ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಎಸ್.ಡಿ.ಎಂ. ಪ್ರಕೃತಿಚಿಕಿತ್ಸಾ ಮತ್ತು ಯೋಗವಿಜ್ಞಾನಗಳ ಕಾಲೇಜು ಉಜಿರೆ: ಧರ್ಮಸ್ಥಳದಲ್ಲಿ ಮೂವತ್ತೊಂದನೆಯ ಪದವಿ ಪ್ರದಾನ ಸಮಾರಂಭ:

ಎಸ್.ಡಿ.ಎಂ. ಪ್ರಕೃತಿಚಿಕಿತ್ಸಾ ಮತ್ತು ಯೋಗವಿಜ್ಞಾನಗಳ ಕಾಲೇಜು ಉಜಿರೆ: ಧರ್ಮಸ್ಥಳದಲ್ಲಿ ಮೂವತ್ತೊಂದನೆಯ ಪದವಿ ಪ್ರದಾನ ಸಮಾರಂಭ:

 

 

 

ಬೆಳ್ತಂಗಡಿ: ದೇಹ ಮತ್ತು ಮನಸ್ಸಿನ ಆರೋಗ್ಯ ರಕ್ಷಣೆಗೆ ಯೋಗಾಭ್ಯಾಸ ಮತ್ತು ಪ್ರಕೃತಿಚಿಕಿತ್ಸಾ ಪದ್ಧತಿ ಅತ್ಯಂತ ಪರಿಣಾಮಕಾರಿಯಾಗಿದ್ದು ಪಾರಂಪರಿಕ ಪದ್ಧತಿಯ ಬಗ್ಯೆ ಜನರಲ್ಲಿ ಅರಿವು, ಜಾಗೃತಿ ಮೂಡಿಸಿ ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು ಎಂದು ಉಪಕುಲಪತಿ ಡಾ. ಭಗವಾನ್ ಬಿ.ಸಿ. ಹೇಳಿದರು. ಅವರು ಭಾನುವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದದಲ್ಲಿ ಉಜಿರೆಯ ಎಸ್.ಡಿ.ಎಂ. ಪ್ರಕೃತಿಚಿಕಿತ್ಸಾ ಮತ್ತು ಯೋಗವಿಜ್ಞಾನಗಳ ಕಾಲೇಜಿನ ಮೂವತ್ತೊಂದನೆ ವರ್ಷದ ಪದವಿ ಪ್ರದಾನ ಸಮಾರಂಭದಲ್ಲಿ ಘಟಿಕೋತ್ಸವ ಭಾಷಣ ಮಾಡಿ ನೂತನ ಪದವೀಧರರಿಗೆ ಶುಭ ಹಾರೈಸಿದರು. ಪ್ರಕೃತಿಯಿಂದ ವಿಮುಖವಾದ ಆಧುನಿಕ ಜೀವನಶೈಲಿ, ಆಹಾರ ಸೇವನಾ ಕ್ರಮ, ಬೀಡಿ, ಸಿಗರೇಟು ಸೇವನೆ, ಮದ್ಯಪಾನ ಮೊದಲಾದ ದುಶ್ಚಟಗಳಿಗೆ ಬಲಿಯಾಗುವುದು ಇತ್ಯಾದಿ ಕಾರಣಗಳಿಂದ ಯುವಜನತೆ ದಾರಿತಪ್ಪುತ್ತಿದ್ದಾರೆ. ಹೆಚ್ಚಾಗಿ ಯುವತಿಯರು ಕೂಡಾ ದುಶ್ಚಟಗಳಿಗೆ ಬಲಿಯಾಗಿ ಆರೋಗ್ಯಭಾಗ್ಯ ಕಳೆದುಕೊಳ್ಳುತ್ತಿರುವುದು ಖೇದಕರವಾಗಿದೆ. ಪ್ರಾಚೀನ ಕಾಲದಿಂದಲೂ ಪ್ರಶಾಂತ ಪ್ರಕೃತಿಯ ಮಡಿಲಲ್ಲಿ ಯೋಗಾಭ್ಯಾಸ, ಕರ್ಮಯೋಗ, ಭಕ್ತಿಯೋಗ, ಜ್ಞಾನಯೋಗ ಮೊದಲಾದವುಗಳ ಮೂಲಕ ಆರೋಗ್ಯಭಾಗ್ಯ ಕಾಪಾಡಿಕೊಳ್ಳುತ್ತಿದ್ದರು. ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಳಸಿ ಪ್ರಕೃತಿಚಿಕಿತ್ಸಾ ಪದ್ಧತಿಯನ್ನು ಜನಪ್ರಿಯಗೊಳಿಸಲಾಗುವುದು. ಇದಕ್ಕಾಗಿ ಬೆಂಗಳೂರಿನಲ್ಲಿ ಸದ್ಯದಲ್ಲಿಯೇ ೬೦ ಎಕ್ರೆ ಪ್ರದೇಶದಲ್ಲಿ ಸಂಶೋಧನಾ ಕೇಂದ್ರವನ್ನು ಪ್ರಾರಂಭಿಸಲಾಗುವುದು. ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿ.