲ. ಆಹಾರದ ಗುಣಮಟ್ಟ ಪರಿಶೀಲನೆಗಾಗಿ ನಿರ್ವಹಿಸಬೇಕಾದ ಟೇಸ್ಟ್ ರಿಜಿಸ್ಟರ್ ಕೂಡ ಸಮರ್ಪಕವಾಗಿ ನಿರ್ವಹಣೆಯಾಗುತ್ತಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.


ವಾರ್ಡನ್ ವಿರುದ್ಧವೂ ವಿದ್ಯಾರ್ಥಿನಿಯರ ಅಸಮಾಧಾನ


ವಾರ್ಡನ್ ಶ್ರೀಮತಿ ಶಶಿಕಲಾ ಅವರು ವಿದ್ಯಾರ್ಥಿನಿಯರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುವುದಿಲ್ಲ. ದೂರು ಹೇಳಿದಾಗ ಕೂಗಾಡುತ್ತಾರೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಪರಿಶೀಲನೆಯ ಸಂದರ್ಭದಲ್ಲಿಯೂ ವಾರ್ಡನ್ ಅವರಿಂದ ಸಮರ್ಪಕ ಸಹಕಾರ ದೊರೆಯದಿರುವುದು ಗಮನಕ್ಕೆ ಬಂದಿದೆ ಎಂದು ತಿಳಿದುಬಂದಿದೆ.

ಸಮಗ್ರ ತನಿಖೆಗೆ ಆಗ್ರಹ


ವಿದ್ಯಾರ್ಥಿನಿಯರ ಆರೋಗ್ಯ, ಸುರಕ್ಷತೆ ಮತ್ತು ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದ ಈ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ನಿಲಯಕ್ಕೆ ಬಿಡುಗಡೆಯಾಗುವ ಸರ್ಕಾರಿ ಅನುದಾನದ ಬಳಕೆ, ಆಹಾರ ಪೂರೈಕೆ, ಆಹಾರದ ಗುಣಮಟ್ಟ, ಸ್ವಚ್ಛತೆ ಹಾಗೂ ಆಡಳಿತಾತ್ಮಕ ನಿರ್ವಹಣೆಯ ಕುರಿತು ಸಂಬಂಧಪಟ್ಟ ಇಲಾಖೆಯ ಮೇಲಾಧಿಕಾರಿಗಳು ಸಮಗ್ರ ತನಿಖೆ ನಡೆಸಿ, ಲೋಪಗಳಿಗೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ವ್ಯಕ್ತವಾಗಿದೆ.


ವಿದ್ಯಾರ್ಥಿನಿಯರಿಗೆ ಪೌಷ್ಟಿಕ ಆಹಾರ, ಸ್ವಚ್ಛ ವಾಸಸ್ಥಳ, ಅಗತ್ಯ ಆರೋಗ್ಯ ಸೌಲಭ್ಯಗಳು ಮತ್ತು ಸುರಕ್ಷಿತ ವಾತಾವರಣ ಕಲ್ಪಿಸುವುದು ಇಲಾಖೆಯ ಜವಾಬ್ದಾರಿಯಾಗಿದೆ. ನ್ಯಾಯಾಂಗ ಅಧಿಕಾರಿಗಳ ಮುಂದೆ ವಿದ್ಯಾರ್ಥಿನಿಯರು ವ್ಯಕ್ತಪಡಿಸಿರುವ ಅಹವಾಲುಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸಿ, ನಿಲಯದ ವ್ಯವಸ್ಥೆಯಲ್ಲಿ ಅಗತ್ಯ ಸುಧಾರಣೆ ತರಬೇಕಿದೆ



ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!