ಮಳೆಗಾಲದ ಆರಂಭದ 2ತಿಂಗಳ ಅವಧಿಯಲ್ಲಿ ಮೀನುಗಳು ಸಂತಾನೋತ್ಪತ್ತಿ ಮಾಡುವ ಸಮಯ. ಮೀನುಗಳು ಈ ಅವಧಿಯಲ್ಲಿ ಮೊಟ್ಟೆಯನ್ನಿಡುವುದರಿಂದ ಅವುಗಳ ಸಂತತಿ ಹೆಚ್ಚಲಿದೆ. ಈ ಸಂದರ್ಭದಲ್ಲಿ ಮೀನುಗಾರಿಕೆ ನಡೆಸಿದರೆ ಮೀನುಗಳ ಸಂತತಿ ಕಡಿಮೆ ಆಗಿ ಮತ್ಸö್ಯ ಕ್ಷಾಮ ಆಗುವ ಸಾಧ್ಯತೆ ಇದೆ. ಇದರ ಜೊತೆಗೆ ಮಳೆಗಾಲದ ಆರಂಭದ ಈ ಅವಧಿಯಲ್ಲಿ ಅರಬ್ಬಿ ಸಮುದ್ರ ರೌದ್ರಾವತಾರ ತಾಳಿರುತ್ತದೆ. ಭಾರಿ ಗಾತ್ರದ ಅಲೆಗಳು ಮತ್ತು ಸಮುದ್ರದ ರೌದ್ರಾವತಾರ ಮೀನುಗಾರರಿಗೆ ಮತ್ತು ಮೀನುಗಾರಿಕೆ ಬೋಟ್‌ಗಳಿಗೆ ಅಪಾಯ ಉಂಟು ಮಾಡುತ್ತದೆ. ಈ ಕಾರಣದಿಂದಾಗಿ ಮೀನುಗಾರರು ಈ ಅವಧಿಯಲ್ಲಿ ಮೀನುಗಾರಿಕೆಗೆ ತೆರಳದೆ ರಜೆಯಲ್ಲಿ ಇರುತ್ತಾರೆ.
ಆಳ ಸಮುದ್ರ ಮೀನುಗಾರಿಕೆಗೆ ನಿಷೇಧ ಇರುವ ಈ ಸಂದರ್ಭದಲ್ಲಿ ನಾಡದೋಣಿಯಲ್ಲಿ ಮೀನುಗಾರಿಕೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ನಾಡದೋಣಿಯಲ್ಲಿ, 10 ಅಶ್ವಶಕ್ತಿಯೊಳಗಿನ ಯಾಂತ್ರಿಕೃತ ದೋಣಿಗಳಲ್ಲಿ ಮೀನುಗಾರಿಕೆ ನಡೆಸಲು ಅವಕಾಶ ಇದೆ. ಹೀಗಾಗಿ ಆಳ ಸಮುದ್ರ ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಮೀನುಗಾರರು, ಸಾಂಪ್ರದಾಯಿಕ ಮೀನುಗಾರರು ನಾಡದೋಣಿ ಮೂಲಕ ಮೀನುಗಾರಿಕೆ ನಡೆಸುತ್ತಾರೆ. ನಾಡದೋಣಿ ಮೀನುಗಾರಿಕೆ ನಡೆಸುವವರು ಸಮುದ್ರ ತೀರಕ್ಕಿಂತ 24 ನಾಟಿಕಲ್ ಮೈಲು ದೂರದ ವರೆಗೆ ಮಾತ್ರ ಮೀನುಗಾರಿಕೆ ನಡೆಸಲು ಅವಕಾಶ ಇದೆ. ಕರಾವಳಿಯ ಮೀನುಗಾರಿಕೆಯಲ್ಲಿ ಇದೀಗ ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರ ಪ್ರದೇಶದ ಮೀನುಗಾರರು ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಮೀನುಗಾರಿಕೆಯ ರಜೆಯ ಅವಧಿಯಲ್ಲಿ ಈ ಮೀನುಗಾರರು ತಮ್ಮ ಊರಿಗೆ ತೆರಳುತ್ತಾರೆ. ಇನ್ನುಳಿದ ಮೀನುಗಾರರು ನಾಡದೋಣಿಯ ಮೂಲಕ ಮೀನುಗಾರಿಕೆ ನಡೆಸುತ್ತಾರೆ. ಈ ಅವಧಿಯಲ್ಲಿ ಆಳ ಸಮುದ್ರ ಹೋಗುವ ಬೋಟ್‌ಗಳು ಬಂದರ್‌ಗಳಲ್ಲಿ ಲಂಗರು ಹಾಕಿರುತ್ತದೆ. ಬೋಟ್‌ಗಳ ರಿಪೇರಿ, ಪೇಂಟಿಂಗ್, ಮುಂದಿನ ಮೀನುಗಾರಿಕಾ ಋತುವಿಗೆ ತಯಾರಿ, ಬಲೆ ಸಿದ್ದಪಡಿಸುವುದು ಮೊದಲಾದ ಕಾರ್ಯಗಳನ್ನು ಮಾಡುತ್ತಾರೆ.