ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಇಂದಿನಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ: ಮಧ್ಯಾಹ್ನ ಪಾದಯಾತ್ರೆ

ಇಂದಿನಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ: ಮಧ್ಯಾಹ್ನ ಪಾದಯಾತ್ರೆ

ಬೆಳ್ತಂಗಡಿ: ನಾಡಿನ ಪವಿತ್ರಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಶ್ರೀಮಂಜುನಾಥ ಸ್ವಾಮಿಯ ಲಕ್ಷ ದೀಪೋತ್ಸವ ಇಂದಿನಿಂದ ಆರಂಭಗೊಳ್ಳಲಿದೆ. ಡಿ. 13 ಮತ್ತು 14 ರಂದು 88ನೇ ವರ್ಷದ ಸರ್ವಧರ್ಮ ಸಮ್ಮೇಳನ ಹಾಗೂ ಸಾಹಿತ್ಯ ಸಮ್ಮೇಳನ ನಡೆಯಲಿದೆ.

ಈ ಬಾರಿ ಸರಕಾರದ ಎಲ್ಲಾ ನಿಯಮಗಳನ್ನು ಪಾಲಿಸಿಕೊಂಡು ಸರಳ ಕಾರ್ಯಕ್ರಮ ನಡೆಯಲಿದ್ದು, ಡಿ.10ರಂದು ಶ್ರೀ ಮಂಜುನಾಥಸ್ವಾಮಿಯ ಹೊಸಕಟ್ಟೆ ಉತ್ಸವದೊಂದಿಗೆ ಲಕ್ಷದೀಪೋತ್ಸವ ಆರಂಭಗೊಂಡು ಡಿ.14ರಂದು ಗೌರಿಮಾರುಕಟ್ಟೆ ಉತ್ಸವದೊಂದಿಗೆ ಸಂಪನ್ನಗೊಳ್ಳಲಿದೆ.

ಡಿ.10 ರಿಂದ ಡಿ. 14ರವರೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥಸ್ವಾಮಿಯ ವಿಹಾರ ಹಾಗೂ ಉತ್ಸವಗಳು ನಡೆಯಲಿದೆ. ಈ ಐದು ದಿನಗಳಲ್ಲೂ ರಾತ್ರಿ 9 ಗಂಟೆಗೆ ಉತ್ಸವಗಳು ನಡೆಯುತ್ತದೆ. ಹೊಸಕಟ್ಟೆ ಉತ್ಸವ, ಕೆರೆಕಟ್ಟೆ ಉತ್ಸವ, ಲಲಿತೋದ್ಯಾನ ಉತ್ಸವ, ಕಂಚಿಮಾರುಕಟ್ಟೆ ಉತ್ಸವ ಹಾಗೂ ಗೌರಿಮಾರುಕಟ್ಟೆ ಉತ್ಸವ ನೆರವೇರಲಿದೆ. ಡಿ. 15ರಂದು ಶ್ರೀ ಚಂದ್ರನಾಥಸ್ವಾಮಿಯ ಸಮವಸರಣ ಪೂಜೆ ನಡೆಯಲಿದೆ.

ಸಕಲ ಸಿದ್ಧತೆ: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದ ಯಶಸ್ವಿ ಕಾರ್ಯಕ್ರಮಕ್ಕೆ ಕ್ಷೇತ್ರದಿಂದ ಸಮಿತಿಗಳನ್ನು ರಚಿಸಲಾಗಿದ್ದು, ಸಕಲ ಸಿದ್ದತೆ ಗಳನ್ನು ನಡೆಸಲಾಗಿದೆ. ದೇವರು ಸವಾರಿ ಮಾಡುವ ರಥ ಬೀದಿ, ರಾಜ ಬೀದಿಗಳನ್ನು, ದೇವಸ್ಥಾನ, ಬೀಡು, ಅನ್ನಪೂರ್ಣ ಸೇರಿದಂತೆ ಕ್ಷೇತ್ರದಲ್ಲಿ ವಿದ್ಯುದ್ದೀಪಗಳಿಂದ ಅಲಂಕೃತಗೊಳಿಸಲಾಗಿದೆ.

ಕ್ಷೇತ್ರದಲ್ಲಿ ಕೊರೋನಾ ಹಿನ್ನಲೆಯಲ್ಲಿ ಭಕ್ತರ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಕ್ಷೇತ್ರದಿಂದಲೂ ಸುರಕ್ಷತೆಯ ನಿಟ್ಟಿನಲ್ಲಿ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗುತ್ತಿದೆ. ಕ್ಷೇತ್ರಕ್ಕೆ ಬರುವ ಭಕ್ತರು ಮಾಸ್ಕ್ ಕಡ್ಡಾಯ ಧಾರಣೆ ಮಾಡಬೇಕು ಸುರಕ್ಷತೆಯ ದೃಷ್ಟಿಯಿಂದ ಕ್ಷೇತ್ರದಿಂದ ವಿನಂತಿಯಾಗಿದೆ.

ವೀಕ್ಷಣೆಗೆ ವ್ಯವಸ್ಥೆ: ವಸ್ತು ಪ್ರದರ್ಶನ ಹಾಗೂ ಬೀದಿ ಬದಿಯ ಅಂಗಡಿಗಳು ಇರುವುದಿಲ್ಲ. ಸರಕಾರದ ನಿಯಮದಂತೆ ಅಗತ್ಯ ಕ್ರಮಗಳೊಂದಿಗೆ ದೀಪೋತ್ಸವ ಸರಳವಾಗಿ ಆಚರಣೆಗೊಳ್ಳಲಿದೆ. ಈ ಪ್ರಯುಕ್ತ ಶ್ರೀಕ್ಷೇತ್ರದಲ್ಲಿ ನಡೆಯುವ ಎಲ್ಲಾ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮನೆಯಲ್ಲೇ ಕುಳಿತು ಆನ್‌ಲೈನ್ ಮೂಲಕ ವೀಕ್ಷಣೆ ಮಾಡಲು ಅವಕಾಶವಿದೆ. ’ಶ್ರೀ ಕ್ಷೇತ್ರ ಧರ್ಮಸ್ಥಳ’ ಯೂಟ್ಯೂಬ್ ಹಾಗೂ ಫೇಸ್‌ಬುಕ್ ನೇರ ವೀಕ್ಷಣೆಗೆ ಕ್ಷೇತ್ರದಿಂದ ಅವಕಾಶ ಮಾಡಲಾಗಿದೆ. ಇಂದು ಪಾದಯಾತ್ರೆ: ಶ್ರೀಕ್ಷೇತ್ರ ಧರ್ಮಸ್ಥಳ ಲಕ್ಷ ದೀಪೋತ್ಸವ ಪಾದಯಾತ್ರಿ ಸಮಿತಿ ವತಿಯಿಂದ ಇಂದು(ಡಿ.10) ಸಂಜೆ ಉಜಿರೆಯಿಂದ ಧರ್ಮಸ್ಥಳದ ವರೆಗೆ 8ನೇ ವರ್ಷದ ಪಾದಯಾತ್ರೆ ನಡೆಯಲಿದೆ. ಕೋವಿಡ್ ಹಿನ್ನೆಲೆಯಲ್ಲಿ ಭಾಗವಹಿಸುವ ಪಾದಯಾತ್ರಿಗಳು ಸರಕಾರದ ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಪಾದಯಾತ್ರಿ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!