ಬೆಳ್ತಂಗಡಿ: ಉಜಿರೆಯ ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ಆಯೋಜಿಸಲಾದ ‘ಸ್ಪೀಕ್ಸ್’ ಕಾರ್ಯಕ್ರಮದ ಐದನೇ ಸೀಸನ್‌ನಲ್ಲಿ ವಿದ್ಯಾರ್ಥಿ ಪ್ರತಿಭೆಗಳು ಪ್ರಸ್ತುತಪಡಿಸಿದ ಕಥೆಗಳು ಹೊಸ ಕಾಲದ ಸಾಮಾಜಿಕ ವೈರುಧ್ಯಗಳು, ಯುವಮನಸ್ಸಿನ ತಲ್ಲಣಗಳು ಹಾಗೂ ಮಾನವೀಯ ಮೌಲ್ಯಗಳನ್ನು ವಿಭಿನ್ನ ಕಥನ ಶೈಲಿಯಲ್ಲಿ ಬಿಂಬಿಸಿದವು.
ಸುಧೀಕ್ಷಾ ಅವರ ‘ಕೊನೆ ಕರೆ’ ಕಥೆ ಪ್ರೀತಿ, ಸಮ್ಮತಿ ಹಾಗೂ ಸಾಂಪ್ರದಾಯಿಕತೆಯ ನಡುವಿನ ಸಂಘರ್ಷವನ್ನು ತೆರೆದಿಟ್ಟಿತು. ಇಷ್ಟದ ಹುಡುಗನಿಗೆ ಮನದ ಮಾತು ಹೇಳಿಕೊಳ್ಳುವ ಮುನ್ನ ಎದುರಾಗುವ ಆಘಾತ, ಹುಡುಗಿಯ ಸಮ್ಮತಿ ದೊರೆಯದ ಕಾರಣ ಮಾನಸಿಕ ಒತ್ತಡಕ್ಕೆ ಒಳಗಾಗುವ ಯುವಕನ ಮನಸ್ಥಿತಿ ಹಾಗೂ ಹೊಸ ತಲೆಮಾರಿನ ನಿರಾಶಾವಾದವನ್ನು ಕಥೆ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿತು.
ಹರ್ಷ ಅವರ ‘ಜಾಜಿ; ಅವಳು ಎಲ್ಲರಂತಲ್ಲ’ ಕಥೆ ಟ್ರಾನ್ಸ್‌ಜೆಂಡರ್ ಸಮುದಾಯದ ನೋವು ಮತ್ತು ಸಾಮಾಜಿಕ ಅಸಮಾನತೆಯನ್ನು ಕೇಂದ್ರವಾಗಿಸಿಕೊಂಡಿತ್ತು. ಅಂಕ ಗಳಿಸುವ ಉದ್ದೇಶದಿಂದ ಅನಿಚ್ಛೆಯಿಂದ ಸಂದರ್ಶನಕ್ಕೆ ತೆರಳುವ ವಿದ್ಯಾರ್ಥಿ, ಮಾತುಕತೆಯ ಅಂತ್ಯಕ್ಕೆ ನೋವಿನಲ್ಲಿರುವವರ ಪರ ನಿಲ್ಲುವ ಸಾಮಾಜಿಕ ಕಾಳಜಿಯುಳ್ಳ ವ್ಯಕ್ತಿಯಾಗಿ ಬದಲಾಗುವ ಪರಿವರ್ತನೆಯನ್ನು ಕಥೆ ಪರಿಚಯಿಸಿತು. ಶಿಕ್ಷಣದ ಪ್ರಾಯೋಗಿಕ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸಂವೇದನೆ ಬೆಳೆಸುವ ಸಾಧ್ಯತೆಯನ್ನು ಕಥೆ ಪರಿಣಾಮಕಾರಿಯಾಗಿ ತೋರಿಸಿತು.
ತರುಣ್‌ಕುಮಾರ್ ಅವರ ‘ಬೂದಿಯಾದ ಕನಸು’ ಗ್ರಾಮೀಣ ಯುವಕರ ಮದುವೆಯ ಸಮಸ್ಯೆಯ ಮೂಲಕ ಕೃಷಿ ಮತ್ತು ಗ್ರಾಮೀಣ ಬದುಕಿನ ಕಠೋರ ವಾಸ್ತವವನ್ನು ಬಿಂಬಿಸಿತು. ಕೃಷಿಯನ್ನೇ ನೆಚ್ಚಿಕೊಂಡಿರುವ ಯುವಕರಿಗೆ ಮದುವೆಯಾಗಲು ಹೆಣ್ಣು ಸಿಗದಿರುವ ಸಾಮಾಜಿಕ ಪರಿಸ್ಥಿತಿ ಅವರ ಬದುಕಿನ ಕನಸುಗಳನ್ನೇ ಹತ್ತಿಕ್ಕುತ್ತಿದೆ ಎಂಬುದನ್ನು ಪ್ರಾದೇಶಿಕ ಭಾಷೆಯ ಸೊಗಡು ಮತ್ತು ಲಯಬದ್ಧ ನಿರೂಪಣೆಯೊಂದಿಗೆ ಕಥೆ ಕಟ್ಟಿಕೊಟ್ಟಿತು. ನಗರೀಕರಣದ ಹೆಸರಿನಲ್ಲಿ ರೂಪುಗೊಂಡ ಅಭಿವೃದ್ಧಿಯ ಪರಿಕಲ್ಪನೆಯು ಗ್ರಾಮೀಣ ಯುವಜನರ ಬದುಕಿನ ಮೇಲೆ ಬೀರುತ್ತಿರುವ ಪರಿಣಾಮವನ್ನೂ ಕಥೆ ತೆರೆದಿಟ್ಟಿತು.
