ಸರ್ವಧರ್ಮ ಸಮ್ಮೇಳನದ 88ನೇ ಅಧಿವೇಶನವನ್ನು ವಸತಿ ಸಚಿವ ವಿ.ಸೋಮಣ್ಣ ಉದ್ಘಾಟಿಸಲಿದ್ದು, ಕನಕಗಿರಿ ಜೈನ ಮಠದ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಸ್ವಾಮಿಗಳವರು ಅಧ್ಯಕ್ಷತೆ ವಹಿಸುವರು.
ಧರ್ಮಾಧಿಕಾರಿ, ಸ್ವಾಗತ ಸಮಿತಿ ಅಧ್ಯಕ್ಷರಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಸ್ವಾಗತ ಭಾಷಣ ಮಾಡಲಿದ್ದು, ಖ್ಯಾತ ಕಥೆಗಾರ ಬೆಂಗಳೂರಿನ ಕೇಶವ ಮಳಗಿ, ಉಡುಪಿ ಧರ್ಮಪ್ರಾಂತ್ಯದ ಸಾ.ಸಂಪರ್ಕ ಅಧಿಕಾರಿ ರೆ.ಫಾ.ಚೇತನ್ ಲೋಬೋ ಉಪನ್ಯಾಸ ನೀಡಲಿದ್ದಾರೆ.
ಸಮ್ಮೇಳನದ ಬಳಿಕ ರಾತ್ರಿ 8 ರಿಂದ 10 ಗಂಟೆಯವರೆಗೆ ಬೆಂಗಳೂರಿನ ಸಂಗೀತ ಕಲಾರತ್ನ ಡಾ.ಆರ್. ಮಂಜುನಾಥ ತಂಡದಿಂದ ಸ್ಯಾಕ್ಸೋಫೋನ್ ವಾದನ ನಡೆಯಲಿದೆ.
ಲಕ್ಷ ದೀಪೋತ್ಸವದ ಎರಡನೇ ದಿನ ಶುಕ್ರವಾರವಾರ ರಾತ್ರಿ ಶ್ರೀ ಮಂಜುನಾಥ ಸ್ವಾಮಿ ದೇವರ ಉತ್ಸವ ಮೂರ್ತಿಯನ್ನು ಸ್ವರ್ಣಪಲ್ಲಕ್ಕಿಯಲ್ಲಿ ಕೆರೆಕಟ್ಟೆ ಉತ್ಸವಕ್ಕೆ ಮೆರವಣಿಗೆ ಮೂಲಕ ಸಾಗಿತು. ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಕೆರೆಕಟ್ಟೆಯಲ್ಲಿ ಉತ್ಸವ ನಡೆದ ಬಳಿಕ ದೇವಸ್ಥಾನಕ್ಕೆ ಮರಳಿದ ದೇವರನ್ನು ಬೆಳ್ಳಿರಥದಲ್ಲಿ ದೇವಸ್ಥಾನದ ಸುತ್ತ ಒಂದು ಸುತ್ತು ಉತ್ಸವ ನಡೆಯಿತು. ಭಕ್ತರು ಈ ರಥೋತ್ಸವವನ್ನು ಭಕ್ತಿಭಾವದಿಂದ ಎಳೆಯುವ ಮೂಲಕ ಧನ್ಯತೆ ಹೊಂದಿದರು.
ಲಕ್ಷ ದೀಪೋತ್ಸವ ಸಂದರ್ಭ ನಡೆಯುವ ಮೂರನೇ ದಿನ ಲಲಿತಕಲಾ ಗೋಷ್ಠಿಯಲ್ಲಿ ಸಂಜೆ 7 ರಿಂದ ಸಾದ್ವಿನಿ ಕೊಪ್ಪ ತಂಡದಿಂದ ಸುಗಮ ಸಂಗೀತ ಹಾಗೂ ರಾತ್ರಿ 8-30 ರಿಂದ ಸತ್ಯನಾರಾಯಣ ರಾಜು ಅವರಿಂದ ರಾಮಕಥಾ ನೃತ್ಯ ರೂಪಕ ನಡೆಯಲಿದೆ.