Home › ಉಪ್ಪಿನಂಗಡಿಯಲ್ಲಿ 40 ವರ್ಷ ಹಳೆಯ ಗ್ರೆನೇಡ್ ಪತ್ತೆ!: ಸುರಕ್ಷಿತ ಸ್ಥಳದಲ್ಲಿರಿಸಿ ಮಾಹಿತಿ ನೀಡಿದ ಮಾಜಿ ಸೈನಿಕ: ಸಾರ್ವಜನಿಕರಲ್ಲಿ ಮೂಡಿದ ಆತಂಕ, ಪೊಲೀಸರಿಂದ ತನಿಖೆ
ಉಪ್ಪಿನಂಗಡಿಯಲ್ಲಿ 40 ವರ್ಷ ಹಳೆಯ ಗ್ರೆನೇಡ್ ಪತ್ತೆ!: ಸುರಕ್ಷಿತ ಸ್ಥಳದಲ್ಲಿರಿಸಿ ಮಾಹಿತಿ ನೀಡಿದ ಮಾಜಿ ಸೈನಿಕ: ಸಾರ್ವಜನಿಕರಲ್ಲಿ ಮೂಡಿದ ಆತಂಕ, ಪೊಲೀಸರಿಂದ ತನಿಖೆ
ONLINE PUDU / Sunday, November 07, 2021
ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಬಳಿ ಮಾಜಿ ಸೈನಿಕನ ಮನೆ ಬಳಿ ಗ್ರೆನೇಡ್ಗಳು ಪತ್ತೆಯಾಗಿದ್ದು, ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭೂಸೇನಾ ರೆಜಿಮೆಂಟ್ನಲ್ಲಿ ಎಸ್.ಸಿ.ಒ. ಆಗಿ ನಿವೃತ್ತಿ ಪಡೆದ ಜಯಕುಮಾರ್ ಪೂಜಾರಿ ಅವರ ಮನೆಯ ಬಳಿ ಅಪಾಯಕಾರಿ ಗ್ರೆನೇಡ್ಗಳು ಪತ್ತೆಯಾಗಿವೆ. ಶನಿವಾರ ಸಂಜೆ 6 ಗಂಟೆಯ ಸುಮಾರಿಗೆ ಜಯಕುಮಾರ್ ಪೂಜಾರಿಯವರು ಉಪ್ಪಿನಂಗಡಿಯಿಂದ ಮನೆಗೆ ತೆರಳುತ್ತಿದ್ದ ವೇಳೆ ಮನೆ ಪಕ್ಕದಲ್ಲಿ ಹರಡಿರುವ ಸ್ಥಿತಿಯಲ್ಲಿ 5 ಗ್ರೆನೇಡ್ ಪತ್ತೆಯಾಗಿದೆ. ಭೂಸೇನಾ ರೆಜಿಮೆಂಟ್ನಲ್ಲಿ ಎಸಿಒ ಆಗಿದ್ದರಿಂದ ಅದು ಗ್ರೆನೇಡ್ ಎಂಬುವುದನ್ನು ಕೂಡಲೇ ಪತ್ತೆಹಚ್ಚಿದ್ದಾರೆ. ಸಾರ್ವಜನಿಕರಿಗೆ ಅಪಾಯ ಉಂಟಾಗಬಹುದು ಎಂದು ಅದನ್ನು ಮನೆಯ ಅಂಗಳದ ಮೂಲೆಯಲ್ಲಿಟ್ಟು ಪೊಲೀಸರಿಗೆ ದೂರು ನೀಡಿದ್ದಾರೆ.
ದ.ಕ. ಜಿಲ್ಲಾ ಎಸ್ಪಿ ಋಷಿಕೇಶ ಸೋನವಣೆ ಅವರು ಪರಿಶೀಲಿಸಿ ಪ್ರತಿಕ್ರಿಯೆ ನೀಡಿದ್ದು, "ಇದು 40 ವರ್ಷಗಳ ಹಳೆಯ ಗ್ರೆನೇಡ್ ಆಗಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ. ತನಿಖೆ ಪ್ರಗತಿಯಲ್ಲಿದೆ" ಎಂದು ಹೇಳಿದ್ದಾರೆ. ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.