ನಮ್ಮ ಸನಾತನ ಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ಪ್ರತಿ ಮನೆಯಲ್ಲಿಯೂ ನಿತ್ಯವೂ ಸಂಜೆ ಒಂದು ಗಂಟೆಯಾದರೂ ಭಜನೆ ಮಾಡಬೇಕು ಎಂದರು. ಭಜನಾ ಸಂಸ್ಕೃತಿಯನ್ನು ಮಕ್ಕಳಿಗೂ ಕಲಿಸಿ ಸಭ್ಯ, ಸುಸಂಸ್ಕೃತ ನಾಗರಿಕರನ್ನಾಗಿ ರೂಪಿಸಬೇಕು. ಭಜನಾ ತರಬೇತಿ ಕಮ್ಮಟದ ಮೂಲಕ ಡಿ. ವೀರೇಂದ್ರ ಹೆಗ್ಗಡೆಯವರು ಪ್ರತಿ ಮನೆಯಲ್ಲಿಯೂ ಭಜನಾ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿದ್ದಾರೆ ಎಂದು ಅಭಿನಂದಿಸಿದರು.
ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನಗೊಂಡಿರುವ ಹೆಗ್ಗಡೆಯವರನ್ನು ಸ್ವಾಮೀಜಿ ಶ್ರೀ ಕೃಷ್ಣ ದೇವರ ಪ್ರಸಾದ ನೀಡಿ, ಶಾಲು ಹೊದಿಸಿ ಗೌರವಿಸಿದರು. ತುಳು ಭಜನೆಯೊಂದನ್ನು ಸ್ವಾಮೀಜಿ ಸುಶ್ರಾವ್ಯವಾಗಿ ಹಾಡಿದ್ದು ವಿಶೇಷವಾಗಿತ್ತು. ಚಲನಚಿತ್ರ ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್ ಗೀತೆಯೊಂದನ್ನು ಹಾಡಿದರು. ಸಾಂಸ್ಕತಿಕ ಹಿನ್ನೆಲೆಯ ಸಂಗೀತ ನಮ್ಮ ಬದುಕಿನಲ್ಲಿ ಧನಾತ್ಮಕ ಪರಿವರ್ತನೆ ಮಾಡಿ ಮಾನಸಿಕ ಶಾಂತಿ, ನೆಮ್ಮದಿ ನೀಡುತ್ತದೆ ಎಂದು ಅವರು ಹೇಳಿದರು.
ಬೆಂಗಳೂರಿನ ವಾಸುದೇವ ರೆಡ್ಡಿ ಮತ್ತು ಮನೆಯವರು ಡಿ.ವೀರೇಂದ್ರ ಹೆಗ್ಗಡೆಯವರಿಗೆ ರಜತ ಕಿರೀಟ ಮತ್ತು ರಜತ ಗದೆ ಅರ್ಪಿಸಿ ಗೌರವಿಸಿದರು. ಗೌರವ ಡಾಕ್ಟರೇಟ್ ಪಡೆದ ಹೇಮಾವತಿ ಹೆಗ್ಗಡೆಯವರನ್ನೂ ಗೌರವಿಸಿದರು. ಭಜನಾ ಕಮ್ಮಟದ ಕಾರ್ಯದರ್ಶಿ ಸುರೇಶ್ ಮೊಯ್ಲಿ ವರದಿ ಮಂಡಿಸಿ, 174 ಭಜನಾ ಮಂಡಳಿಗಳಿಂದ 184 ಮಂದಿ ಪುರುಷರು ಹಾಗೂ 138 ಮಹಿಳೆಯರು ಸೇರಿದಂತೆ ಒಟ್ಟು 322 ಶಿಬಿರಾರ್ಥಿಗಳು ಕಮ್ಮಟದಲ್ಲಿ ಭಾಗವಹಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಧರ್ಮವನ್ನು ನಾವು ಕಾಪಾಡಿದರೆ, ಧರ್ಮ ನಮ್ಮನ್ನು ಸದಾ ರಕ್ಷಣೆ ಮಾಡುತ್ತದೆ. ಧರ್ಮೋ ರಕ್ಷತಿ ರಕ್ಷಿತಃ ಅಂದರೆ ಧರ್ಮ ಸದಾ ನಾವು ಧರಿಸಿ ಆಚರಿಸಿದರೆ, ಧರ್ಮ ನಮ್ಮನ್ನು ಕಾಪಾಡುತ್ತದೆ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ಸಂಸ್ಕೃತಿಯನ್ನು ಉಳಿಸುವುದೂ ಅತ್ಯಂತ ಶ್ರೇಷ್ಠವಾದ ಧರ್ಮವಾಗಿದೆ. ಧರ್ಮಸ್ಥಳದಲ್ಲಿ ಪ್ರತಿ ವರ್ಷ ಶಿಸ್ತು ಮತ್ತು ವ್ಯವಸ್ಥಿತವಾಗಿ ಭಜನಾ ಕಮ್ಮಟ ಆಯೋಜಿಸಿ ಭಜನಾ ಸಂಸ್ಕೃತಿ ಉಳಿಸಿ ಬೆಳೆಸಿದ ಧನ್ಯತಾ ಭಾವ ಮೂಡಿ ಬಂದಿದೆ. ಮುಂದಿನ ಪೀಳಿಗೆಯೂ ಭಜನಾ ಸಂಸ್ಕೃತಿಯನ್ನು ಬೆಳೆಸಬೇಕು ಎಂದು ಅವರು ಸಲಹೆ ನೀಡಿದರು. ರಾಗ, ತಾಳ, ಲಯ ಬದ್ಧವಾಗಿ ಭಜನೆ ಹಾಡುವುದರ ಮೂಲಕ ದೇವರನ್ನು ಆತ್ಮೀಯರನ್ನಾಗಿ ಮಾಡಬಹುದು. ಭಜನೆಯಲ್ಲಿ ಪಾಶ್ಚಾತ್ಯ ಸಂಗೀತ ಹಾಗೂ ಡಿ.ಜೆ. ಬಳಸಬಾರದು ಎಂದು ಅವರು ಸಲಹೆ ನೀಡಿದರು. ಭಜನೆ ಮೂಲಕ ಉತ್ತಮ ಸಂಸ್ಕಾರ ಮೂಡಿ ಬರಬೇಕು ಎಂದು ಹೆಗ್ಗಡೆಯವರು ಹಾರೈಸಿದರು. ಹೇಮಾವತಿ ವೀ. ಹೆಗ್ಗಡೆ ಮತ್ತು ಮಾಣಿಲದ ಮೋಹನದಾಸ ಸ್ವಾಮೀಜಿ ಉಪಸ್ಥಿತರಿದ್ದರು. ಭಜನಾ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿದರು. ನಿವೃತ್ತ ಶಿಕ್ಷಕ ಧರ್ಣಪ್ಪ ವಂದಿಸಿದರು. ಶ್ರೀನಿವಾಸರಾವ್ ಧರ್ಮಸ್ಥಳ ಮತ್ತು ದಿನರಾಜ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.