ಕುರ್ಚಿ ಬದಲಾವಣೆ ಚರ್ಚೆಯ ಮಧ್ಯೆ ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ಸಿಎಂ ಸಿದ್ದರಾಮಯ್ಯ ಅವರು ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ತಮ್ಮ ಸಂಪುಟ ಸಹೋದ್ಯೋಗಿಗಳೊಂದಿಗೆ ಉಪಹಾರ ಸಭೆ ನಡೆಸಿದರು. ಸರ್ಕಾರಿ ನಿವಾಸ ಕಾವೇರಿಯಲ್ಲಿ ನಡೆದ ಈ ಸಭೆಯಲ್ಲಿ, ಸಿದ್ದರಾಮಯ್ಯ ತಮ್ಮ ನಿರ್ಧಾರ ಪ್ರಕಟಿಸಿದರು.
ಅಧಿಕಾರ ಹಸ್ತಾಂತರ ಸಂಬಂಧ ಮಂಗಳವಾರ ದೆಹಲಿಯಲ್ಲಿ ನಡೆದ ಹೈಕಮಾಂಡ್ ನೇತೃತ್ವದ ಸಭೆ ನಡೆದಿತ್ತು. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನವನ್ನು ಬೇರೆಯವರಿಗೆ ನೀಡಲು ಸಮ್ಮತಿಸಿದ್ದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಂದಲೇ ಸಂದೇಶ ಬಂದಿದ್ದರಿಂದ, ಸಿದ್ದರಾಮಯ್ಯ ರಾಜೀನಾಮೆ ನೀಡಲು ನಿರ್ಧರಿಸಿದರು ಎಂದು ವಿಶ್ವಾಸನೀಯ ಮೂಲಗಳು ಹೇಳಿವೆ.
ಬಳಿಕ ಮಂಗಳವಾರವೇ ಸಿದ್ದರಾಮಯ್ಯ ಬೆಂಗಳೂರಿಗೆ ಮರಳಿದ್ದರು. ಆದರೆ ಅಧಿಕಾರ ಹಸ್ತಾಂತರದ ಬಗ್ಗೆ ಕಾಂಗ್ರೆಸ್ನ ಯಾವೊಬ್ಬ ನಾಯಕರಿಂದಲೂ ಸ್ಪಷ್ಟ ಹೇಳಿಕೆ ಹೊರಬಂದಿರಲಿಲ್ಲ. ಸಿದ್ದರಾಮಯ್ಯ ಅವರೇ ಬ್ರೇಕ್ ಫಾಸ್ಟ್ ಸಭೆಯಲ್ಲಿ ತಮ್ಮ ನಿರ್ಧಾರವನ್ನು ಪ್ರಕಟಿಸಲಿದ್ದಾರೆ ಎಂದೇ ಹೇಳುತ್ತಿದ್ದರು. ಇದೀಗ ಎಲ್ಲಾ ಕುತೂಹಲಕ್ಕೆ ತೆರೆ ಬಿದ್ದಿದೆ.
ಮಧ್ಯಾಹ್ನ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರ ಭೇಟಿಗೆ ಸಮಯಾವಕಾಶ ಕೇಳಿರುವ ಸಿದ್ದರಾಮಯ್ಯ, ತಮ್ಮ ಹುದ್ದೆಗೆ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ. ಆದರೆ, ರಾಜ್ಯಪಾಲರು ಮಧ್ಯ ಪ್ರದೇಶದ ಇಂದೋರ್‌ಗೆ ತೆರಳಿದ್ದು, ಮಧ್ಯಾಹ್ನ 2.30 ಕ್ಕೆ ರಾಜ್ಯಪಾಲರ ವಿಶೇಷ ಕಾರ್ಯದರ್ಶಿಯವರಿಗೆ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸಿ ನಂತರ ಸುದ್ದಿಗೋಷ್ಟಿ ನಡೆಸಲಿದ್ದಾರೆ.