ರೈಲು ಚಲಿಸಲು ಆರಂಭಿಸಿ ವೇಗ ಹೆಚ್ಚಾಗುತ್ತಿದ್ದಂತೆ ಓಡಿ ಬಂದ ಹಾಸನ ಮೂಲದ ಶಶಾಂಕ್ ಎಂಬ ಯುವಕ ರೈಲು ಹತ್ತಲು ಯತ್ನಿಸಿದ್ದಾನೆ. ಆಗ ರೈಲಿನ ಬಾಗಿಲಿನ ಸರಳು ಆತನ ಹಿಡಿತಕ್ಕೆ ಸಿಗದೆ ಎಡವಿ ಬಿದ್ದಿದ್ದಾನೆ. ಈ ವೇಳೆ ಆತ ರೈಲು ಹಾಗೂ ಪ್ಲ್ಯಾಟ್‌ಫಾರ್ಮ್ನಲ್ಲಿ ಎಡವಿ ಬಿದ್ದು ಅಪಾಯಕ್ಕೆ ಸಿಲುಕಿದ್ದನು. ಆಗ ಅಲ್ಲಿಯೇ ಇದ್ದ ರೈಲ್ವೇ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ರಾಘವನ್ ಇದನ್ನು ಗಮನಿಸಿ ತಕ್ಷಣ ಧಾವಿಸಿ ಯುವಕನನ್ನು ಎಳೆದು ರಕ್ಷಿಸಿದ್ದಾರೆ. ಸದ್ಯ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಅಹ್ಮದಾಬಾದ್‌ಗೆ ಹೋಗಲು ಹಾಸನದಿಂದ ಬಸ್‌ನಲ್ಲಿ ಬಂದಿದ್ದ ಶಶಾಂಕ್, ಬಸ್ ಬರುವುದು ಸ್ವಲ್ಪ ತಡವಾಗಿದ್ದರಿಂದ ರೈಲ್ವೆ ನಿಲ್ದಾಣಕ್ಕೆ ತಡವಾಗಿ ತಲುಪಿದ್ದಾರೆ. ಆದರೆ ಈ ಹೊತ್ತಿಗಾಗಲೇ ರೈಲು ಹೊರಟಿತ್ತು. ತರಾತುರಿಯಲ್ಲಿ ಓಡಿ ಬಂದು ರೈಲು ಹತ್ತುವಾಗ ಆತ ಆಯತಪ್ಪಿ ಬಿದ್ದಿದ್ದು ಬ್ಯಾಗ್ ಭಾರವಿದ್ದ ಕಾರಣ ಆತನಿಗೆ ಮೇಲೇಳಲು ಕಷ್ಟವಾಗುತ್ತಿತ್ತು. ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ರಾಘವನ್ ಅವರ ಸಮಯಪ್ರಜ್ಞೆಯಿಂದ ಶಶಾಂಕ್ ದೊಡ್ಡ ಗಂಡಾಂತರದಿಂದ ಪಾರಾಗಿದ್ದಾರೆ.