ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಬೆಂಗಳೂರು ಆಲಿಕಲ್ಲು ಸಹಿತ ಭಾರೀ ಮಳೆ, ಆಸ್ಪತ್ರೆ ಕಂಪೌಂಡ್ ಕುಸಿದು ಮಗು ಸಹಿತ 7 ಜನರ ದುರ್ಮರಣ:

ಬೆಂಗಳೂರು ಆಲಿಕಲ್ಲು ಸಹಿತ ಭಾರೀ ಮಳೆ, ಆಸ್ಪತ್ರೆ ಕಂಪೌಂಡ್ ಕುಸಿದು ಮಗು ಸಹಿತ 7 ಜನರ ದುರ್ಮರಣ:

 

 

 

ಬೆಂಗಳೂರು: ನಗರದಲ್ಲಿ ಇಂದು ಸಂಜೆ ಧಾರಾಕಾರ ಮಳೆ ಸುರಿಯುತ್ತಿದ್ದು, ಬೌರಿಂಗ್‌ ಮತ್ತು ಲೇಡಿ‌ ಕರ್ಜನ್ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿದು 7 ಜನ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ತುರ್ತು ಚಿಕಿತ್ಸಾ ವಿಭಾಗದ ಪಕ್ಕದಲ್ಲಿದ್ದ ಗೋಡೆ ಕುಸಿದ ಪರಿಣಾಮ ಪಕ್ಕದ ರಸ್ತೆಯಲ್ಲಿದ್ದ ಫುಟ್‌ಪಾತ್‌ ಮೇಲೆ ವ್ಯಾಪಾರ ಮಾಡುತ್ತಿದ್ದವರು, ಪಾದಚಾರಿಗಳಲ್ಲಿ ಓರ್ವ ಮಗು ಸಹಿತ 7 ಜನ ಮೃತಪಟ್ಟಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಕಾಂಪೌಂಡ್ ಗೋಡೆ ಕುಸಿದಿದ್ದರಿಂದ 10ಕ್ಕೂ ಅಧಿಕ ಮಂದಿ ಸಿಲುಕಿದ್ದು, ತಕ್ಷಣ ಅಲ್ಲಿದ್ದ ಸಾರ್ವಜನಿಕರು ಕಾರ್ಯಾಚರಣೆ ನಡೆಸಿ ಕೆಲವರನ್ನು ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ.

ಆಸ್ಪತ್ರೆ ಕಾಂಪೌಂಡ್ ಗೋಡೆಯನ್ನು ಹೊಸತಾಗಿ ನಿರ್ಮಾಣ ಮಾಡಲಾಗುತ್ತಿತ್ತು. ಹಳೆಯ ಗೋಡೆಗೆ ಹೊಂದಿಕೊಂಡಂತೆ ದೊಡ್ಡ ಟಾರ್ಪಲ್‌ ಹಾಕಿ ಕೆಲವರು ರಸ್ತೆ ಪಕ್ಕದಲ್ಲಿ ವ್ಯಾಪಾರ ಮಾಡುತ್ತಿದ್ದರು. ಸಂಜೆ ವೇಳೆ ಆರಂಭವಾದ ಮಳೆಗೆ ನೀರು ಬಿದ್ದು ಹಳೆಯ ಗೋಡೆ ಏಕಾಏಕಿ ಕುಸಿದಿದೆ ಎಂದು ಕೆಲ ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹಾಗೂ ಶಿವಾಜಿನಗರ ಠಾಣೆ ಪೊಲೀಸರು ಭೇಟಿ ನೀಡಿದ್ದು ಮಾಹಿತಿ ಪಡೆಯುತ್ತಿದ್ದಾರೆ.

ಆಸ್ಪತ್ರೆಗೆ ಸಿಎಂ ಭೇಟಿ, ಪಾಲಿಕೆ ಅಧಿಕಾರಿಗಳಿಗೆ ತರಾಟೆ: ಘಟನೆ ಬೆನ್ನಲ್ಲೇ, ಬೌರಿಂಗ್ ಹಾಗೂ ಲೇಡಿ ಕರ್ಜನ್ ಆಸ್ಪತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದರು. ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರಿಂದ ಮಾಹಿತಿ ಪಡೆದಿರುವ ಅವರು ಗಾಯಾಳುಗಳನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.