ಅಕ್ಷತಾ ಅವರ ‘ಪ್ರೀತಿ ಕತೆ ಪ್ರೇತದ ಜೊತೆ’ ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬಂದ ವಿಭಿನ್ನ ಪ್ರಯೋಗವಾಗಿತ್ತು. ಮಗಳ ಮದುವೆಯ ಕುರಿತಾದ ಸಾಂಪ್ರದಾಯಿಕ ಒತ್ತಡ ತಂದೆ ಮತ್ತು ಮಗಳಿಬ್ಬರನ್ನೂ ಮಾನಸಿಕವಾಗಿ ಕಾಡುವ ಸ್ಥಿತಿಯನ್ನು ಪ್ರೇತದ ರೂಪಕದ ಮೂಲಕ ಕಥೆ ನಿರೂಪಿಸಿತು. ಮದುವೆಯಾಗಬೇಕೆಂಬ ಬಯಕೆ ಮತ್ತು ಈಗಲೇ ಮದುವೆಯಾಗಬಾರದೆಂಬ ತೊಳಲಾಟದ ನಡುವಿನ ಸಂಘರ್ಷವು ಕಥೆಯ ಕುತೂಹಲವನ್ನು ಹೆಚ್ಚಿಸಿತು.
ವಿಭಾಗದ ಹಳೆಯ ವಿದ್ಯಾರ್ಥಿನಿ ನೈದಿಲೆ ಶೇಷೇಗೌಡ ಅವರ ಕಥೆ ಪ್ರೀತಿಯು ಯಾವುದೇ ಪೂರ್ವನಿರ್ಧರಿತ ಚೌಕಟ್ಟಿಗೆ ಸೀಮಿತವಾಗುವುದಿಲ್ಲ ಎಂಬ ಆಶಯವನ್ನು ಬಿಂಬಿಸಿತು. ಅನಿರೀಕ್ಷಿತವಾಗಿ ಹುಟ್ಟಿ ಜೀವಗಳನ್ನು ತಂಪಾಗಿಸುವ ಹಾಗೂ ಅಮರತ್ವ ಪಡೆಯುವ ಶಕ್ತಿ ಪ್ರೀತಿಗಿದೆ ಎಂಬ ಸಂದೇಶವನ್ನು ಕಥೆ ನೀಡಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಬೆಂಗಳೂರು ಆಕಾಶವಾಣಿಯ ಹಿರಿಯ ಉದ್ಘೋಷಕಿ ಬಿ.ಕೆ. ಸುಮತಿ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಕಥೆಗಳನ್ನು ವಿಮರ್ಶಿಸಿ, ಸ್ಪೀಕ್ಸ್‌ನ ಐದನೇ ಸೀಸನ್‌ನ ಕಥೆಗಳು ಮೌಲಿಕ ಅನುಭವವನ್ನು ನೀಡಿವೆ ಎಂದು ಅಭಿಪ್ರಾಯಪಟ್ಟರು.
ಎಸ್.ಡಿ.ಎಂ. ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ್ ಪಿ. ಮಾತನಾಡಿ, ಸ್ಪೀಕ್ಸ್‌ನ ಐದೂ ಸಂಚಿಕೆಗಳಲ್ಲಿ ಪ್ರಸ್ತುತಪಡಿಸಲಾದ ಕಥೆಗಳು ವಿಭಿನ್ನ ಪ್ರಯೋಗಶೀಲತೆಯಿಂದ ಗುರುತಿಸಿಕೊಂಡಿವೆ. ಈ ವೇದಿಕೆ ಹೊಸ ಪ್ರತಿಭೆಗಳಿಗೆ ಸ್ಪೂರ್ತಿ ನೀಡುತ್ತಿದೆ ಎಂದರು.
ವಿಭಾಗದ ಮುಖ್ಯಸ್ಥ ಡಾ. ಹಂಪೇಶ್ ಕೆ.ಎಸ್. ಮಾತನಾಡಿ, ವಿಭಾಗದ ಪ್ರಯೋಗಶೀಲ ಹೆಜ್ಜೆಗಳಲ್ಲಿ ಸ್ಪೀಕ್ಸ್ ವಿನೂತನವಾದುದು ಎಂದರು. ಕಾರ್ಯಕ್ರಮದ ಸಂಚಾಲಕಿ ಹಾಗೂ ಸಹಾಯಕ ಪ್ರಾಧ್ಯಾಪಕಿ ಡಾ. ಗೀತಾ ಎ.ಜೆ. ಸ್ಪೀಕ್ಸ್‌ನ ಧ್ಯೇಯೋದ್ದೇಶಗಳನ್ನು ವಿವರಿಸಿದರು.
ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ಸೌಮ್ಯ ಬಿ.ಪಿ., ಪತ್ರಿಕೋದ್ಯಮ ಪದವಿ ವಿಭಾಗದ ಮುಖ್ಯಸ್ಥ ಸುನೀಲ್ ಹೆಗ್ಡೆ ಹಾಗೂ ವಿಭಾಗದ ನಿಕಟಪೂರ್ವ ಮುಖ್ಯಸ್ಥ ಡಾ. ಭಾಸ್ಕರ್ ಹೆಗಡೆ ಉಪಸ್ಥಿತರಿದ್ದರು.
