ಪ್ರತಿಭಟನಾ ಸಭೆಯ ಸಂಘಟಕರಾದ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಇತರರಾದ ಜಗದೀಶ, ಪ್ರಭಾ.ಎಲ್ ಬೆಳವಂಗಲ, ಬಿ.ಎಂ.ಭಟ್, ವಿಠಲ ಗೌಡ ಹಾಗೂ ಒಡನಾಡಿ ಸಂಸ್ಥೆ ಇವರುಗಳು ಅವಹೇಳನಕಾರಿಯಾದ ಮಾತುಗಳನ್ನು ಆಡದಂತೆ ನ್ಯಾಯಾಲಯ ತಡೆಯಾಜ್ಞೆಯನ್ನು ನೀಡಿದ್ದು ನ್ಯಾಯಾಲಯದ ಈ ಆದೇಶಗಳನ್ನು ಸಂಘಟಕರು ಉಲ್ಲಂಘಿಸದಂತೆ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕು ಎಂದು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ , ದ.ಕ ಜಿಲ್ಲಾಧಿಕಾರಿಯವರಿಗೆ , ಪೊಲೀಸ್ ವರಿಷ್ಠಾಧಿಕಾರಿಗಳಿಗೆ , ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹಾಗೂ ಸಹಾಯಕ ಕಮೀಷನರ್, ಪುತ್ತೂರುರವರಿಗೆ ಮನವಿ ನೀಡಿದ್ದಾರೆ.
ಸೌಜನ್ಯಳ ಪ್ರಕರಣವನ್ನು ಸರಕಾರವು ಉನ್ನತ ಮಟ್ಟದಲ್ಲಿ ತನಿಖೆ ಮಾಡುವಂತೆ ಸೌಜನ್ಯಳ ಕುಟುಂಬ, ಹಲವು ಸಂಘಟನೆಗಳು, ಬೆಳ್ತಂಗಡಿಯ ಸಾರ್ವಜನಿಕರು ಸರಕಾರವನ್ನು ಒತ್ತಾಯಿಸುತ್ತಿದ್ದರೂ, ಕರ್ನಾಟಕ ಸರಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದೆ ಮೌನವಹಿಸಿರುವುದು ಅತ್ಯಂತ ವಿಷಾದನೀಯವಾಗಿದ್ದು ಈ ಕೃತ್ಯವನ್ನು ಎಸಗಿರುವ ಆರೋಪಿ/ಆರೋಪಿಗಳನ್ನು ಕಾನೂನು ರೀತಿಯ ಶಿಕ್ಷೆಗೆ ಒಳಪಡಿಸಿ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಸಮಾಜದಲ್ಲಿ ಗೊಂದಲಗಳು ಸೃಷ್ಟಿಯಾಗಲು ಆಸ್ಪದವನ್ನು ಕೊಡಬಾರದೆಂದು ಒತ್ತಾಯಿಸಿದ್ದಾರೆ.