ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಶಿಶಿಲ–ಬೈರಾಪುರ ರಸ್ತೆ ಅಭಿವೃದ್ಧಿಗೆ ನ.2ರಂದು ಬೃಹತ್ ಹಕ್ಕೊತ್ತಾಯ ಸಮಾವೇಶ ಅರಸಿನಮಕ್ಕಿಯಲ್ಲಿ ಸಮಾವೇಶ; 3 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ.

ಶಿಶಿಲ–ಬೈರಾಪುರ ರಸ್ತೆ ಅಭಿವೃದ್ಧಿಗೆ ನ.2ರಂದು ಬೃಹತ್ ಹಕ್ಕೊತ್ತಾಯ ಸಮಾವೇಶ ಅರಸಿನಮಕ್ಕಿಯಲ್ಲಿ ಸಮಾವೇಶ; 3 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ.




ಬೆಳ್ತಂಗಡಿ: ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಶಿಶಿಲ–ಬೈರಾಪುರ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ, ಶಿಶಿಲ ರಸ್ತೆ ಅಭಿವೃದ್ಧಿ ಹಕ್ಕೊತ್ತಾಯ ಸಮಿತಿಯ ವತಿಯಿಂದ ನ.2ರಂದು ಸೋಮವಾರ ಅರಸಿನಮಕ್ಕಿಯಲ್ಲಿ ಬೃಹತ್ ಹಕ್ಕೊತ್ತಾಯ ಸಮಾವೇಶ ಆಯೋಜಿಸಲಾಗಿದೆ. ಸಚಿವರು, ಸಂಸದರು, ಶಾಸಕರು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಸಮಿತಿಯ ಅಧ್ಯಕ್ಷ ರಾಘವೇಂದ್ರ ನಾಯಕ್ ತಿಳಿಸಿದರು.



ಅ.26ರಂದು ಬೆಳ್ತಂಗಡಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್, ಸಂಸದ ಬ್ರಿಜೇಶ್ ಚೌಟ, ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಹರೀಶ್ ಪೂಂಜ, ಕೆಪಿಸಿಸಿ ಜಿಲ್ಲಾ ಅಧ್ಯಕ್ಷ ಪದ್ಮರಾಜ್ ಆರ್. ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಚಂದ್ರಣ್ಣ ನಿಡ್ವಾಳೆ, ಮೂಡಿಗೆರೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ನಾಗೇಶ್ ಕುಮಾರ್, ಸಿಪಿಐಎಂ ತಾಲೂಕು ಕಾರ್ಯದರ್ಶಿ ಬಿ.ಎಂ. ಭಟ್ ಹಾಗೂ ಕೆಪಿಸಿಸಿ ಜಿಲ್ಲಾ ಕಾರ್ಯದರ್ಶಿ ಎ.ಸಿ. ಮ್ಯಾಥ್ಯು ಸೇರಿದಂತೆ ಹಲವು ನಾಯಕರು ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ ಎಂದರು. ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿರಲಿದ್ದು, 45ಕ್ಕೂ ಹೆಚ್ಚು ಸಂಘ-ಸಂಸ್ಥೆಗಳು ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿವೆ ಎಂದು ತಿಳಿಸಿದರು.



ಅರಸಿನಮಕ್ಕಿ ಪರಿಸರದ ಏಳು ಗ್ರಾಮಗಳ ಗ್ರಾಮಸ್ಥರು ಅರಸಿನಮಕ್ಕಿ ಆಟದ ಮೈದಾನದಲ್ಲಿ ಒಗ್ಗೂಡಿ, ಅಲ್ಲಿಂದ ವಾಹನ ಜಾಥಾದ ಮೂಲಕ ಸಮಾವೇಶ ನಡೆಯುವ ಸ್ಥಳಕ್ಕೆ ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸುಮಾರು 3 ಸಾವಿರಕ್ಕೂ ಅಧಿಕ ನಾಗರಿಕರು ಭಾಗವಹಿಸುವ ನಿರೀಕ್ಷೆಯಿದೆ ಎಂದರು.




50 ಸಾವಿರಕ್ಕೂ ಅಧಿಕ ಜನರಿಗೆ ಅನುಕೂಲ


ಶಿಶಿಲ–ಬೈರಾಪುರ ರಸ್ತೆಯನ್ನು ಅಭಿವೃದ್ಧಿಪಡಿಸಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿಬರುತ್ತಿದ್ದರೂ ಯೋಜನೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ರಾಜ್ಯ ಮತ್ತು ಕೇಂದ್ರ ಸರಕಾರಗಳು ಈ ಯೋಜನೆಗೆ ಆದ್ಯತೆ ನೀಡಿ ಅಗತ್ಯ ಅನುಮತಿಗಳನ್ನು ಒದಗಿಸಬೇಕು ಎಂದು ರಾಘವೇಂದ್ರ ನಾಯಕ್ ಆಗ್ರಹಿಸಿದರು.


