[embedyt] https://www.youtube.com/watch?v=I52sFvRbfiw[/embedyt]
ಧರ್ಮಸ್ಥಳ ಲಕ್ಷದೀಪೋತ್ಸವ ಅಂಗವಾಗಿ ಅಮೃತವರ್ಷಿಣಿ ಸಭಾಭವನದಲ್ಲಿ ಭಾನುವಾರ ಸಂಜೆ ನಡೆದ ಸರ್ವಧರ್ಮ ಸಮ್ಮೇಳನದ 88ನೇ ಅಧಿವೇಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಧರ್ಮಸ್ಥಳದ ಪ್ರಭೆ ಜಗತ್ತಿಗೆ ಬೆಳಕು ನೀಡಿದೆ. ಭಕ್ತರ ಪಾಲಿಗೆ ಇಲ್ಲಿ ಸೂಜಿಗಲ್ಲಿನ ಆಕರ್ಷಣೆ ಇದೆ. ಬೆಳಕು ಎಂಬ ಶಬ್ದಕ್ಕೆ ಇನ್ನೊಂದು ಅನ್ವರ್ಥವೇ ಧರ್ಮಸ್ಥಳ ಎಂಬುದಾಗಿದೆ. 800 ವರ್ಷಗಳ ಇತಿಹಾಸದಲ್ಲಿ ಲಕ್ಷಾಂತರ ಕುಟುಂಬಗಳಿಗೆ ಈ ಕ್ಷೇತ್ರ ಬೆಳಕು ನೀಡಿದೆ. ಧರ್ಮ, ಸಾಹಿತ್ಯ ಮತ್ತು ಸಂಸ್ಕೃತಿಗಳ ಮೇಲೆ ಅವಿಚ್ಛಿನ್ನ ಅಭಿರುಚಿ ಧರ್ಮಾಧಿಕಾರಿಗಳಿಗಿದೆ ಎಂದು ಹೇಳಿದ ಅವರು, ಮಾವನ ಧರ್ಮ, ವಿಶ್ವಮಾನವ ಧರ್ಮದ ನಮ್ಮ ಪರಂಪರೆ ಇಲ್ಲಿ ಬೆಳಗುತ್ತಿದೆ ಎಂದರು.
ಶ್ರೀಕ್ಷೇತ್ರ ಧರ್ಮಸ್ಥಳವೆಂದರೆ ವಿವಿಧ ಜಾತಿ ಮತ ಪಂಥಗಳ ಸಂಕುಚಿತ ಎಲ್ಲೆಯನ್ನು ಮೀರಿ ವಿಶಾಲ ವಿಶ್ವದ ಸರ್ವ ಜನಾಂಗಗಳ ಹಿತವನ್ನು ಬಯಸುವ ಮಾನವ ಧರ್ಮವೇ ಶ್ರೇಷ್ಠವೆಂದು ಬಗೆದು ಅನೇಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಕ್ಷೇತ್ರ. ಧರ್ಮದಲ್ಲಿ ಸತ್ವವಿದೆ, ಸತ್ಕಾರ್ಯಕ್ಕೆ ಪ್ರೇರಣೆ ಇದೆ. ಹೊರತಾಗಿ ದುಷ್ಕಾರ್ಯಗಳಿಗಲ್ಲ. ಧಾರ್ಮಿಕ ತಳಹದಿಯಲ್ಲಿ ಕೈಗೊಳ್ಳುವ ಕರ್ಮಗಳು ಸತ್ಪರಿಣಾಮವನ್ನೇ ಉಂಟು ಮಾಡುತ್ತದೆ. ಧರ್ಮವು ಎಲ್ಲರನ್ನು ಒಗ್ಗೂಡಿಸುವ ಸಾಧನ. ಧರ್ಮ ಸಮನ್ವಯತೆಗೆ ಕೊರೊನಾ ವ್ಯಾಧಿ ಉತ್ತಮ ಉದಾಹರಣೆಯಾಗಿದೆ. ಈ ರೋಗದಿಂದ ಭೀತಿಗೊಳಗಾದ ಎಲ್ಲರೂ ಸಂಯಮಿಗಳಾಗಿದ್ದಾರೆ. ಅನೇಕರು ಈ ರೋಗ ಬಾರದಂತೆ ತಮ್ಮ ಆಹಾರ ವಿಹಾರ ವಿಚಾರಗಳಲ್ಲಿ ಎಚ್ಚರಿಕೆ ವಹಿಸಿದ್ದಾರೆ. ಧರ್ಮದ ಮರ್ಮ ಇರುವುದು ಆಚರಣೆಯಲ್ಲಿ ಡಾ. ಹೆಗ್ಗಡೆ ವ್ಯಾಖ್ಯಾನಿಸಿದರು.
