ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಸ್ವ-ಸಹಾಯ ಸಂಘಗಳ ಮೂಲಕ ಮಹಿಳಾ ಸಬಲೀಕರಣಕ್ಕೆ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆಯವರು ನೀಡಿದ ಕೊಡುಗೆಯನ್ನು ಅವರು ಶ್ಲಾಘಿಸಿ ಅಭಿನಂದಿಸಿದರು. ಧರ್ಮಸ್ಥಳದ ಸೇವಾಕಾಯಕ ವಿಶ್ವಕ್ಕೆ ಮಾದರಿ ಹಾಗೂ ಅನುಕರಣೀಯವಾಗಿದ್ದು ಇದರಿಂದ ಇಂದಿನ ಯುವಜನತೆ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸುವಂತಾಗಲಿ’ ಎಂದು ಸಚಿವರು ಹಾರೈಸಿದರು.
ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ‘ಧರ್ಮವು ಶಾಶ್ವತವಾಗಿದ್ದು, ಸುಖ-ದುಃಖಗಳು ತಾತ್ಕಾಲಿಕವಾಗಿವೆ. ಮಾನವೀಯತೆ ಮತ್ತು ಸಮನ್ವಯತೆ ಧರ್ಮದ ಮೂಲ ಉದ್ದೇಶವಾಗಿದ್ದು ನಮ್ಮ ಸಾರ್ಥಕ ಬದುಕಿಗೆ ಪ್ರೇರಣೆ ನೀಡುವ ಸಾಧನವಾಗಿದೆ. ಜ್ಞಾನ ಸಂಗ್ರಹವೇ ನಮ್ಮ ಬದುಕಿನ ಗುರಿಯಾಗಬೇಕು. ಧರ್ಮ ಮತ್ತು ನೈತಿಕತೆ ಮೂಲಕ ಚಾರಿತ್ರ‍್ಯ ನಿರ್ಮಾಣವಾಗಬೇಕು ಎಂದು ಸಲಹೆ ನೀಡಿದ ಅವರು ರಾಷ್ಟ್ರ ನಿರ್ಮಾಣದಲ್ಲಿ ಮಾನವೀಯ ಮೌಲ್ಯಗಳ ಪಾತ್ರ ಮುಖ್ಯವಾಗಿದ್ದು, ಪ್ರತಿಯೊಬ್ಬರೂ ಧರ್ಮ ಮತ್ತು ನೈತಿಕತೆಯ ನೆಲೆಯಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಧರ್ಮದ ಮರ್ಮವನ್ನರಿತು ಬಾಳಿದಾಗ, ಸಕಲ ಸಂಕಷ್ಟಗಳಿAದ ಮುಕ್ತಿ ದೊರಕಿ ಜೀವನ ಪಾವನವಾಗುತ್ತದೆ. ವಿವಿಧ ಧರ್ಮಗಳ ಸಾರ ಮತ್ತು ಸಂದೇಶವನ್ನು ಅರಿತು ಸರ್ವಧರ್ಮ ಸಮನ್ವಯದೊಂದಿಗೆ ಸಾಮರಸ್ಯವನ್ನು ಸಾಧಿಸುವುದೇ ಸರ್ವಧರ್ಮ ಸಮ್ಮೇಳನದ ಉದ್ದೇಶವಾಗಿದೆ.
ಧರ್ಮಸ್ಥಳದಲ್ಲಿ ಅನ್ನದಾನ, ವಿದ್ಯಾದಾನ, ಔಷಧಿದಾನ ಮತ್ತು ಅಭಯದಾನ ನಿತ್ಯೋತ್ಸವವಾಗಿದೆ. ಶ್ರೀ ಮಂಜುನಾಥ ಸ್ವಾಮಿಯ ಸೇವೆ ಮಾಡುವುದು ತನ್ನ ಪ್ರಮುಖ ಕರ್ತವ್ಯವಾದರೂ ಸಾನ್ನಿಧ್ಯ ಸೇವೆ ಮತ್ತು ಸಾನ್ನಿಧ್ಯ ರಕ್ಷಣೆಯೊಂದಿಗೆ, ಲೋಕಕಲ್ಯಾಣಕ್ಕಾಗಿ ಅನೇಕ ಸೇವಾಕಾರ್ಯಗಳನ್ನು ಅನುಷ್ಠಾನಗೊಳಿಸಿರುವುದಾಗಿ ಹೆಗ್ಗಡೆಯವರು ಹೇಳಿದರು.