ವಿ. ಮೂಲಕ ಯೋಗಾಭ್ಯಾಸ ಮತ್ತು ಪ್ರಕೃತಿಚಿಕಿತ್ಸಾ ಪದ್ಧತಿ ಪ್ರಚಾರಕ್ಕೆ ಒತ್ತು ನೀಡಲಾಗುವುದು. ನೂತನ ಪದವೀಧರರು ಸಮಸ್ಯೆಗಳನ್ನು ಮತ್ತು ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಮಾನವೀಯತೆ, ದಯೆ, ಅನುಕಂಪ ಮತ್ತು ಪ್ರೀತಿಯಿಂದ ರೋಗಿಗಳ ಸೇವೆ ಮಾಡಬೇಕು. ಜೊತೆಗೆ ಹೆಚ್ಚಿನ ಅಧ್ಯಯನ, ಸಂಶೋಧನೆಯೊಂದಿಗೆ ಜ್ಞಾನಕ್ಷಿತಿಜವನ್ನೂ ವಿಸ್ತರಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ಉಜಿರೆ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜು ಹಾಗೂ ಶಾಂತಿವನದಲ್ಲಿ ಪ್ರಕೃತಿಚಿಕಿತ್ಸಾ ಆಸ್ಪತ್ರೆಯ ಸೇವೆ-ಸಾಧನೆಯನ್ನು ಶ್ಲಾಘಿಸಿ ಅವರು ಅಭಿನಂದಿಸಿದರು. ಕಾಲೇಜು ಮತ್ತು ಆಸ್ಪತ್ರೆಯ ಪ್ರಗತಿಗೆ ವಿಶ್ವವಿದ್ಯಾಲಯದಿಂದ ಪೂರ್ಣ ಸಹಕಾರ ನೀಡುವುದಾಗಿ ಅವರು ಭರವಸೆ ನೀಡಿದರು. ಈ ಪಾರಂಪರಿಕ ಪದ್ಧತಿಗೆ ಹೆಚ್ಚಿನ ಮಾನ್ಯತೆ ನೀಡುವಂತೆ ಕೇಂದ್ರಸರ್ಕಾರವನ್ನು ಒತ್ತಾಯಿಸುವುದಾಗಿ ಅವರು ತಿಳಿಸಿದರು. ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ಸುಜಾತೆ ಕೆ.ಜೆ. ನೂತನ ಪದವೀಧರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರಥಮವಾಗಿ ಡಾಕ್ಟರೇಟ್ ಪದವಿ ಪಡೆದ ಕಾಲೇಜಿನ ಉಪನ್ಯಾಸಕಿ ಡಾ. ಗೀತಾ ಬಿ. ಶೆಟ್ಟಿ ಅವರನ್ನು ಗೌರವಿಸಲಾಯಿತು. ಅಧ್ಯಕ್ಷತೆ ವಹಿಸಿದ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಮಾತನಾಡಿ, ಪ್ರಕೃತಿಚಿಕಿತ್ಸಾ ಆಸ್ಪತ್ರೆ ಬೆಳೆದು ಬಂದ ಹಾದಿ ಹಾಗೂ ಉತ್ತಮ ಸೇವೆ ಬಗ್ಗೆ ಪ್ರಾಂಶುಪಾಲರು ಹಾಗೂ ವೈದ್ಯರನ್ನು ಅಭಿನಂದಿಸಿದರು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಎಸ್. ಸತೀಶ್ಚಂದ್ರ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ. ಪ್ರಶಾಂತ ಶೆಟ್ಟಿ ಸ್ವಾಗತಿಸಿದರು. ಶಾಂತಿವನ ಪ್ರಕೃತಿಚಿಕಿತ್ಸಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶಿವಪ್ರಸಾದ್ ಕೆ. ಧನ್ಯವಾದವಿತ್ತರು. ಡಾ. ರಿಷಿಕಾ ಮತ್ತು ಕುಮಾರಿ ಕಾವ್ಯ ಎಂ. ಕಾರ್ಯಕ್ರಮ ನಿರ್ವಹಿಸಿದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!