ಬೆಳ್ತಂಗಡಿ: ತಾಲೂಕಿನ ಸಾಲು ಮರದ ತಿಮ್ಮಕ್ಕ ಉದ್ಯಾನವನಕ್ಕೆ ಅರಣ್ಯ ಇಲಾಖೆ ಸಿ. ಸಿ. ಕ್ಯಾಮರಾ ಅಳವಡಿಕೆ ಮಾಡಿದ್ದು, ಸ್ಥಳೀಯ ಜನತೆಗೆ ಮುಜುಗರ ಉಂಟಾಗದಂತೆ ಅದೇ ರೀತಿ ಯಾವುದೇ ಈ ಪರಿಸರ ಅನಾರೋಗ್ಯಕರ ಬೆಳವಣಿಗೆಗಳಿಗೆ ಬಳಕೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಈ ಮೂಲಕ ಇನ್ನು ಮುಂದೆ ನೈಜ ಪರಿಸರ ಪ್ರೇಮಿಗಳು ಪಾರ್ಕ್ ಪರಿಸರ ಆಸ್ವಾದಿಸಲು, ಹಿರಿಯ ನಾಗರೀಕರು, ಸ್ಥಳೀಯ ವ್ಯಕ್ತಿಗಳು ನೆಮ್ಮದಿಯಾಗಿ ವಿಹಾರ ನಡೆಸಲು ಅನುಕೂಲವಾಗುವಂತೆ ಕ್ರಮ ಕೈಗೊಳ್ಳಲಾಗಿದೆ.
ಈ ವರದಿ ಕುರಿತು ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಕಾಲಿಕವಾಗಿ ಸ್ಪಂದಿಸಿದೆ. ಪೊಲೀಸ್ ಇಲಾಖೆ ವರದಿ ಪ್ರಕಟವಾದ ದಿನದಿಂದಲೇ ಗಸ್ತು ಓಡಾಟ ಹೆಚ್ಚಿಸಿತ್ತು. ಅದೇ ರೀತಿ ಅರಣ್ಯ ಇಲಾಖೆ ಈಗಾಗಲೇ ಉದ್ಯಾನವನದ ಆಯಕಟ್ಟಿನ ಜಾಗಗಳಲ್ಲಿ ಸಿ. ಸಿ. ಕ್ಯಾಮರಾ ಅಳವಡಿಸಿದೆ. ಬೆಳ್ತಂಗಡಿ ಪೊಲೀಸರೂ ಹೆಚ್ಚವರಿ ಗಸ್ತಿನ ಜೊತೆಗೆ ದಿನಕ್ಕೆರಡು ಬಾರಿ ಕಡ್ಡಾಯ ಅನಿರೀಕ್ಷಿತ ಭೇಟಿ ನೀಡಿ ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದ ರೀತಿಯಲ್ಲಿ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ.
ಅರಣ್ಯ ಇಲಾಖೆಯಿಂದ ಸಧ್ಯ ಆಯಕಟ್ಟಿನ 8 ಜಾಗಗಳಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸಲಾಗಿದೆ. ಮುಖ್ಯವಾಗಿ ಪ್ರವೇಶ ದ್ವಾರದ ಬಳಿಯೇ ಕ್ಯಾಮರಾ ಅಳವಡಿಸಲಾಗಿದ್ದು ಒಳಗೆ ಆಗಮಿಸುವವರ ಖಚಿತ ಹಾಗೂ ಸ್ಪಷ್ಟ ಛಾಯಾಚಿತ್ರ ಲಭಿಸಲಿದೆ. ಜೊತೆಗೆ ಪಾರ್ಕ್ ಒಳಭಾಗದಲ್ಲೂ ಯಾವುದೇ ಸಮಸ್ಯೆ ಉಂಟಾಗಬಹುದಾದ ಪ್ರದೇಶ ಹಾಗೂ ಕೆಲ ನಿರ್ದಿಷ್ಟ ಸ್ಥಳದಲ್ಲಿ ಕ್ಯಾಮರಾ ಅಳವಡಿಕೆ ಮಾಡಿ ನಡೆಯಬಹುದಾದ ಹೆಚ್ಚುವರಿ ಸಮಸ್ಯೆಗಳಿಗೆ ತಡೆ ಹಾಕಲು ಇಲಾಖೆ ಮುನ್ನೆಚ್ಚರಿಕಾ ಕ್ರಮಕೈಗೊಂಡಿದೆ. ಈ ಮೂಲಕ ಸರಕಾರಿ ಇಲಾಖೆಗಳು ಜನಸ್ನೇಹಿ ಯೋಚನೆ ಹಾಗೂ ಯೋಜನೆಗಳ ಮೂಲಕ ಪವಿತ್ರವಾಗಿರುವ 'ಸಾಲುಮರದ ತಿಮ್ಮಕ್ಕ ಟ್ರೀ ಪಾರ್ಕ್' ಉತ್ತಮ ಕಾರ್ಯಗಳಿಗೆ ಸದೃಢ ಮನಸ್ಸನ್ನು ಕಟ್ಟಲು ಸಹಾಯವಾಗುವಂತೆ ರೂಪಿಸಲು ಶ್ರಮಿಸುತ್ತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿವೆ.
ಇದನ್ನೂ ಓದಿ:http://prajaprakasha.com/?p=16032