ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಹಣಕಾಸು ಅವ್ಯವಹಾರದ ಆರೋಪದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಪ್ರಕರಣ ದಾಖಲಿಸಿದೆ. ಈ ನಡುವೆ 14 ಸೈಟ್‌ಗಳನ್ನು ಮುಡಾಕ್ಕೆ ಹಿಂದಿರುಗಿಸಲು ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಮುಂದಾಗಿದ್ದಾರೆ. ಈ ಬಗ್ಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಪತ್ರ ಬರೆದಿರುವ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು “ಮುಡಾದಿಂದ ಪಡೆದಿರುವ ನಿವೇಶನಗಳನ್ನು ಹಿಂದಿರುಗಿಸುತ್ತೇನೆ. ನನಗೆ ಪತಿಯೇ ಹೆಚ್ಚು, ಹೀಗಾಗಿ ನನಗೆ ಮಂಜೂರು ಮಾಡಿರುವ 14 ನಿವೇಶನಗಳನ್ನು ವಾಪಸ್ ಕೊಡುತ್ತೇನೆ” ಎಂದು ತಿಳಿಸಿದ್ದಾರೆ.
ಆದರೆ ಇದರಿಂದ ಸಿಎಂ ಕುಟುಂಬಕ್ಕೆ ಏನಾದರೂ ಪ್ರುಯೋಜನವಾಗುತ್ತಾ? ಈ ಬಗ್ಗೆ ಜಾರಿ ನಿರ್ದೇಶನಾಲಯದ ಮಾಜಿ ಜಂಟಿ ನಿರ್ದೇಶಕ ಸತ್ಯೇಂದ್ರ ಸಿಂಗ್ ಪ್ರತಿಕ್ರಿಯೆ ಹೀಗಿದೆ. “ಸೈಟ್ ಹಿಂದಿರುಗಿಸುವುದು ಈ ಪ್ರಕರಣದಲ್ಲಿ ಇಡಿ ತನಿಖೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಏಕೆಂದರೆ, ಸೈಟ್ ಹಿಂದಿರುಗಿಸುವುದರಿAದ ಕೃತ್ಯ ನಡೆದಿಲ್ಲ ಎಂದು ಹೇಳಲಾಗುವುದಿಲ್ಲ. ಸಿದ್ದರಾಮಯ್ಯ ಮತ್ತು ಅವರ ಕುಟುಂಬದವರು ಸುಳ್ಳು ದಾಖಲೆ ನೀಡಿ ಭೂಸ್ವಾಧೀನ ಮಾಡಿಕೊಂಡಿದ್ದಾರೆ ಎಂಬ ಆರೋಪವಿದ್ದು, ತನಿಖೆ ಮುಂದುವರಿಯಲಿದೆ. ಈ ಪ್ರಕರಣದಲ್ಲಿ ದಾಖಲಾಗಿರುವ ಮೂಲ ಎಫ್ಐಆರ್ ಅನ್ನು ಲೋಕಾಯುಕ್ತರು ದಾಖಲಿಸಿದ್ದಾರೆ. ಈಗ ಅದರ ಆಧಾರದ ಮೇಲೆ ಇಡಿ ಪ್ರಕರಣ ದಾಖಲಿಸಿದ್ದು, ಸಂಪೂರ್ಣ ತನಿಖೆ ನಡೆಸಲಿದೆ. ಇಲ್ಲಿ, ಸೈಟ್ ವಾಪಸ್ ಕೊಡುವುದು ಮುಖ್ಯವಾದ ವಿಚಾರವೇ ಅಲ್ಲ. ತನಿಖೆ ಪ್ರಾರಂಭವಾದ ನಂತರ, ಹೇಗಾದರೂ ಮುಡಾಗೆ ಸೇರಿದ ಭೂಮಿಯನ್ನು ಇಡಿ ವಶಪಡಿಸಿಕೊಳ್ಳುತ್ತದೆ. ಏಕೆಂದರೆ ಪ್ರಕರಣವು ಭೂಮಿಗೆ ಸಂಬAಧಿಸಿದ್ದಾಗಿದೆ. ಈ ಕಾರಣದಿಂದ, ಸಿಎಂ ಕುಟುಂಬದವರು ಈಗಾಗಲೇ ಭೂಮಿಯನ್ನು ಹಿಂದಿರುಗಿಸಲು ನಿರ್ಧರಿಸಿರುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ.
ಸಿಎಂ ಬಂಧನ ಸಾಧ್ಯವೇ?ಎಫ್‌ಐಆರ್‌ನಲ್ಲಿ ಸಿದ್ದರಾಮಯ್ಯ ಅವರನ್ನು ಎ1 ಆರೋಪಿ ಎಂದು ಹೆಸರಿಸಲಾಗಿದೆ. ಇಡಿ 2 ಸಂದರ್ಭಗಳಲ್ಲಿ ಆರೋಪಿಗಳನ್ನು ಬಂಧಿಸುತ್ತದೆ. ಮೊದಲನೆಯದಾಗಿ, ಆರೋಪಿಯು ತನಿಖೆಗೆ ಸಹಕರಿಸುವುದಿಲ್ಲ ಎಂದಾಗ ಮತ್ತು ಎರಡನೆಯದಾಗಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದಾಗ. ಹೀಗಾಗಿ ಮುಡಾದಲ್ಲಿ ಸಿದ್ದರಾಮಯ್ಯ ಬಂಧನವಾಗುತ್ತಾ ಎಂಬುದನ್ನು ಕಾದುನೋಡಬೇಕಿದೆ.