ಉನ್ನತ ಶಿಕ್ಷಣ ಇಲಾಖೆ ಹೊರಡಿಸಿದ ಆದೇಶದಲ್ಲಿ ರಾಜ್ಯ ಶಿಕ್ಷಣ ನೀತಿ ಆಯೋಗದ ಮಧ್ಯಂತರ ವರದಿಯ ಶಿಫಾರಸಿನಂತೆ ನಾಲ್ಕು ವರ್ಷಗಳ ಪದವಿ ಕೋರ್ಸ್ ರದ್ದು ಮಾಡಲಾಗಿದ್ದು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ 6 ಸೆಮಿಸ್ಟರ್‌ಗಳಿರುವ ಮೂರು ವರ್ಷದ ಪದವಿ ತರಗತಿಗಳನ್ನು ಜಾರಿಗೆ ತರಲಾತ್ತಿದೆ. ರಾಜ್ಯ ಶಿಕ್ಷಣ ನೀತಿ ಆಯೋಗ ಎನ್ ಇ ಪಿಯ ಮುಖ್ಯಸ್ಥ ಪ್ರೊ.ಸುಖದೇವ್ ಥೋರಟ್ ಅವರು ರಾಜ್ಯದ ವಿಶ್ವವಿದ್ಯಾಲಯಗಳ ಉಪ ಕುಲಪತಿಗಳು, ಡೀನ್‌ಗಳು, ಕಾಲೇಜುಗಳ ಪ್ರಾಂಶುಪಾಲರು, ಶಿಕ್ಷಣ ತಜ್ಞರು ಸೇರಿದಂತೆ ಹಲವರ ಜೊತೆ 3 ತಿಂಗಳುಗಳ ಕಾಲ ನಿರಂತರವಾಗಿ ಸಭೆ ನಡೆಸಿ, ಸಮಾಲೋಚಿಸಿ ಅಭಿಪ್ರಾಯಗಳನ್ನು ಸಂಗ್ರಹಿಸಿ ಸರ್ಕಾರಕ್ಕೆ 3 ವರ್ಷದ ಪದವಿ ಕೋರ್ಸ್ ಮರು ಜಾರಿಗೆ ತರುವಂತೆ ಶಿಫಾರಸು ಮಾಡಲಾಗಿದೆ ಎಂದಿದೆ.
ಈಗಾಗಲೇ ಎನ್‌ಇಪಿ ಪ್ರಕಾರ ನಾಲ್ಕು ವರ್ಷಗಳ ಪದವಿ ತರಗತಿಗೆ ಪ್ರವೇಶಾತಿ ಮಾಡಿಕೊಂಡು ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು 4 ವರ್ಷದ ಕೋರ್ಸ್ ಪೂರ್ಣಗೊಳ್ಳುವವರೆಗೆ ಅಭ್ಯಾಸ ಮುಂದುವರಿಸಬಹುದು. ಆದರೆ ಈ ಶೈಕ್ಷಣಿಕ ವರ್ಷದಿಂದ ಪ್ರವೇಶ ಪಡೆಯುವವರಿಗೆ ಮೂರು ವರ್ಷದ ಕೋರ್ಸ್ ಅನ್ವಯವಾಗಲಿದೆ.