ಅವರು ಅ.04ರಂದು ಧರ್ಮಸ್ಥಳದಲ್ಲಿ ನಡೆದ ಭಜನಾ ತರಬೇತಿ ಕಮ್ಮಟದ ಸಮರೋಪ ಸಮಾರಂಭದಲ್ಲಿ ಆಶೀರ್ವಚನ ನೀಡುತ್ತಾ, ಮಹಾರಾಷ್ಟ್ರದಲ್ಲಿ ಸಂತ ತುಕಾರಾಮ ಮೊದಲಾದ ಸಂತರು ಭಜನಾ ಕ್ಷೇತ್ರದಲ್ಲಿ ಕ್ರಾಂತಿಯನ್ನೆ ಮಾಡಿದ್ದಾರೆ. ಭೌತಿಕ ಸುಖ-ಭೋಗಕ್ಕಿಂತ ಆಧ್ಯಾತ್ಮಿಕ ಬದುಕೇ ಶ್ರೇಷ್ಠವಾಗಿದ್ದು ಭಜನೆ ಮೂಲಕ ಸುಲಭದಲ್ಲಿ ಭಗವಂತನ ಅನುಗ್ರಹಕ್ಕೆ ಪಾತ್ರರಾಗಬಹುದು. ಭಜನೆ ಮೂಲಕ ಧರ್ಮಜಾಗೃತಿಯಾಗಿ ನೈತಿಕಮೌಲ್ಯಗಳು ಉದ್ದೀಪನಗೊಂಡು ಆರೋಗ್ಯಪೂರ್ಣ ಸಮಾಜ ರೂಪುಗೊಳ್ಳುತ್ತದೆ ಎಂದು ಹೇಳಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಬಹುಮುಖಿ ಸಮಾಜ ಸೇವೆಯನ್ನು ಶ್ಲಾಘಿಸಿ ಅಭಿನಂದಿಸಿದ ಸ್ವಾಮೀಜಿ, ಭಜನಾ ತರಬೇತಿ ಕಮ್ಮಟದ ಮೂಲಕ ಸಾಮೂಹಿಕ ಭಕ್ತಿ ಕ್ರಾಂತಿಯನ್ನೆ ಮಾಡಿದ್ದಾರೆ. ಅನ್ನದಾಸೋಹ, ಜ್ಞಾನದಾಸೋಹ, ಆರೋಗ್ಯ, ಶಿಕ್ಷಣ ಮತ್ತು ಗ್ರಾಮಾಭಿವೃದ್ಧಿ ಕ್ಷೇತ್ರದಲ್ಲಿ ಸೇವೆಯನ್ನು ಶ್ಲಾಘಿಸಿದ ಸ್ವಾಮೀಜಿ ಹೆಗ್ಗಡೆಯವರು ಧರ್ಮಸ್ಥಳಕ್ಕೆ ಮಾತ್ರವಲ್ಲ ಎಲ್ಲಾ ಮಠಾಧೀಶರುಗಳಿಗೂ ಧರ್ಮಾಧಿಕಾರಿಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
ರಾಜ್ಯಸಭಾ ಸದಸ್ಯ ಹಾಗೂ ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ ಇಳೈಯರಾಜ ಶುಭಾಶಂಸನೆ ಮಾಡಿ, ಧರ್ಮಸ್ಥಳ ಕ್ಷೇತ್ರದ ಮಹಿಮೆ ಅದ್ಭುತವಾಗಿದ್ದು ಮಾತಿನಿಂದ ವರ್ಣಿಸಲು ಸಾಧ್ಯವಿಲ್ಲ. ಇಲ್ಲಿಗೆ ಬಂದು ತಾನು ಅತೀವ ಸಂತಸಪಟ್ಟಿದ್ದೇನೆ ಎಂದರು. ಅವರು ಹಾಡೊಂದನ್ನು ಒಂದನ್ನು ಹಾಡಿ ತಾನು ಕೊಲ್ಲೂರಿನ ಪರಮಭಕ್ತನಾಗಿದ್ದು, ಇಲ್ಲಿ ಬಂದಾಗಲೂ ಅದೇ ರಾಗದ ಅದೇ ಹಾಡನ್ನು ಹಾಡಲು ಅಭಿಮಾನಪಡುತ್ತೇನೆ ಎಂದರು.
ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಮಾತನಾಡಿ, ಭಜನೆಯಿಂದ ಸಾತ್ವಿಕ ಸಮಾಜ ನಿರ್ಮಾಣವಾಗುತ್ತದೆ. ಕಲಿಯುಗದಲ್ಲಿ ಭಜನೆ ಮಾಡುವುದರಿಂದ ಭಗವಂತನೊಂದಿಗೆ ನೇರವಾಗಿ ಅನುಸಂಧಾನ ಸಾಧ್ಯವಾಗುತ್ತದೆ ಎಂದರು.
ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಮಾತನಾಡಿ ಭಜನಾ ತರಬೇತಿ ಮೂಲಕ ಹೆಗ್ಗಡೆಯವರು ಆರೋಗ್ಯಪೂರ್ಣ ಸಮಾಜ ನಿರ್ಮಾಣದ ರೂವಾರಿಯಾಗಿದ್ದಾರೆ. ಶಿಕ್ಷಣ, ಮಹಿಳಾ ಸಬಲೀಕರಣ ಮತ್ತು ಸ್ವ-ಉದ್ಯೋಗ ತರಬೇತಿ ಕೇಂದ್ರಗಳ ಮೂಲಕ ಹೆಗ್ಗಡೆಯವರು ಅನುಪಮ ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪುಲಿಯಾರು ಸಿದ್ಧಪ್ಪ ಅಯ್ಯಪ್ಪ ಸ್ವಾಮೀಜಿ ಮತ್ತು ಮಾಣಿಲದ ಮೋಹನದಾಸ ಸ್ವಾಮೀಜಿ ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಎಸ್.ಡಿ. ಸಂಪತ್ ಸಾಮ್ರಾಜ್ಯ ಶಿರ್ತಾಡಿ ಉಪಸ್ಥಿತರಿದ್ದರು.
ಭಜನಾ ತರಬೇತಿ ಕಮ್ಮಟದ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಸ್ವಾಗತಿಸಿದರು. ಶ್ರೀನಿವಾಸರಾವ್ ಧರ್ಮಸ್ಥಳ ಧನ್ಯವಾದವಿತ್ತರು.