"ನದಿಯಲ್ಲಿ ಇದ್ದಕ್ಕಿದ್ದಂತೆ ದೊಡ್ಡ ಶಬ್ದ ಕೇಳಿಬಂತು. ತಿರುಗಿ ನೋಡುವಷ್ಟರಲ್ಲಿ ಗುಡ್ಡ ಜರಿದು ನದಿಗೆ ಬಿದ್ದಿತ್ತು. ನದಿ ನೀರೆಲ್ಲಾ ನಮ್ಮ ಕಡೆ ನುಗ್ಗಿ ಬರುತ್ತಿತ್ತು. ನೀರು, ಕೆಸರು ಎಲ್ಲವೂ ಮತ್ತೊಂದು ದಂಡೆಯ ಉಳುವರೆ ಗ್ರಾಮದ ಮೇಲೆರಗಿತು. ನೀರಿನ ರಭಸ ಎಷ್ಟಿತ್ತೆಂದರೆ ಗ್ರಾಮದ ಏಳು ಮನೆಗಳ ಪೈಕಿ ನಾಲ್ಕು ಮನೆಗಳು ಕುರುಹಿಲ್ಲದಂತೆ ಕೊಚ್ಚಿಹೋಗಿದೆ. ಅಲ್ಲದೆ ಮತ್ತೆ ಮೂರು ಮನೆಗಳು ಸಂಪೂರ್ಣ ಹಾನಿಗೊಳಗಾಗಿವೆ. ಎಲ್ಲರಿಗೂ ಓಡಿ ಎಂದೂ ಕೂಗುತ್ತಲೇ ನಾವು ಓಡಿ ಗುಡ್ಡ ಹತ್ತಲು ಪ್ರಯತ್ನಿಸಿದೆವು. ಒಂದಿಷ್ಟು ಜನ ಗುಡ್ಡ ಏರಿ ಅವಘಡದಿಂದ ತಪ್ಪಿಸಿಕೊಂಡರೆ, ಇನ್ನು ಕೆಲವರು ನೀರಿನಲ್ಲಿ ತೇಲಿ ಹೋಗುತ್ತಿದ್ದವರನ್ನು ಹಿಡಿದು ರಕ್ಷಿಸಿಸಿದ್ದೇವೆ. ಈ ನಡುವೆ ಓರ್ವ ಮಹಿಳೆ ನಾಪತ್ತೆಯಾಗಿದ್ದಾರೆ. ಈ ಭಾಗದ ಸುಮಾರು 30ಕ್ಕೂ ಹೆಚ್ಚು ಮನೆಗಳಿಗೆ ನದಿ ನೀರು ನುಗ್ಗಿ ಹಾನಿಯಾಗಿದೆ”
‘ಏಕಾಏಕಿ ಜೋರಾದ ಶಬ್ದ ಕೇಳಿತು, ಬಂದು ನೋಡಿದಾಗ ನಮ್ಮ ಮನೆಯೇ ಅಲ್ಲಿರಲಿಲ್ಲ’"ನಮ್ಮ ಮನೆಯಲ್ಲಿ ತಾಯಿ ಮಾತ್ರ ಇದ್ದರು. ನಾನು ಅಂಗಡಿಗೆ ಹೋಗಿದ್ದೆ. ಏಕಾಏಕಿ ಜೋರಾದ ಶಬ್ದ ಕೇಳಿ ಬಂತು. ಬಂದು ನೋಡಿದಾಗ ನಮ್ಮ ಮನೆಯೇ ಅಲ್ಲಿರಲಿಲ್ಲ. ಅಮ್ಮ ಅಡುಗೆ ಮಾಡುತ್ತಿದ್ದಳು. ಅಮ್ಮ ನಾನು ಮಾತ್ರ ವಾಸವಾಗಿದ್ದು ಈವರೆಗೂ ಅವರು ಪತ್ತೆಯಾಗಿಲ್ಲ" ಎಂದು ಮಗ ಮಂಜುನಾಥ ನೋವು ತೋಡಿಕೊಂಡರು.
