ಅನಧಿಕೃತ ಲೋಡ್ ಶೆಡ್ಡಿಂಗ್‍ನಿಂದಾಗಿ ಸಾರ್ವಜನಿಕರು ಉದ್ಯಮಿಗಳು ಹಾಗೂ ರೈತರು ಸಂಕಷ್ಟಕ್ಕೀಡಾಗುತ್ತಿದ್ದಾರೆ ಎಂದು ಸರಕಾರಕ್ಕೆ ತಿಳಿಸಿದ್ದ ಅವರು ವಿದ್ಯುತ್ ಕೊರತೆಯನ್ನು ನಿವಾರಿಸಲು ಸರಕಾರ ತೆಗೆದುಕೊಂಡಿರುವ ಕ್ರಮಗಳ ಕುರಿತು , ಹೆಚ್ಚುವರಿ ವಿದ್ಯುತ್ ಉತ್ಪಾದನೆಯಾ ಖರೀದಿಗೆ ಸರಕಾರ ತೆಗೆದುಕೊಂಡ ಕ್ರಮಗಳ ಕುರಿತು ಇಂಧನ ಸಚಿವರಿಗೆ ಪ್ರಶ್ನೆ ಮಾಡಿದ್ದರು. ಇದಕ್ಕೆ ಉತ್ತರ ನೀಡಿರುವ ಇಂಧನ ಸಚಿವರು ರಾಜ್ಯದಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಮಾಸಿಕವಾಗಿ ರಾಜ್ಯ ಬೇಡಿಕೆಯು ಶೇ.32 ರಷ್ಟು ಏರಿಕೆಯಾಗಿದೆ. ಬೇಡಿಕೆಯ ಹೆಚ್ಚಳದಿಂದ ರಾಜ್ಯದಲ್ಲಿ ಆ.2023 ರಿಂದ ಅಕ್ಪೋಬರ್ ತಿಂಗಳ ಕೆಲವು ದಿನಗಳಲ್ಲಿ ಕೊರತೆಯಾಗಿತ್ತು. ಆದರೆ ಸರಕಾರವು ಸಕಾಲದಲ್ಲಿ ಅಗತ್ಯ ಕ್ರಮ ಕೈಗೊಂಡಿರುವುದರಿಂದ ಪರಿಸ್ಥಿತಿ ಸಾಮಾನ್ಯಕ್ಕೆ ಬಂದಿದೆ. ಸಧ್ಯ ಬೇಡಿಕೆ ತಗ್ಗಿದ್ದು ಈಗ ವಿದ್ಯುತ್ ಕೊರತೆ ಇಲ್ಲ ಎಂದಿದ್ದಾರೆ.
ಅನಿವಾರ್ಯ ಸಂದರ್ಭಗಳಲ್ಲಿ ವಿದ್ಯುತ್ ಲಭ್ಯತೆ, ಉತ್ಪಾದನೆ ಕುಂಠಿತವಾದಾಗ ಅಥವಾ ವಿದ್ಯುತ್ ಜಾಲದಲ್ಲಿ ತೊಂದರೆ ಉಂಟಾದಾಗ ಮಾತ್ರ ತಾತ್ಕಾಲಿಕವಾಗಿ ವಿದ್ಯುತ್ ಜಾಲದ ಸುರಕ್ಷತಾ ದೃಷ್ಟಿಯಿಂದ ಸ್ವಲ್ಪ ಪ್ರಮಾಣದಲ್ಲಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶಗಳ ಕೃಷಿ ಪಂಪ್‍ಸೆಟ್ ಫೀಡರುಗಳಿಗೆ ದಿನವಹಿ 7 ಗಂಟೆಗಳ ಕಾಲ 3 ಫೇಸ್ ವಿದ್ಯುತ್ ಸರಬರಾಜು ಮಾಡಲಾಗುತ್ತಿದ್ದು, ರಾಜ್ಯದ ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯ ನಗರ ಕೈಗಾರಿಕೆ, ಕುಡಿಯುವ ನೀರಿನ ಯೋಜನೆಯ ಸ್ಥಾವರಗಳಿಗೆ ಮತ್ತು ನಿರಂತರ ಜ್ಯೋತಿ ಯೋಜನೆ ಫೀಡರ್‍ಗಳಿಗೆ ದಿನವಹಿ 24 ಗಂಟೆಗಳ ಕಾಲ 3 ಫೇಸ್ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ ಎಂದು ಸಚಿವರು ಉತ್ತರಿಸಿದ್ದಾರೆ.