ಧರ್ಮೋತ್ಥಾನ ಟ್ರಸ್ಟ್ ಮೂಲಕ 270ಕ್ಕೂ ಹೆಚ್ಚು ದೇವಾಲಯಗಳ ಪುನರ್ ನಿರ್ಮಾಣ ಮಾಡಲಾಗಿದೆ. ಕ್ಷೇತ್ರದಿಂದ ನೇರವಾಗಿ ಕಳೆದ ಒಂದು ವರ್ಷದಲ್ಲಿ 1135 ದೇವಾಲಯಗಳ ಜೀರ್ಣೋದ್ಧಾರಕ್ಕೆ ಸಹಾಯಹಸ್ತ ನೀಡಲಾಗಿದೆ. ರುಡ್‌ಸೆಟ್ ಸಂಸ್ಥೆ ಮೂಲಕ 587 ತರಬೇತಿ ಕೇಂದ್ರಗಳಲ್ಲಿ 4 ಲಕ್ಷಕ್ಕೂ ಮಂದಿಗೆ ಸ್ವಉದ್ಯೋಗ ತರಬೇತಿ ನೀಡಲಾಗಿದೆ. ಈ ವರ್ಷ ಕ್ಷೇತ್ರದಿಂದ ನೇರವಾಗಿ ವೈದ್ಯಕೀಯ, ಸಾಮಾಜಿಕ, ಶೈಕ್ಷಣಿಕ ಸಹಾಯವಾಗಿ ರೂ.71 ಕೋಟಿ 23 ಲಕ್ಷ ಕೈಧರ್ಮ ನೀಡಲಾಗಿದೆ ಎಂದರು.
ಪ್ರಕೃತಿಯ ಪ್ರತಿಯೊಂದು ಚರಾಚರ ವಸ್ತುಗಳಲ್ಲೂ ಧರ್ಮವಿದೆ. ವಸ್ತುವಿನ ಮೂಲ ಗುಣ ಯಾವುದೋ ಅದು ಧರ್ಮ. ಆದರೆ ಇಂದು ಮನುಷ್ಯ ಮಾತ್ರ ಮೂಲ ಗುಣ ಮರೆತು ಧರ್ಮ ಕೈಬಿಡುತ್ತಿದ್ದಾನೆ. ಧರ್ಮದ ವಿಚಾರಗಳು ಮಾನವನಿಂದ ದೂರವಾಗದಂತೆ ನೋಡಿಕೊಳ್ಳಬೇಕಿದೆ ಎಂದರು.
ಬೆಂಗಳೂರಿನ ಕೇಶವ ಮಳಗಿ ಅವರು ಕಬೀರನ ವಿಚಾರಗಳ ಸಮಕಾಲೀನತೆ ಮತ್ತು ಭಕ್ತಿಪಂಥಗಳು ಎಂಬ ವಿಷಯದ ಬಗ್ಗೆ ಮಾತನಾಡಿದರು. ಫಾ. ಚೇತನ್ ಲೋಬೋ ಅವರು ಮಾನವೀಯತೆಯೇ ಶ್ರೇಷ್ಠ ಧರ್ಮ ಎಂಬ ವಿಚಾರದ ಬಗ್ಗೆ ಮಾತನಾಡಿದರು. ಉಪನ್ಯಾಸಕರನ್ನು ಧರ್ಮಸ್ಥಳದ ಡಿ.ಸುರೇಂದ್ರ ಕುಮಾರ್ ಗೌರವಿಸಿದರು. ಸಚಿವರು ಹಾಗೂ ಸ್ವಾಮೀಜಿಯವರನ್ನು ಡಾ. ಹೆಗ್ಗಡೆಯವರು ಕ್ಷೇತ್ರದ ಪರವಾಗಿ ಗೌರವಿಸಿದರು.
ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್, ಡಿ.ರಾಜೇಂದ್ರ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಹಾಗೂ ಉಪನ್ಯಾಸಕ ಸುನೀಲ್ ಪಂಡಿತ್ ಸನ್ಮಾನ ಪತ್ರ ವಾಚಿಸಿದರು. ಎಸ್. ಡಿ. ಎಂ. ಕಾಲೇಜಿನ ಉಪನ್ಯಾಸಕ ಡಾ. ಶ್ರೀಧರ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಲಾಯಿಲ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ಸುಧೀರ್ ಪ್ರಭು ವಂದಿಸಿದರು. ಉಜಿರೆ ನ್ಯಾಚುರೋಪತಿ ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು.