ಬೆಳ್ತಂಗಡಿ: ಅಂತಾರಾಷ್ಟ್ರೀಯ ಕ್ರೀಡಾಪಟು ಶ್ರೀಮತಿ ಎಂ.ಆರ್. ಪೂವಮ್ಮ ಅವರಿಗೆ ರೂ.5.00 ಕೋಟಿ ವಿಶೇಷ ಪ್ರೋತ್ಸಾಹ ಧನ ನೀಡುವಂತೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಕ್ರೀಡಾಪಟುವಾಗಿರುವ ಎಂ.ಆರ್. ಪೂವಮ್ಮ ಅವರು ಹಲವು ವರ್ಷಗಳಿಂದ ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿ, ತಮ್ಮ ಕ್ರೀಡಾ ಸಾಧನೆಯ ಮೂಲಕ ಕರ್ನಾಟಕ ಹಾಗೂ ದೇಶಕ್ಕೆ ಕೀರ್ತಿ ತಂದಿದ್ದಾರೆ. 2014ರ ಏಷ್ಯನ್ ಗೇಮ್ಸ್‌ನಲ್ಲಿ 4x400 ಮೀಟರ್ ರಿಲೇಯಲ್ಲಿ ಚಿನ್ನದ ಪದಕ ಹಾಗೂ 400 ಮೀಟರ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. 2015ರ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿಯೂ ಪದಕ ಸಾಧನೆ ಮಾಡಿದ್ದಾರೆ. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿರುವ ಅವರು, 2018ರ ಏಷ್ಯನ್ ಗೇಮ್ಸ್‌ನಲ್ಲಿ ಮಿಶ್ರ 4x400 ಮೀಟರ್ ರಿಲೇಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
ಅವರ ಕ್ರೀಡಾ ಕ್ಷೇತ್ರದ ಗಮನಾರ್ಹ ಸಾಧನೆಯನ್ನು ಗುರುತಿಸಿ ಭಾರತ ಸರ್ಕಾರವು ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಿದೆ. ಇದೀಗ 2026ರ ಏಷ್ಯನ್ ಗೇಮ್ಸ್‌ನಲ್ಲಿಯೂ ಮಹಿಳೆಯರ 4x400 ಮೀಟರ್ ರಿಲೇಯಲ್ಲಿ ಚಿನ್ನದ ಪದಕ ಹಾಗೂ ಮಿಶ್ರ 4x400 ಮೀಟರ್ ರಿಲೇಯಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಮತ್ತೊಮ್ಮೆ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಹರೀಶ್ ಪೂಂಜ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಕ್ರೀಡಾಪಟುಗಳಿಗೆ ವಿವಿಧ ರಾಜ್ಯ ಸರ್ಕಾರಗಳು ನೀಡುತ್ತಿರುವ ಪ್ರೋತ್ಸಾಹಧನವನ್ನು ಕರ್ನಾಟಕ ಸರ್ಕಾರವೂ ಪರಿಗಣಿಸಬೇಕಾಗಿದೆ ಎಂದು ಅವರು ಮನವಿ ಮಾಡಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತರಿಗೆ ರೂ.4 ಕೋಟಿ, ಉತ್ತರ ಪ್ರದೇಶದಲ್ಲಿ ಕೆಲವು ಚಿನ್ನದ ಪದಕ ವಿಜೇತರಿಗೆ ರೂ.3 ಕೋಟಿವರೆಗೆ ಹಾಗೂ ಬಹುಪದಕ ವಿಜೇತರಿಗೆ ರೂ.5 ಕೋಟಿವರೆಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ. ಮಹಾರಾಷ್ಟ್ರ ಹಾಗೂ ಪಂಜಾಬ್ ರಾಜ್ಯಗಳಲ್ಲಿಯೂ ಚಿನ್ನದ ಪದಕ ವಿಜೇತರಿಗೆ ರೂ.1 ಕೋಟಿವರೆಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಪೂವಮ್ಮ ಅವರ ಒಂದು ಕ್ರೀಡಾಕೂಟದ ಸಾಧನೆಯನ್ನು ಮಾತ್ರ ಪರಿಗಣಿಸದೆ, ಹಲವು ವರ್ಷಗಳಿಂದ ದೇಶಕ್ಕಾಗಿ ಸಲ್ಲಿಸಿರುವ ಕ್ರೀಡಾ ಸೇವೆ, ಒಲಿಂಪಿಕ್ಸ್ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದ ಸಾಧನೆಗಳು ಹಾಗೂ 2026ರ ಏಷ್ಯನ್ ಗೇಮ್ಸ್‌ನಲ್ಲಿ ಗಳಿಸಿರುವ ಎರಡು ಪದಕಗಳನ್ನು ಸಮಗ್ರವಾಗಿ ಪರಿಗಣಿಸಬೇಕು ಎಂದು ಹರೀಶ್ ಪೂಂಜ ಒತ್ತಾಯಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಶ್ರೀಮತಿ ಎಂ.ಆರ್. ಪೂವಮ್ಮ ಅವರ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ಅವರಿಗೆ ರೂ.5.00 ಕೋಟಿ ವಿಶೇಷ ಪ್ರೋತ್ಸಾಹ ಧನ ಮಂಜೂರು ಮಾಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಪತ್ರದ ಮೂಲಕ ಆಗ್ರಹಿಸಿದ್ದಾರೆ.
ಇಂತಹ ಗೌರವವು ಪೂವಮ್ಮ ಅವರ ಸುದೀರ್ಘ ಕ್ರೀಡಾ ಸಾಧನೆಗೆ ಸೂಕ್ತ ಮಾನ್ಯತೆ ನೀಡುವುದರ ಜೊತೆಗೆ, ಕರ್ನಾಟಕದ ಯುವ ಕ್ರೀಡಾಪಟುಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಪ್ರೇರಣೆಯಾಗಲಿದೆ ಎಂದು ಹರೀಶ್ ಪೂಂಜ ತಿಳಿಸಿದ್ದಾರೆ.