ಕ್ರೈಸ್ತ ಧರ್ಮದಲ್ಲಿ ಧರ್ಮ ಸಮನ್ವಯದ ಬಗ್ಗೆ ಧರ್ಮಗುರು ಮಾರ್ಸೆಲ್ ಪಿಂಟೊ, ಇಸ್ಲಾಂ ಮತ್ತು ಭಾರತೀಯ ಭಾವೈಕ್ಯದ ಬಗ್ಗೆ ಹಾಸಿಂಪೀರ ಇ ವಾಲೀಕರ ಮತ್ತು ಜೈನಧರ್ಮದಲ್ಲಿ ಸಾಮರಸ್ಯ ಎಂಬ ವಿಷಯದ ಬಗ್ಗೆ ಮೂಡಬಿದ್ರೆಯ ನಿವೃತ್ತ ಮುಖ್ಯ ಶಿಕ್ಷಕ ಮುನಿರಾಜ ರೆಂಜಾಳ ಉಪನ್ಯಾಸ ನೀಡಿದರು. ಅಧ್ಯಕ್ಷತೆ ವಹಿಸಿದ ಶಿವಮೊಗ್ಗದ ಖ್ಯಾತ ವಕೀಲ ಎಂ.ಆರ್. ಸತ್ಯನಾರಾಯಣ ಮಾತನಾಡಿ, ನಮ್ಮ ಧರ್ಮದ ಮರ್ಮವನ್ನರಿತು ಇತರ ಧರ್ಮಗಳನ್ನೂ ಸಮಾನವಾಗಿ ಗೌರವಿಸಬೇಕು ಎಂದು ಹೇಳಿದರು. ಧರ್ಮಸ್ಥಳವು ಸರ್ವಧರ್ಮಗಳ ಸಮನ್ವಯ ಮತ್ತು ಸಾಮರಸ್ಯದ ಕೇಂದ್ರವಾಗಿದೆ. ಜೈನಧರ್ಮದ ಅನೇಕಾಂತವಾದ, ಅಹಿಂಸೆ ಹಾಗೂ ಪಂಚಾಣುವ್ರತಗಳು, ಧರ್ಮಸ್ಥಳದ ನ್ಯಾಯದಾನ ಪದ್ಧತಿ ವಿಶಿಷ್ಟವಾಗಿದೆ.
ನಮ್ಮ ಪುರಾತನ ಇತಿಹಾಸ, ನಾಗರಿಕತೆ ಮತ್ತು ಸಂಸ್ಕೃತಿ ಬಗ್ಗೆ ನಮಗೆ ಗೌರವ ಹಾಗೂ ಅಭಿಮಾನ ಇರಬೇಕು. ಪುರಾಣಗಳ ಅಧ್ಯಯನ ಮತ್ತು ಮನನ ಮಾಡಬೇಕು ಎಂದು ಅವರು ಸಲಹೆ ನೀಡಿದರು. ಸಂಕುಚಿತ ಭಾವನೆ ತ್ಯಜಿಸಿ ವಿಶಾಲ ಮನೋಭಾವದಿಂದ ವಿಶ್ವದ ಎಲ್ಲಾ ಕಡೆಗಳಿಂದಲೂ ಬರುವ ಉತ್ತಮ ವಿಚಾರಗಳನ್ನು ನಾವು ಸ್ವೀಕರಿಸಿ ವಿಶ್ವಮಾನವರಾಗಬೇಕು ಎಂದು ಹೇಳಿದರು. ಧರ್ಮಸ್ಥಳ ಗ್ರಾಮ ಪಂಚಾಯಿತಿ ಪಿ.ಡಿ.ಒ. ಉಮೇಶ್ ಗೌಡ ಧನ್ಯವಾದವಿತ್ತರು. ಎಸ್.ಡಿ.ಎಂ. ಕಾಲೇಜಿನ ಉಪನ್ಯಾಸಕ ಡಾ. ಶ್ರೀಧರ ಭಟ್ ಕಾರ್ಯಕ್ರಮ ನಿರ್ವಹಿಸಿದರು.