ಈ ಬಾರಿಯ ಕಂಬಳ ಸೀಸನ್‌ನಲ್ಲಿ ಜಿಲ್ಲಾಡಳಿತದ ನೇತೃತ್ವದಲ್ಲೇ ಪಿಲಿಕುಳದಲ್ಲಿ ಸರ್ಕಾರಿ ಪ್ರಾಯೋಜಿತ ಕಂಬಳ ನಡೆಸುವುದಕ್ಕೆ ಎಲ್ಲಾ ತಯಾರಿ ಮಾಡಿಕೊಳ್ಳಲಾಗಿತ್ತು. ಕೇವಲ ಕಂಬಳ ಮಾತ್ರವಲ್ಲದೇ ಕೃಷಿ ಮತ್ತು ಜಾನುವಾರು ಮೇಳ, ಜಿಲ್ಲಾ ಮಟ್ಟದ ಜಾನಪದ ಕ್ರೀಡಾ ಕಾರ್ಯಕ್ರಮ ಸೇರಿದಂತೆ ನಾಲ್ಕು ದಿನಗಳ ತುಳುನಾಡು ಉತ್ಸವ ನಡೆಸಲು ತೀರ್ಮಾನಿಸಲಾಗಿತ್ತು. ಆದ್ರೆ ಮೃಗಾಲಯದ ಬಳಿ ಕಂಬಳ ನಡೆಸಿದರೆ ಶಬ್ದಮಾಲಿನ್ಯದಿಂದ ಪ್ರಾಣಿಗಳಿಗೆ ತೊಂದರೆಯಾಗುತ್ತದೆ. ಇದರ ಜೊತೆ 200ಕ್ಕೂ ಹೆಚ್ಚು ಜೋಡಿ ಕೋಣ ಸ್ಪರ್ಧೆ ನಡೆಯುವ ಸ್ಥಳಕ್ಕೆ ಬರುವುದರಿಂದ ಮೃಗಾಲಯದ ಪ್ರಾಣಿಗಳಿಗೆ ವಿವಿಧ ರೀತಿಯ ರೋಗ ರುಜಿನಗಳು ಹರಡುವ ಸಾಧ್ಯತೆ ಇದೆ ಎಂಬುದು ಪ್ರಾಣಿಪ್ರಿಯರ ವಾದವಾಗಿದ್ದು, ಹೀಗಾಗಿ ಹೈಕೋರ್ಟ್ನಲ್ಲಿ ಹಾಕಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿ ಹೈಕೋರ್ಟ್, ಜಿಲ್ಲಾಡಳಿತ ಹಾಗೂ ಪಿಲಿಕುಳ ಅಭಿವೃದ್ದಿ ಪ್ರಾಧಿಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಸದ್ಯ ಕಂಬಳ ನಡೆಸುವುದಕ್ಕೆ ಇವರ ವಿರೋಧವಿಲ್ಲ. ಆದರೆ, ನಡೆಸುವ ಸ್ಥಳಗಳ ಬಗ್ಗೆ ಹಾಗೂ ಪ್ರಾಣಿಗಳಿಗೆ ಆಗುವ ಹಿಂಸೆಯ ಬಗ್ಗೆ ಮಾತ್ರ ಇವರಿಗೆ ಆಕ್ಷೇಪವಿದೆ.
ಬೆಂಗಳೂರಿನಲ್ಲಿ ನಡೆಯುವ ಕಂಬಳಕ್ಕೂ ಪ್ರಾಣಿ ಪ್ರಿಯರು ವಿರೋಧ ವ್ಯಕ್ತಪಡಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಸದ್ಯ ಈ ದೂರಿನ ಸಂಬಂಧದ ವಿಚಾರಣೆಯನ್ನು ನ್ಯಾಯಾಲಯ ಕೈಗೆತ್ತಿಕೊಂಡಿದ್ದು ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.