 

ಮುನ್ನೆಚ್ಚರಿಕೆ ವಹಿಸಿದರೆ ಈ ರೀತಿಯ ಅವಘಡ ಸಂಭವಿಸುತ್ತಿತ್ತೇ? ಹಳೆಯ ಗೋಡೆಯನ್ನು ಇಷ್ಟು ದಿನ ಗಮನಿಸಿರಲಿಲ್ಲವಾ? ಇಲಾಖೆಗಳ ನಡುವೆ ಸಮನ್ವಯತೆ ಇಲ್ಲವೇ? ಎಂದು ಪಾಲಿಕೆ ಅಧಿಕಾರಿಗಳನ್ನು ಸಿಎಂ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ರೀತಿಯ ಹಳೆಯ ಕಾಂಪೌಂಡ್ ಬೇರೆ ಸ್ಥಳಗಳಲ್ಲಿದ್ದರೆ, ಕೂಡಲೇ ಅವುಗಳ ತೆರವು ಕಾರ್ಯಾಚರಣೆ ನಡೆಸುವಂತೆ ಅಧಿಕಾರಿಗಳಿಗೆ ಸಿಎಂ ತಾಕೀತು ಮಾಡಿದ್ದಾರೆ.

ಘಟನೆ ಬಗ್ಗೆ ಕನಕಪುರದಲ್ಲಿ ಪ್ರತಿಕ್ರಿಯಿಸಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ''ನನಗೆ ಪೊಲೀಸ್​ ಕಮಿಷನರ್​ ಮಾಹಿತಿ ನೀಡಿದರು. ನಾನು ಸಭೆ ಅರ್ಧಕ್ಕೆ ನಿಲ್ಲಿಸಿ, ಬೆಂಗಳೂರಿಗೆ ಹೋಗುತ್ತಿದ್ದೇನೆ. ಸ್ಥಳಕ್ಕೆ ಭೇಟಿ ನೀಡಲಿದ್ದೇನೆ. ಜನರು ಹಾಗೂ ಅಧಿಕಾರಿಗಳನ್ನು ಭೇಟಿ ಮಾಡುತ್ತೇನೆ'' ಎಂದು ತಿಳಿಸಿದರು.

ಸಂಜೆಯಾಗುತ್ತಿದ್ದಂತೆ ನಗರದ ಹಲವೆಡೆ ಬಿರುಗಾಳಿ, ಆಲಿಕಲ್ಲು ಸಹಿತ ಧಾರಾಕಾರ ಮಳೆಯಾಗಿದೆ. ದಿಢೀರ್ ಮಳೆಯಿಂದ ವಾಹನ ಸವಾರರು ಪರದಾಡುವಂತಾಗಿದೆ. ನಗರದ ಮೆಜೆಸ್ಟಿಕ್, ಕೆ.ಆರ್.ಮಾರುಕಟ್ಟೆ, ರಾಜಾಜಿನಗರ, ಮಲ್ಲೇಶ್ವರಂ, ಶಾಂತಿನಗರ, ರಿಚ್ಮಂಡ್ ಸರ್ಕಲ್, ವಿಲ್ಸನ್ ಗಾರ್ಡನ್, ಕೋರಮಂಗಲ ಸೇರಿದಂತೆ ಹಲವೆಡೆ ಭಾರಿ ಮಳೆ ಸುರಿಯುತ್ತಿದೆ.

ವಿಲ್ಸನ್ ಗಾರ್ಡನ್‌ನ ಹೆರಿಗೆ ಆಸ್ಪತ್ರೆ ಆವರಣಕ್ಕೆ ಮಳೆ ನೀರು ನುಗ್ಗಿದೆ. ಪರಿಣಾಮ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದ ವಾಹನಗಳು ಮುಳುಗಡೆಯಾಗಿದ್ದು ವಾಹನ ಹೊರತೆಗೆಯಲು ಸವಾರರು ಪರದಾಡುವಂತಾಗಿದೆ. ಮತ್ತೊಂದೆಡೆ‌ ಮಲ್ಲೇಶ್ವರಂನಲ್ಲಿ ರಸ್ತೆ ಮೇಲೆ ಮರ ಉರುಳಿದ ಪರಿಣಾಮ ವಾಹನಗಳು ಜಖಂಗೊಂಡ ಘಟನೆ ವರದಿಯಾಗಿದೆ. ಮಳೆಯ ಅಬ್ಬರ ಮುಂದುವರೆದಿದ್ದು, ಸಿಲಿಕಾನ್ ಸಿಟಿಯ ಜನರು ಆತಂಕದಲ್ಲಿರುವಂತೆ  ಮಾಡಿದೆ.

 

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!