ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಕಾಂಗ್ರೆಸ್ ಸರ್ಕಾರ ಷಡ್ಯಂತ್ರಗಳಿಗೆ ಶಕ್ತಿ ತುಂಬುವ ಕೆಲಸ ಮಾಡಿರುವುದು ನೋವು ತಂದಿದೆ. ಧರ್ಮಸ್ಥಳ ವಿಚಾರದಲ್ಲಿ ದೊಡ್ಡ ಷಡ್ಯಂತ್ರ , ವಿದೇಶಿ ಕೈವಾಡದ ಬಗ್ಗೆ ತನಿಖೆಯಾಗಬೇಕು,ಬಿ.ವೈ. ವಿಜಯೇಂದ್ರ:

ಕಾಂಗ್ರೆಸ್ ಸರ್ಕಾರ ಷಡ್ಯಂತ್ರಗಳಿಗೆ ಶಕ್ತಿ ತುಂಬುವ ಕೆಲಸ ಮಾಡಿರುವುದು ನೋವು ತಂದಿದೆ. ಧರ್ಮಸ್ಥಳ ವಿಚಾರದಲ್ಲಿ ದೊಡ್ಡ ಷಡ್ಯಂತ್ರ , ವಿದೇಶಿ ಕೈವಾಡದ ಬಗ್ಗೆ ತನಿಖೆಯಾಗಬೇಕು,ಬಿ.ವೈ. ವಿಜಯೇಂದ್ರ:

 

 

ಬೆಂಗಳೂರು: ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಸ್ವಾಮಿಯ ಸನ್ನಿಧಿಗೆ ಕಳಂಕ ತರುವ ಬಹಳ ದೊಡ್ಡ ಷಡ್ಯಂತ್ರ ನಡೆದಿತ್ತು. ಇದು ಹಿಂದೂಗಳ ಧಾರ್ಮಿಕ ಶ್ರದ್ಧೆಗೆ ಕೊಡಲಿ ಪೆಟ್ಟು ಕೊಡುವ ಷಡ್ಯಂತ್ರ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿಂದು ಮಾತನಾಡಿದ ಅವರು, ಅಂದಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಯಾವುದನ್ನೂ ಪರಾಮರ್ಶೆ ಮಾಡದೇ ಯಾರೋ ಬೀದಿಯಲ್ಲಿ ಹೋಗುವವರು ಹೇಳಿದರೆಂದು ಎಸ್‍ಐಟಿ ತನಿಖೆಗೆ ಆದೇಶಿಸಿದ್ದು ಸಮರ್ಪಕ ನಿರ್ಧಾರ ಆಗಿರಲಿಲ್ಲ. ಧರ್ಮಸ್ಥಳದ ಪ್ರಕರಣದಲ್ಲಿ ಸಾಕಷ್ಟು ವಿಷಯಗಳು ಈಗ ಬೆಳಕಿಗೆ ಬಂದಿವೆ. ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ ಏಕಾಏಕಿ ಎಸ್‍ಐಟಿ ತನಿಖೆಗೆ ಆದೇಶಿಸಿದಾಗ ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು ಎಂದರು.

ಅಂದಿನ ಮುಖ್ಯಮಂತ್ರಿಗಳು ಒಂದು ದಿನ ಮುಂಚಿತವಾಗಿ ಯಾವುದೇ ತನಿಖೆಯ ಅವಶ್ಯಕತೆ ಇಲ್ಲ ಎಂದಿದ್ದರು. ಪಟ್ಟಭದ್ರ ಹಿತಾಸಕ್ತಿಗಳು ಅವರನ್ನು ಸ್ವಗೃಹದಲ್ಲಿ ಭೇಟಿ ಮಾಡಿದ ನಂತರ ಮುಖ್ಯಮಂತ್ರಿಗಳೇ ಎಸ್‍ಐಟಿ ತನಿಖೆಗೆ ಆದೇಶಿಸಿದ್ದರು ಎಂದು ಗಮನ ಸೆಳೆದರು. ಬಿಜೆಪಿ ಹಿಂದೆ ಧರ್ಮಸ್ಥಳ ಚಲೋ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿತ್ತು ಎಂದು ವಿವರಿಸಿದರು.

ಇದರಲ್ಲಿ ನೂರಾರು ಕೋಟಿ ಒಳಗೊಂಡಿದ್ದು ಈಗ ಗೊತ್ತಾಗುತ್ತಿದೆ. ನೂರಾರು ಕೋಟಿ ತೊಡಗಿಸಿಕೊಂಡ ಕಾರಣ ವಿದೇಶಿ ಶಕ್ತಿಗಳ ಕೈವಾಡದ ತನಿಖೆಯೂ ಆಗಬೇಕಿದೆ. ಕಾಂಗ್ರೆಸ್ ಸರ್ಕಾರವು ಇಂಥ ಷಡ್ಯಂತ್ರಗಳಿಗೆ ಶಕ್ತಿ ತುಂಬುವ ಕೆಲಸ ಮಾಡಿರುವುದು ನಮಗೆ ನೋವು ತಂದಿದೆ. ಯಾರ‍್ಯಾರು ಇದರ ಹಿಂದಿದ್ದರು?. ಯಾರ‍್ಯಾರು ಬಂಡವಾಳ ಹಾಕಿದ್ದರು?. ಅಂದಿನ ಸಿಎಂ ಯಾಕೆ ಕಣ್ಮುಚ್ಚಿ ಎಸ್‍ಐಟಿಗೆ ಕೊಟ್ಟರು. ಇವೆಲ್ಲವೂ ಸತ್ಯಾಸತ್ಯತೆ ಹೊರಕ್ಕೆ ಬರಬೇಕು ಎಂಬುದು ನಾಡಿನ ಜನರ ಮತ್ತು ಹಿಂದೂಗಳ ಅಪೇಕ್ಷೆ ಎಂದು ತಿಳಿಸಿದರು.

