ಉ.ಪ್ರ: ಉತ್ತರ ಪ್ರದೇಶದ ಝಾನ್ಸಿಯ ವೈದ್ಯಕೀಯ ಕಾಲೇಜಿನಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 10 ನವಜಾತ ಶಿಶುಗಳು ಸಾವನ್ನಪ್ಪಿವೆ.
ಯಾಕುಂ ಮನ್ಸೂರಿ ಮತ್ತು ಅವರ ಪತ್ನಿ ನಜ್ಮಾ ಅವಳಿ ಮಕ್ಕಳ ಮೇಲೆ ನಿಗಾ ಇಡಲು ಒಬ್ಬರಾದ ಮೇಲೊಬ್ಬರು ಅಲ್ಲಿರುತ್ತಿದ್ದರು. ನವೆಂಬರ್ 15 ರ ರಾತ್ರಿ ಬೆಂಕಿ ಹೊತ್ತಿಕೊಂಡಾಗ ಅವರು ಮಹಾರಾಣಿ ಲಕ್ಷ್ಮೀ ಬಾಯಿ ವೈದ್ಯಕೀಯ ಕಾಲೇಜಿನ ನವಜಾತ ತೀವ್ರ ನಿಗಾ ಘಟಕದ ಹೊರಗೆ ಮಲಗಿದ್ದರು. ಬೆಂಕಿ ಹೊತ್ತಿಕೊಂಡ ಸಂದರ್ಭ ಯಾಕುಂ ಮನ್ಸೂರಿ ಕಿಟಕಿಯನ್ನು ಒಡೆದು ಕೊಠಡಿಗೆ ಧಾವಿಸಿ ಸಾಧ್ಯವಾದಷ್ಟು ಶಿಶುಗಳನ್ನು ರಕ್ಷಿಸಲು ಪ್ರಯತ್ನಿಸಿದರು. ಆದರೆ ಈ ವೇಳೆ ತಮ್ಮ ಸ್ವಂತ ಅವಳಿ ಹೆಣ್ಣು ಮಕ್ಕಳನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಘಟನೆಯಲ್ಲಿ ಕೆಲ ಮಕ್ಕಳ ತಾಯಂದಿರು ತಮ್ಮ ಕಣ್ಣ ಮುಂದೆಯೇ ನವಜಾತ ಮಗು ಸುಟ್ಟು ಹೋಗುವ ದೃಶ್ಯವನ್ನು ನೋಡಿರುವುದಾಗಿ ವರದಿಯಾಗಿದೆ.