ಅವರು ಜ.14ರಂದು ಧರ್ಮಸ್ಥಳದ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಡಿ ಆಯೋಜಿಸಿದ 28 ನೇ ವರ್ಷದ ನೈತಿಕ ಮೌಲ್ಯಾಧಾರಿತ ಪುಸ್ತಕಗಳನ್ನಾಧರಿಸಿದ ಸ್ಪರ್ಧೆಗಳ ವಿಜೇತರಿಗೆ ಪುರಸ್ಕಾರ ಸಮಾರಂಭದಲ್ಲಿ ಶುಭಾಶಂಸನೆ ಮಾಡಿ ಮಾತನಾಡಿದರು.
'ಪ್ರತಿಯೊಬ್ಬರೂ ಮನೆ, ಶಾಲೆ ಮತ್ತು ಸಾಮಾಜಿಕ ಪರಿಸರದಲ್ಲಿ ಸಿಗುವ ಅವಕಾಶಗಳನ್ನು ಹೊಂದಿಕೊಂಡು ಅವರ ವ್ಯಕ್ತಿತ್ವ ಬೆಳವಣಿಗೆಯಾಗುತ್ತದೆ. ಮಕ್ಕಳು ಕಷ್ಟಪಟ್ಟು ಕಲಿಯದೇ, ಇಷ್ಟಪಟ್ಟು ಕಲಿಯಬೇಕು. ಮನೆಯಲ್ಲಿ ತಂದೆ - ತಾಯಿ ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡಬೇಕು. ಅವರ ಭಾವನೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು. ಮಕ್ಕಳೆದುರು ತಂದೆ, ತಾಯಿ ಜಗಳ ಮಾಡಬಾರದು. ಮಕ್ಕಳಲ್ಲಿ ಸದಾ ಧನಾತ್ಮಕ ಚಿಂತನೆಗಳನ್ನು ಮೂಡಿಸಿ ಋಣಾತ್ಮಕ ಚಿಂತನೆಗೆ ಅವಕಾಶವೇ ಕೊಡಬಾರದು. ಮನೆ, ಶಾಲೆ ಮತ್ತು ಸಮಾಜದಲ್ಲಿ ಪೂರಕ ಹಾಗೂ ಪ್ರೇರಕ ವಾತಾವರಣ ದೊರಕಿದಲ್ಲಿ ಮಕ್ಕಳು ಉತ್ತಮ ಕಲಿಕೆ, ನೆನಪುಶಕ್ತಿ ಮತ್ತು ಯಶಸ್ಸಿನೊಂದಿಗೆ ಸುಸಂಸ್ಕøತ ನಾಗರಿಕರಾಗಿ ರೂಪುಗೊಳ್ಳುತ್ತಾರೆ ಎಂದರು.
ಸ್ಪರ್ಧೆಗಳಲ್ಲಿ ವಿಜೇತರಿಗೆ ಪುರಸ್ಕಾರ ವಿತರಿಸಿದ ರಾಜ್ಯ ಸರ್ಕಾರದ ಕರ್ನಾಟಕ ಪಠ್ಯ ಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕ ವೀರಣ್ಣ ಎಸ್. ಜತ್ತಿ ಮಾತನಾಡಿ, ಧರ್ಮಸ್ಥಳದ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಬೇಕು ಎಂದು ಕೋರಿದರು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ನೈತಿಕ ಶಿಕ್ಷಣವನ್ನೂ ಅಳವಡಿಸಿದೆ. ಈ ಬಗ್ಗೆ ಹೆಗ್ಗಡೆಯವರನ್ನು ಆಹ್ವಾನಿಸಿ ಹೆಚ್ಚಿನ ಮಾರ್ಗದರ್ಶನ ಪಡೆಯಲಾಗುವುದು ಎಂದು ಅವರು ಹೇಳಿದರು.ಸ್ಪರ್ಧೆಗಳಲ್ಲಿ ವಿಜೇತರ ಪರವಾಗಿ ಕಳಸದ ಪ್ರಣಮ್ಯ ಡೋಂಗ್ರೆ, ಪುತ್ತೂರಿನ ಭಾರತಿ ಪ್ರಾಥಮಿಕ ಶಾಲೆಯ ಸಿಂಚನಾ, ಶಿರಸಿಯ ಅರ್ಪಿತಾ ಹೆಗಡೆ, ಮಂಗಳೂರಿನ ಕೆನರಾ ಪ್ರೌಢಶಾಲೆಯ ನಮೃತಾ ನಾಯಕ್ ಮತ್ತು ಉಡುಪಿಯ ಬಾಲಕಿಯರ ಪ್ರೌಢಶಾಲೆಯ ಸಂಕೇತ ಮಾತನಾಡಿದರು.
ಈ ಸಂದರ್ಭದಲ್ಲಿ ಥಟ್ ಅಂತ ಹೇಳಿ ಕಾರ್ಯಕ್ರಮ ನಡೆಸಿದ ಡಾ. ನಾ. ಸೋಮೇಶ್ವರ ಅವರು ಉತ್ತರ ನೀಡಿದವರಿಗೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು.
ಕಾರ್ಯಕ್ರಮದಲ್ಲಿ ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್ ಮತ್ತು ಬೆಳ್ತಂಗಡಿ ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷ ಉಪಸ್ಥಿತರಿದ್ದರು.
ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಡಾ. ಶಶಿಕಾಂತ್ ಜೈನ್ ಸ್ವಾಗತಿಸಿದರು.