ಶಿಶಿಲ, ಶಿಬಾಜೆ, ಅರಸಿನಮಕ್ಕಿ, ಹತ್ಯಡ್ಕ, ಕಳೆಂಜ, ರೆಖ್ಯ, ಕೌಕ್ರಾಡಿ, ಕೊಕ್ಕಡ ಹಾಗೂ ಬೈರಾಪುರ ಸುತ್ತಮುತ್ತಲಿನ ಗ್ರಾಮಗಳ 50 ಸಾವಿರಕ್ಕೂ ಅಧಿಕ ಜನರಿಗೆ ಈ ರಸ್ತೆ ಅಭಿವೃದ್ಧಿಯಿಂದ ಪ್ರಯೋಜನವಾಗಲಿದೆ. ಶಿಕ್ಷಣ, ಆರೋಗ್ಯ, ವ್ಯಾಪಾರ, ಸಾರಿಗೆ ಸಂಪರ್ಕ, ಕೃಷಿ ಉತ್ಪನ್ನಗಳ ಮಾರಾಟಕ್ಕೆ ಅನುಕೂಲವಾಗುವುದರ ಜತೆಗೆ ನಾಣ್ಯದ ಬೈರಾವೇಶ್ವರ ಸ್ವಾಮಿ ದೇವಸ್ಥಾನ ಮತ್ತು ಶ್ರೀ ಶಿಶಿಲೇಶ್ವರ ದೇವಸ್ಥಾನಗಳ ಪ್ರವಾಸೋದ್ಯಮ ಅಭಿವೃದ್ಧಿಗೂ ಸಹಕಾರಿಯಾಗಲಿದೆ. ಈ ಹಿನ್ನೆಲೆಯಲ್ಲಿ ಸರಕಾರದ ಗಮನ ಸೆಳೆಯಲು ಹಕ್ಕೊತ್ತಾಯ ಜಾಥಾ ಮತ್ತು ಸಮಾವೇಶ ಆಯೋಜಿಸಲಾಗಿದೆ ಎಂದು ವಿವರಿಸಿದರು.


ಪಕ್ಷಾತೀತ ಹೋರಾಟ


ಸಮಿತಿಯ ಕಾರ್ಯದರ್ಶಿ ಧರ್ಮರಾಜ್ ಅಡ್ಕಾಡಿ ಮಾತನಾಡಿ, ಹಕ್ಕೊತ್ತಾಯ ಸಮಾವೇಶ ಪಕ್ಷಾತೀತವಾಗಿ ನಡೆಯಲಿದೆ. ಎಲ್ಲ ರಾಜಕೀಯ ಪಕ್ಷಗಳ ನಾಯಕರು, ಧಾರ್ಮಿಕ ಮುಖಂಡರು ಹಾಗೂ ಶಿಶಿಲ, ಶಿಬಾಜೆ, ಅರಸಿನಮಕ್ಕಿ, ಹತ್ಯಡ್ಕ, ರೆಖ್ಯ, ಕಳೆಂಜ, ಕೊಕ್ಕಡ, ಬೈರಾಪುರ, ಊರುಬಗೆ ಮತ್ತು ಸತ್ತಿಗನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನರು ಭಾಗವಹಿಸಲಿದ್ದಾರೆ ಎಂದರು.


ಸಮಾವೇಶದ ಕುರಿತು ಎಲ್ಲ ಗ್ರಾಮಗಳಲ್ಲಿ ಮನೆಮನೆ ಸಂಪರ್ಕ ಅಭಿಯಾನ ನಡೆಯುತ್ತಿದ್ದು, ಹಲವಾರು ಸಂಘಟನೆಗಳು ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿವೆ. ಶಿಶಿಲ–ಬೈರಾಪುರ ಪರಿಸರಕ್ಕೆ ಯಾವುದೇ ರೀತಿಯ ಹಾನಿಯಾಗದಂತೆ ರಸ್ತೆ ನಿರ್ಮಾಣವಾಗಬೇಕು ಎಂಬುದು ಸಮಿತಿಯ ಆಶಯವಾಗಿದೆ ಎಂದು ತಿಳಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಹೋರಾಟ ಸಮಿತಿಯ ಸದಸ್ಯರಾದ ನರಸಿಂಹ ಗೌಡ, ಸುಂದರ ಕೆ., ಗೌರೀಶ್ ಅಮ್ಮಡಂಗೆ, ಪದ್ಮನಾಭ ಕೆ., ಪದ್ಮಪ್ಪ ಪೂಜಾರಿ, ರಾಧಾಕೃಷ್ಣ ಗುತ್ತು ಹಾಗೂ ಕರುಣಾಕರ ಗೌಡ ಉಪಸ್ಥಿತರಿದ್ದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!