ಕೊಕ್ಕಡದ ಪವರ್ ಮ್ಯಾನ್ ಗಳಾದ ದುಂಡಪ್ಪ ಜಂಗಪ್ಪಗೊಳ ಮತ್ತು ಉಮೇಶ್ ಎಂಬವರ ಮೇಲೆ ವಿದ್ಯುತ್ ಬಿಲ್ ವಿಚಾರದಲ್ಲಿ ಧರ್ಮಸ್ಥಳದ ಅಜುಕುರಿ ನಿವಾಸಿ ಲಾರಿ ಮಾಲೀಕ&ಚಾಲಕನಾಗಿರುವ ಆರೋಪಿ ರಿಜೇಶ್(41) ಎಂಬಾತ ಮಾರಣಾಂತಿಕ ಹಲ್ಲೆ ನಡೆಸಿದ್ದ ಬಳಿಕ ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಘಟನೆ ವಿವರಹತ್ಯಡ್ಕ ಗ್ರಾಮದ ಅಡ್ಕಾಡಿ ನಿವಾಸಿ ದಿ. ಕಾಂತು ಪೂಜಾರಿ ಎಂಬುವವರ ಹೆಸರಿನ ವಿದ್ಯುತ್ ಶುಲ್ಕ 3530 ಇದ್ದು, ಇದನ್ನು ಪಾವತಿಸದ ಹಿನ್ನೆಲೆ ಸೆಪ್ಟೆಂಬರ್ 19ರಂದು ಮಧ್ಯಾಹ್ನ ಪವರ್ ಮ್ಯಾನ್ ಉಮೇಶ್ ದಿ. ಕಾಂತು ಪೂಜಾರಿ ಅವರ ಮನೆಗೆ ತೆರಳಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಈ ಸಂದರ್ಭ ಅವರ ಮನೆ ಅಳಿಯ ಮನೆಯಲ್ಲಿ ಇರಲಿಲ್ಲ. ಗೂಡ್ಸ್ ಲಾರಿ ಚಾಲಕರಾಗಿರುವ ರಿಜೀಶ್ ನಿಗೆ ಮನೆಯವರು ಫೋನ್ ಹಾಯಿಸಿ ಪವರ್ ಮ್ಯಾನ್ಗಳಿಗೆ ಮಾತನಾಡಲು ಹೇಳಿದ್ದಾರೆ. ಫೋನಿನಲ್ಲಿ ಪವರ್ ಮ್ಯಾನ್ ಉಮೇಶ್ ರವರಿಗೆ ಕೊಲೆ ಬೆದರಿಕೆಯನ್ನು ಆತ ಹಾಕಿದ್ದಾನೆ. ಇದನ್ನು ಉಮೇಶ್ ರವರು ಮೇಲಾಧಿಕಾರಿಗಳಿಗೆ ತಿಳಿಸಿದ್ದಾರೆ. ಈ ಬಗ್ಗೆ ಕೊಕ್ಕಡ ಜೆಇ ಕೃಷ್ಣೇಗೌಡ ಈ ಬಗ್ಗೆ ತಾನು ಪರಿಶೀಲಿಸುವುದಾಗಿ ತಿಳಿಸಿದ್ದಾರೆ. ಈ ಮಧ್ಯೆ ಸೆಪ್ಟೆಂಬರ್ 22ರಂದು ದಿ. ಕಾಂತು ಪೂಜಾರಿಯವರ ಮನೆಯವರು ವಿದ್ಯುತ್ ಶುಲ್ಕ ಪಾವತಿಸಿ, ಮರು ಸಂಪರ್ಕವನ್ನು ನೀಡುವಂತೆ ಆದೇಶವನ್ನು ಮೆಸ್ಕಾಂ ಕಚೇರಿಗೆ ತಲುಪಿಸಿದ್ದಾರೆ. ಆ ಪ್ರಕಾರ ಪವರ್ ಮ್ಯಾನ್ ಉಮೇಶ್ ರವರು ದಿ.ಕಾಂತು ಪೂಜಾರಿ ಅವರ ಮನೆಗೆ ಮರು ಸಂಪರ್ಕವನ್ನು ನೀಡಿ ಬಂದಿದ್ದಾರೆ. ಗುರುವಾರ ಸಂಜೆ ಕರ್ತವ್ಯ ಮುಗಿಸಿ ರಾತ್ರಿ ಕೊಕ್ಕಡ ಜಂಕ್ಷನ್ ನಲ್ಲಿ ಉಮೇಶ್ ಹಾಗೂ ಅವರ ಸಹೋದ್ಯೋಗಿಗಳು ದಿನಸಿ ಸಾಮಗ್ರಿಗಳನ್ನು ಖರೀದಿಸುವ ವೇಳೆ ಲಾರಿ ಚಾಲಕರಾಗಿರುವ ರಿಜಿಶ್ ಉಮೇಶ್ ಯಾರೆಂದು ಪವರ್ ಮ್ಯಾನ್ಗಳನ್ನು ಪ್ರಶ್ನಿಸಿದ್ದಾರೆ. ಈ ಸಂದರ್ಭ ಸ್ಥಳದಲ್ಲಿಯೇ ಇದ್ದ ಉಮೇಶ್ ತಾನೆ ಎಂದು ಪರಿಚಯಿಸಿಕೊಂಡಿದ್ದಾರೆ. ಈ ಸಂದರ್ಭ ಸ್ಥಳದಲ್ಲಿ ಅವಾಚ್ಯ ಶಬ್ದಗಳಿಂದ ಉಮೇಶ್ ರವರನ್ನು ನಿಂದಿಸಿ ಹಲ್ಲೆಗೆ ರಿಜೀಶ್ ಮುಂದಾದರು. ಈ ಸಂದರ್ಭ ಸಹೋದ್ಯೋಗಿಯಾದ ಉಪ್ಪಾರಪಳಿಕೆಯ ಪವರ್ ಮ್ಯಾನ್ ದುಂಡಪ್ಪ ಮಧ್ಯಪ್ರವೇಶಿಸಿ ಮಾತುಕತೆ ನಡೆಸಿ ಸಮಾಧಾನ ಸಿದ್ದಾರೆ. ಪರಿಸ್ಥಿತಿ ಶಾಂತಗೊಳಿಸಿ, ತೆರಳುವಾಗ ಪಕ್ಕದಲ್ಲಿ ಇದ್ದ ಸೋಡಾ ಬಾಟಲಿಯಿಂದ ರಿಜೀಶ್ ದುಂಡಪ್ಪ ಅವರ ತಲೆಗೆ ಬಲವಾಗಿ ಹೊಡೆದಿದ್ದಾರೆ. ಈ ಸಂದರ್ಭದಲ್ಲಿ ಗಂಭೀರ ಗಾಯಗೊಂಡ ಅವರನ್ನು ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಧರ್ಮಸ್ಥಳ ಪೊಲೀಸ್ ಠಾಣಾ ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ, ಆರೋಪಿಯನ್ನು ವಶಕ್ಕೆ ಪಡೆದಿದ್ದರು.