ಎಸ್‍ಐಟಿ ವರದಿ ಬಹಿರಂಗ ಮಾಡಲಿ: ಧರ್ಮಸ್ಥಳ ಪ್ರಕರಣದ ತನಿಖೆಗೆ ರಚಿಸಲಾಗಿರುವ ಎಸ್‍ಐಟಿಯ ವರದಿಯನ್ನು ಸರ್ಕಾರ ತಕ್ಷಣ ಬಹಿರಂಗ ಮಾಡಬೇಕು ಎಂದು ಶಾಸಕ ವಿ.ಸುನಿಲ್ ಕುಮಾರ್ ಆಗ್ರಹಿಸಿದ್ದಾರೆ.

ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ಮಾತನಾಡಿದ ಅವರು, ಎಸ್‍ಐಟಿ ರಚನೆ ಆಗಿ ಇಷ್ಟು ತಿಂಗಳು ಕಳೆದರೂ ವರದಿಯನ್ನು ಬಹಿರಂಗ ಮಾಡಿಲ್ಲ. ಈ ಪ್ರಕರಣದ ಹಿಂದೆ ಯಾರ ಕೈವಾಡ ಇದೆ ಎಂದು ಸರ್ಕಾರ ತಿಳಿಸಲಿ. ಹಿಂದೂ ಧಾರ್ಮಿಕ ಕ್ಷೇತ್ರ ಧರ್ಮಸ್ಥಳದ ಬಗ್ಗೆ ವಿನಾಕಾರಣ ಅವಹೇಳನೆ ಮಾಡಲಾಗುತ್ತಿದೆ. ದೊಡ್ಡ ಷಡ್ಯಂತ್ರ ರೂಪಿಸಿದ್ದ ಗ್ಯಾಂಗಿನ ಆರೋಪಿ ಕೋರ್ಟ್‌ಗೆ ನೀಡಿರುವ ಹೇಳಿಕೆ ಆಘಾತಕಾರಿಯಾಗಿದೆ. ಪ್ರಕರಣದ ಬಗ್ಗೆ ವಿಧಾನಸಭೆ ಹಾಗೂ ಪಕ್ಷದ ವತಿಯಿಂದ ಬೇರೆ ಬೇರೆ ಸಂದರ್ಭದಲ್ಲಿ ಉಲ್ಲೇಖ ಮಾಡಿದ್ದೆವು. ಇದರ ಹಿಂದೆ ಕೇರಳದ ನಂಟಿದೆ, ಬೇರೆ ಬೇರೆ ರಾಜ್ಯದ ನಂಟಿದೆ ಎಂದು ಹೇಳಿದ್ದೆವು ಎಂದು ಹೇಳಿದರು.

ಆರೋಪಿ ಎಸ್‍ಐಟಿ ಮುಂದೆ ಹೇಳಲಾಗದ್ದನ್ನು ನ್ಯಾಯಾಲಯದ ಮುಂದೆ ಹೇಳಿದ್ದಾನೆಂದರೆ ಎಸ್‍ಐಟಿ ಯಾವ ರೀತಿಯ ತನಿಖೆ ಮಾಡಿತ್ತು. ಇದರ ಹಿಂದಿರುವ ಹುನ್ನಾರ ಏನು?. ಎಲ್ಲವೂ ಸಾರ್ವಜನಿಕ ಚರ್ಚೆಗೆ ಬರಬೇಕಾಗಿದೆ. ಡಿ.ಕೆ.ಶಿವಕುಮಾರ್ ಅವರು, ಕಾಸು ಬಿಡದ ತಿಮ್ಮಪ್ಪ, ಮಾತು ಬಿಡದ ಮಂಜುನಾಥ ಅಂತ ಉಲ್ಲೇಖಿಸಿ, ತಾನು ಧರ್ಮಸ್ಥಳದ ಪರವಾಗಿ ಇದ್ದೇನೆ ಎಂದು ವಿಧಾನಸಭೆಯಲ್ಲಿ ಹೇಳಿದ್ದರು. ಕೇವಲ ಹೆಸರಿನಲ್ಲಿ ಶಿವ ಅಂತ ಇಟ್ಟುಕೊಂಡರೆ ಆಗಲ್ಲ. ಧರ್ಮಸ್ಥಳದ ಬಗ್ಗೆ ಯಾರು ಅವಹೇಳನ ಮಾಡಿದ್ದಾರೋ ಅವರನ್ನು ಸರ್ಕಾರ ಒದ್ದು ಒಳಗೆ ಹಾಕಬೇಕಿತ್ತು ಎಂದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!