ಬೆಳ್ತಂಗಡಿ: ದೃಢಸಂಕಲ್ಪದಿಂದ ಬದುಕಿನಲ್ಲಿ ನವಚೈತನ್ಯ ಮೂಡಿ ಬಂದು ಜೀವನ ಪಾವನವಾಗುತ್ತದೆ. ಮದ್ಯ ವ್ಯಸನದಂತಹ ಸಣ್ಣ ದುಶ್ಚಟವಿದ್ದರೂ, ವಿಕಲ್ಪದಿಂದ ವ್ಯಕ್ತಿತ್ವದ ಸರ್ವನಾಶವಾಗುತ್ತದೆ ಎಂದು ಹೇಮಾವತಿ ವೀ. ಹೆಗ್ಗಡೆ ಹೇಳಿದರು.
ವಿಧಾನ ಪರಿಷತ್ ಸದಸ್ಯ ಕೆ. ಪ್ರಾತಾಪಸಿಂಹ ನಾಯಕ್ ಮಾತನಾಡಿ, ಜನಜಾಗೃತಿ ವೇದಿಕೆ ಕಾರ್ಯಕ್ಕೆ ಆರಂಭದಲ್ಲಿ ವಿರೋಧ, ಟೀಕೆ, ಅಪಹಾಸ್ಯ ವ್ಯಕ್ತವಾದರೂ ಈಗ ಸಮಾಜದಲ್ಲಿ ಕ್ರಾಂತಿಕಾರಿ ಪರಿವರ್ತನೆಯಾಗಿದೆ ಎಂದು ಹೇಳಿ ನವಜೀವನ ಸಮಿತಿ ಕಾರ್ಯಕರ್ತರ ಸೇವೆಯನ್ನು ಶ್ಲಾಘಿಸಿದರು. ಉಡುಪಿಯ ಖ್ಯಾತ ಮನೋವೈದ್ಯ ಡಾ. ಪಿ.ವಿ. ಭಂಡಾರಿ ಮಾತನಾಡಿ, ಸರ್ವ ರೋಗಕ್ಕೆ ಸಾರಾಯಿ ಒಳ್ಳೆಯದು, ಮದ್ಯಪಾನದಿಂದ ಆರೋಗ್ಯ ರಕ್ಷಣೆ ಆಗುತ್ತದೆ, ಬಿಯರ್ ಕುಡಿದರೆ ಚಂದ ಆಗುತ್ತಾರೆ, ಬಿಳಿ ಆಗುತ್ತಾರೆ ಇತ್ಯಾದಿ ತಪ್ಪು ನಂಬಿಕೆ, ಹೇಳಿಕೆಗಳಿಂದ ಕೆಲವರು ಮದ್ಯಪಾನಕ್ಕೆ ಬಲಿಯಾಗುತ್ತಾರೆ. ಇಂತಹ ಅನಧಿಕೃತ ತಪ್ಪು ಹೇಳಿಕೆಗಳಿಗೆ ಯಾರೂ ಬಲಿಯಾಗಬಾರದು ಎಂದು ಅವರು ಹೇಳಿದರು. ಮದ್ಯವ್ಯಸನಿಗಳಿಗೆ ಮನೋವೈದ್ಯರ ಶುಶ್ರೂಷೆ ಅಗತ್ಯವಾಗಿದೆ ಎಂದು ಹೇಳಿದರು. ಯಾರೂ ಕುಡಿದ ಮೇಳೆ ತನಗೆ ಫೋನ್ ಮಾಡಬೇಡಿ. ಕುಡಿಯುವ ಮೊದಲೆ ಫೋನ್ ಮಾಡಿ ಎಂದು ಅವರು ಸಲಹೆ ನೀಡಿದರು. ಜನಜಾಗೃತಿ ವೇದಿಕೆಯ ಸೇವೆಯನ್ನು ಅವರು ಶ್ಲಾಘಿಸಿದರು. ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಮದ್ಯಪಾನ ನಂಬಿಕೆ, ಪ್ರೀತಿ-ವಿಶ್ವಾಸವನ್ನು ಕೆಡಿಸುವುದಲ್ಲದೆ ವ್ಯಕ್ತಿತ್ವದ ನಾಶ ಮಾಡುತ್ತದೆ. ಮದ್ಯ ವ್ಯಸನ ಮುಕ್ತರಾಗಿ ನೂರು ದಿನ ಪೂರೈಸಿದವರು ಧರ್ಮಸ್ಥಳಕ್ಕೆ ಬಂದು ಪರಿಶುದ್ದ್ಧ ಮನದಿಂದ ದೇವರ ದರ್ಶನ ಮಾಡಿ ಪ್ರಾರ್ಥನೆ ಸಲ್ಲಿಸಿರುವುದರಿಂದ ಪುನೀತರಾಗಿ ಪವಿತ್ರಾತ್ಮರಾಗಿದ್ದೀರಿ. ದೇವರು ಪೂರ್ಣ ರಿತಿಯಲ್ಲಿ ಎಲ್ಲರಿಗೂ ಅನುಗ್ರಹ ಮಾಡಿದ್ದಾರೆ ಎಂದು ಹೇಳಿದರು. ಈ ವರೆಗೆ ವ್ಯಸನ ಮುಕ್ತರಾದವರೆಲ್ಲ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದ್ದಾರೆ. ಹೊಸ ಮನೆ ಕಟ್ಟಿಸಿ, ಹೊಸ ವಾಹನ ಖರೀದಿಸಿದ್ದಾರೆ ಎಂದು ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿದರು. ಆರು ವಿಶೇಷ ಸಾಧಕರಿಗೆ “ಜಾಗೃತಿ ಅಣ್ಣ” ಮತ್ತು “ಜಾಗೃತಿ ಮಿತ್ರ” ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಂಗಳೂರಿನ ಫಾದರ್ ಮುಲ್ಲರ್ಸ್ ಕಾಲೇಜಿನ ಡಾ. ಶಿಜಿ, ಪಿ.ಜೆ. ಬರೆದ ಸಂಶೋಧನಾ ಪ್ರಬಂಧವನ್ನು ಹೆಗ್ಗಡೆಯವರಿಗೆ ಅರ್ಪಿಸಿದರು. ಸಮಾವೇಶದಲ್ಲಿ 1520 ಮಂದಿ ನವಜೀವನ ಸಮಿತಿ ಸದಸ್ಯರು ಭಾಗವಹಿಸಿದರು. ಮಾಣಿಲದ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ, ಡಾ. ಶ್ರೀನಿವಾಸ ಭಟ್ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಉಪಸ್ಥಿತರಿದ್ದರು. ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ಪಾಯ್ಸ್ ಸ್ವಾಗತಿಸಿದರು. ವೇದಿಕೆಯ ರಾಜ್ಯಾದ್ಯಕ್ಷ ರಾಮಸ್ವಾಮಿ ಧನ್ಯವಾದವಿತ್ತರು.