ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ವಳಾಲು ಟೋಲ್ ದರ ಏರಿಕೆಗೆ ರಕ್ಷಿತ್ ಶಿವರಾಂ ಆಕ್ಷೇಪ: ಬೆಳ್ತಂಗಡಿ ಶಾಸಕರ ಮೌನಕ್ಕೆ ಪ್ರಶ್ನೆ ಟೋಲ್ ಸಂಗ್ರಹದಲ್ಲಿ ಬಿಜೆಪಿಗೆ ಪಾಲಿದೆಯೇ? ಎಂದು ಪ್ರಶ್ನಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ – ಸ್ಥಳೀಯರಿಗೆ ವಿನಾಯಿತಿ ನೀಡಲು ಆಗ್ರಹrakshith

ವಳಾಲು ಟೋಲ್ ದರ ಏರಿಕೆಗೆ ರಕ್ಷಿತ್ ಶಿವರಾಂ ಆಕ್ಷೇಪ: ಬೆಳ್ತಂಗಡಿ ಶಾಸಕರ ಮೌನಕ್ಕೆ ಪ್ರಶ್ನೆ ಟೋಲ್ ಸಂಗ್ರಹದಲ್ಲಿ ಬಿಜೆಪಿಗೆ ಪಾಲಿದೆಯೇ? ಎಂದು ಪ್ರಶ್ನಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ – ಸ್ಥಳೀಯರಿಗೆ ವಿನಾಯಿತಿ ನೀಡಲು ಆಗ್ರಹrakshith

 





ಬೆಳ್ತಂಗಡಿ: ಉಪ್ಪಿನಂಗಡಿ ಸಮೀಪದ ವಳಾಲು ಟೋಲ್ ಗೇಟ್‌ನಲ್ಲಿ ಏಕಾಏಕಿ ಟೋಲ್ ದರ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ತೀವ್ರವಾಗಿ ಖಂಡಿಸಿದ್ದಾರೆ. ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹಾಗೂ ಬಿಜೆಪಿ ನಾಯಕರು, ಜನಸಾಮಾನ್ಯರಿಗೆ ಹೊರೆಯಾಗಿರುವ ಟೋಲ್ ದರ ಏರಿಕೆಯ ವಿರುದ್ಧ ಮೌನ ವಹಿಸಿರುವುದೇಕೆ ಎಂದು ಅವರು ಪ್ರಶ್ನಿಸಿದ್ದಾರೆ.








ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ರಕ್ಷಿತ್ ಶಿವರಾಂ, ವಳಾಲು ಟೋಲ್ ಗೇಟ್‌ನಲ್ಲಿ ವಾಹನ ಸವಾರರಿಂದ ದುಪ್ಪಟ್ಟು ಹಣ ವಸೂಲಿ ಮಾಡುವ ಮೂಲಕ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಹೊಸ ನಾಲ್ಕು ಚಕ್ರದ ವಾಹನಗಳ ಖರೀದಿ ಸಂದರ್ಭದಲ್ಲಿ ರಸ್ತೆ ತೆರಿಗೆ ಪಾವತಿಸಿದರೂ, ರಸ್ತೆ ಬಳಕೆಯ ಹೆಸರಿನಲ್ಲಿ ಮತ್ತೆ ಮತ್ತೆ ಟೋಲ್ ಶುಲ್ಕ ಹೆಚ್ಚಿಸುತ್ತಿರುವುದು ಎಷ್ಟು ಸಮಂಜಸ ಎಂಬುದನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.


ರಾಷ್ಟ್ರೀಯ ಹೆದ್ದಾರಿ ನಿಯಮಗಳ ಪ್ರಕಾರ ಎರಡು ಟೋಲ್ ಪ್ಲಾಜಾಗಳ ನಡುವೆ ನಿಗದಿತ ಅಂತರವಿರಬೇಕು. ಆದರೆ ಬ್ರಹ್ಮರಕೊಟ್ಲು ಟೋಲ್ ಗೇಟ್‌ನಿಂದ ಕೇವಲ 32 ಕಿ.ಮೀ. ಅಂತರದಲ್ಲಿ ವಳಾಲು ಟೋಲ್ ಗೇಟ್ ಆರಂಭಿಸಿರುವುದು ನಿಯಮಬಾಹಿರವಾಗಿದೆ ಎಂದು ರಕ್ಷಿತ್ ಶಿವರಾಂ ದೂರಿದ್ದಾರೆ. ಕಡಿಮೆ ಅಂತರದಲ್ಲಿ ಎರಡು ಟೋಲ್ ಗೇಟ್‌ಗಳನ್ನು ಸ್ಥಾಪಿಸಿ ವಾಹನ ಸವಾರರಿಂದ ಎರಡೆರಡು ಬಾರಿ ಶುಲ್ಕ ವಸೂಲಿ ಮಾಡುತ್ತಿರುವುದು ಜನರಿಗೆ ಅನ್ಯಾಯವಾಗಿದೆ ಎಂದು ಅವರು ಆರೋಪಿಸಿದ್ದಾರೆ.


ವಳಾಲು ಭಾಗದ ಸ್ಥಳೀಯರು ಬ್ಯಾಂಕ್, ಸಹಕಾರಿ ಹಾಲು ಡಿಪೋ, ದೇವಸ್ಥಾನ, ಚರ್ಚ್ ಹಾಗೂ ಮಸೀದಿಗಳಿಗೆ ತೆರಳಲು ಪ್ರತಿನಿತ್ಯ ₹250 ವರೆಗೆ ಟೋಲ್ ಶುಲ್ಕ ಪಾವತಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಸ್ಥಳೀಯರ ದೈನಂದಿನ ಬದುಕಿಗೆ ತೊಂದರೆಯಾಗುತ್ತಿರುವ ಈ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.


ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡುತ್ತಿರುವ ಶಾಸಕ ಹರೀಶ್ ಪೂಂಜಾ, ಜನವಿರೋಧಿ ಟೋಲ್ ದರ ಏರಿಕೆಯ ವಿರುದ್ಧ ಧ್ವನಿ ಎತ್ತದಿರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ ಎಂದು ರಕ್ಷಿತ್ ಶಿವರಾಂ ಟೀಕಿಸಿದ್ದಾರೆ.


ವಾಹನ ಸವಾರರಿಗೆ ಹೊರೆಯಾಗುವಂತೆ ಟೋಲ್ ದರ ಹೆಚ್ಚಿಸಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಪ್ರಶ್ನಿಸುವ ತಾಕತ್ತು ಶಾಸಕರಿಗಿದೆಯೇ? ಟೋಲ್ ಸಂಗ್ರಹದಲ್ಲಿ ಬಿಜೆಪಿಗೆ ಪಾಲಿದೆಯೇ ಎಂಬ ಅನುಮಾನ ಜನರಲ್ಲಿ ಮೂಡುತ್ತಿದೆ ಎಂದು ಅವರು ಪ್ರಶ್ನಿಸಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!