“ನದಿ ದಂಡೆಯ ಉದ್ದಗಲ್ಲಕ್ಕೂ ಕೃಷಿ ಭೂಮಿ ಇದ್ದು, ಘಟನೆ ನಡೆದ ಸ್ಥಳದಿಂದ ಸುಮಾರು ಒಂದು ಕಿ.ಮೀವರೆಗೂ ನಾಟಿ ಮಾಡಿದ ಗದ್ದೆಗಳಿಗೆ ಕಲ್ಲು, ಮಣ್ಣು, ಮರಗಳು ಬಿದ್ದು ಸಂಪೂರ್ಣ ಹಾನಿಯಾಗಿದೆ. ನದಿ ದಂಡೆಯುದ್ದಕ್ಕೂ ಕಲ್ಲುಗಳಿಂದ ಕೊರೆತವಾಗದಂತೆ ಕೋಟ್ಯಂತರ ರೂ ವೆಚ್ಚದಲ್ಲಿ ಸುಮಾರು 2 ಕಿ.ಮೀವರೆಗೆ ನಿರ್ಮಿಸಿದ್ದ ಪಿಚ್ಚಿಂಗ್ ಸಂಪೂರ್ಣ ಹಾನಿಯಾಗಿ ನದಿಯಲ್ಲಿ ಕೊಚ್ಚಿಹೋಗಿದೆ. ತೆಂಗು, ಹಲಸು, ಅಡಿಕೆ, ಮಾವು ಸೇರಿದಂತೆ ಹಲವು ಮರಗಳು ಧರೆಗುರುಳಿವೆ. ಮೀನುಗಾರರ ಬಲೆಗಳು, ಬೋಟ್‌ಗಳು ಎಲ್ಲವೂ ಕೊಚ್ಚಿ ಹೋಗಿ, ಇದ್ದ ಬೋಟ್‌ಗಳೂ ಬಳಸಲಾಗದ ಸ್ಥಿತಿ ತಲುಪಿದೆ”
ನದಿಯಲ್ಲಿ ತೇಲಿ ಹೋದ ಗ್ಯಾಸ್ ಟ್ಯಾಂಕರ್
ಗಂಗಾವಳಿ ನದಿ ದಂಡೆಯಲ್ಲಿ ವಾಸವಾಗಿದ್ದ ನೀಲ ಗೌಡ ಎಂಬವರ ಮನೆಯೂ ಸಂಪೂರ್ಣವಾಗಿ ಕೊಚ್ಚಿಹೋಗಿದೆ. ನೀಲ ಗೌಡರು ಮುಂದಿನ ವರ್ಷ ಮಗಳ ಮದುವೆ ಮಾಡಲು ಬಂಗಾರ ಮಾಡಿಸಿದ್ದರಂತೆ. ಆದರೆ ಸಂಪೂರ್ಣ ಮನೆಯೇ ಕೊಚ್ಚಿ ಹೋಗಿದ್ದು ಎಲ್ಲವೂ ನದಿ ಪಾಲಾಗಿದೆ. ಅವರೆಲ್ಲರೂ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆ ನೋಡಲು ಬಂದರೆ ಜಾಗ ಬಿಟ್ಟು ಬೇರೇನೂ ಇಲ್ಲ ಎಂದು ಸಂಬಂಧಿಕರಾದ ಅಂಗಡಿಬೈಲ್ ತಾರಾ ಗೌಡ ನೋವು ತೋಡಿಕೊಂಡರು.
ಗಂಗಾವಳಿ ನದಿ ಮೂಲಕ ಶವವಾಗಿ ತೇಲಿ ಬಂದ ಲಕ್ಷ್ಮಣ ನಾಯ್ಕ ಪತ್ನಿಯ ಶವ..! ಮುಂದಿನ ವಾರ ಬರುವುದಾಗಿ ತವರು ಮನೆಯಿಂದ ತೆರಳಿದ್ದ ಶಾಂತಿ ನಾಯ್ಕ ಎಂಬವರು ಗಂಗಾವಳಿ ನದಿ ಮೂಲಕ ಶವವಾಗಿ ತೇಲಿ ಬಂದು ಗೋಕರ್ಣದಲ್ಲಿ ಪತ್ತೆಯಾಗಿದ್ದಾರೆ. ಅಂಗಡಿ ನಡೆಸುತ್ತಿದ್ದ ಮೃತ ಲಕ್ಷ್ಮಣ ನಾಯ್ಕ ಅವರ ಪತ್ನಿಯೇ ಗೋಕರ್ಣದ ಶಾಂತಿ ನಾಯ್ಕ. 8 ವರ್ಷದ ಹಿಂದೆ ಇವರು ಮದುವೆಯಾಗಿದ್ದರು. ಬಾಲ್ಯವನ್ನು ಗೋಕರ್ಣದಲ್ಲಿಯೇ ಕಳೆದಿದ್ದ ಶಾಂತಿ, ತನ್ನ ಸಂಗಡಿಗರೊಂದಿಗೆ ಇತ್ತೀಚೆಗೆ ಸಾಕಷ್ಟು ಹೊತ್ತು ಮಾತನಾಡಿದ್ದರು. ಈ ವೇಳೆ, ಮತ್ತೆ ಶಿರೂರಿಗೆ ಹೋಗುವಾಗ ಮರಳಿ ಬರುತ್ತೇನೆ, ಆಗ ಭೇಟಿಯಾಗುವುದಾಗಿಯೂ ಹೇಳಿದ್ದರಂತೆ. ಆದರೆ, ಶಾಂತಿ ನಾಯ್ಕ ಶವ ನದಿಯಲ್ಲಿ ತೇಲುತ್ತಿರುವುದನ್ನು ತಿಳಿದು ನದಿ ದಡಕ್ಕೆ ಆಗಮಿಸಿದ್ದವರು ಬಿಕ್ಕಿ ಬಿಕ್ಕಿ ಅತ್ತಿದ್ದರು. ಮರಣೋತ್ತರ ಪರೀಕ್ಷೆಗೆ ಆರೋಗ್ಯ ಕೇಂದ್ರಕ್ಕೆ ಶವ ತಂದಾಗ ನೂರಾರು ಜನ ಜಮಾಯಿಸಿ ಶೋಕ ವ್ಯಕ್ತಪಡಿಸಿದರು.