ಅವರು ಶುಕ್ರವಾರ ಉಜಿರೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯ ದಶಮಾನೋತ್ಸವ ಸಮಾರಂಭದಲ್ಲಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಆಸ್ಪತ್ರೆಯ ವೈದ್ಯರು ಹಾಗೂ ಎಲ್ಲಾ ಸಿಬ್ಬಂದಿಯ ಸೇವೆಯನ್ನು ಶ್ಲಾಘಿಸಿದರು.
ಎಲ್ಲರೂ ಆರೋಗ್ಯವಿಮೆ ಮಾಡಿಸಬೇಕು ಎಂದು ಸಲಹೆ ನೀಡಿದ ಅವರು ರೋಗದ ಲಕ್ಷಣ ಕಂಡು ಬಂದ ತಕ್ಷಣ ಚಿಕಿತ್ಸೆ ಪಡೆಯಬೇಕು. ಉಜಿರೆ ಆಸ್ಪತ್ರೆಯಲ್ಲಿ ಎಲ್ಲಾ ಆಧುನಿಕ ಸೌಲಭ್ಯಗಳಿದ್ದು ರಿಯಾಯಿತಿ ದರದಲ್ಲಿ ಶುಶ್ರೂಷೆ ನೀಡಲಾಗುತ್ತದೆ. ಅನ್ನದಾನ, ವಿದ್ಯಾದಾನ, ಅಭಯದಾನ ಮತ್ತು ಔಷಧಿದಾನ ಧರ್ಮಸ್ಥಳದಲ್ಲಿ ನಿತ್ಯೋತ್ಸವವಾಗಿದ್ದು, ಔಷಧದಾನದ ಮೂಲಕ ಜನರ ಆರೋಗ್ಯ ರಕ್ಷಣೆಗೆ ವಿಶೇಷ ಆದ್ಯತೆ ನೀಡಲಾಗುತ್ತದೆ ಎಂದರು.
ಬೆಂಗಳೂರಿನಲ್ಲಿರುವ ಬೆಂಗಳೂರು ಕಿಡ್ನಿ ಫೌಂಡೇಶನ್‌ನಲ್ಲಿ ಕಿಡ್ನಿ ರೋಗಿಗಳ ಚಿಕಿತ್ಸೆಗಾಗಿ ಪ್ರತಿವರ್ಷ ಧರ್ಮಸ್ಥಳದಿಂದ 25 ಲಕ್ಷ ರೂ. ನೆರವು ನೀಡಲಾಗುತ್ತದೆ. ಕಿದ್ವಾಯಿ ಆಸ್ಪತ್ರೆಗೆ ಐದು ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಿಕೊಡಲಾಗಿದೆ. ವೈದ್ಯರು, ದಾದಿಯರು ಮತ್ತು ಎಲ್ಲಾ ಸಿಬ್ಬಂದಿಯ ಸೌಜನ್ಯಪೂರ್ಣ ನಗುಮೊಗದ ಸೇವೆಯಿಂದ ರೋಗಿಗಳು ಶೀಘ್ರ ಗುಣಮುಖರಾಗುತ್ತಾರೆ. ಈ ದಿಸೆಯಲ್ಲಿ ಎಲ್ಲಾ ಸಿಬ್ಬಂದಿ ಉತ್ತಮ ಸೇವೆ ನೀಡುತ್ತಿದ್ದಾರೆ ಎಂದು ಅಭಿನಂದಿಸಿದರು.
ಆಸ್ಪತ್ರೆಯ ನಿರ್ದೇಶಕ ಜನಾರ್ದನ್ ಎಂ. ಸ್ವಾಗತಿಸಿದರು. ಜಗನ್ನಾಥ ಮತ್ತು ಡಾ. ಮೀರಾಅನುಪಮ ಕಾರ್ಯಕ್ರಮ ನಿರ್ವಹಿಸಿದರು.