ಭಾನುವಾರ ಆಶ್ರಮದ 150 ಮಂದಿ ಬಿಡುಗಡೆ ಹೊಂದಿ ಮರಳಿ ಸಿಯೋನ್ ಆಶ್ರಮ ತಲುಪಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸದೆ, ಸುರಕ್ಷಿತವಾಗಿ ಮರಳಿರುವುದು ನಿಸ್ವಾರ್ಥ ಸೇವಾ ಕೈಂಕರ್ಯಕ್ಕೆ ಸಾಕ್ಷಿಯಾದಂತಾಗಿದೆ.
ಕೊರೋನ ಸಂಕಷ್ಟದ ತುರ್ತು ಸಂದರ್ಭದಲ್ಲಿಯೂ ಧಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಅನೇಕ ಸೇವಾಕಾರ್ಯಗಳನ್ನು ಆಯೋಜಿಸಲಾಗಿದೆ. ರಾಜ್ಯದ ವಿವಿಧ ಊರುಗಳಲ್ಲಿ ಕೊರೊನಾ ಆರೈಕೆ ಕೇಂದ್ರ, ಸೋಂಕಿತರು ಆಸ್ಪತ್ರೆಗೆ ಹೋಗಲು ಮತ್ತು ಮನೆಗೆ ಬರಲು ಉಚಿತ ವಾಹನ ಸೌಲಭ್ಯ, ಆಸ್ಪತ್ರೆಗಳಿಗೆ ಆಮ್ಲಜನಕ ಸಾಂದ್ರಕಗಳ ಕೊಡುಗೆ ಇತ್ಯಾದಿ ಸೇವೆಗಳನ್ನು ಒದಗಿಸಲಾಗಿದೆ.
300 ಕೊಠಡಿಗಳ 600 ಹಾಸಿಗೆಗಳಿರುವ ವಸತಿಗೃಹವನ್ನು ಧರ್ಮಾಧಿಕಾರಿ ಡಾ. ಹೆಗ್ಗಡೆಯವರು ಕೊರೊನಾ ಆರೈಕೆ ಕೇಂದ್ರಕ್ಕಾಗಿ ಉಚಿತವಾಗಿ ನೀಡಿದ್ದರು. ನೆರಿಯಾ ಗ್ರಾಮದ ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ ಪಾಸಿಟಿವ್ ಪ್ರಕರಣ ಪತ್ತೆಯಾದ ಕೂಡಲೇ ಕೊರೊನಾ ಸೋಂಕಿತರಾದ 120 ಪುರುಷರು ಹಾಗೂ 86 ಮಹಿಳೆಯರು ಸೇರಿದಂತೆ ಒಟ್ಟು 206 ಮಂದಿ ಧರ್ಮಸ್ಥಳದಲ್ಲಿ ಕೊರೊನಾ ಆರೈಕೆ ಕೇಂದ್ರಕ್ಕೆ ಆಗಮಿಸಿದ್ದರು. ಇದೀಗ 150 ಮಂದಿ ಶುಶ್ರೂಷೆ ಪಡೆದು ಸಂಪೂರ್ಣ ಗುಣಮುಖರಾಗಿ ಸಿಯೋನ್ ಆಶ್ರಮಕ್ಕೆ ಮರಳಿದ್ದಾರೆ. ಗುಣಮುಖರಾಗಿ ಮರಳಿ ಆಶ್ರಮ ಸೇರಿದವರಲ್ಲಿ ವಿಕಲ ಚೇತನರು, ಹಿರಿಯ ನಾಗರಿಕರು ಹಾಗೂ ಕೆಲವರು ಬುದ್ಧಿಮಾಂದ್ಯರೂ ಇದ್ದಾರೆ.
ಕೇಂದ್ರದಲ್ಲಿರುವ ವೈದ್ಯರು, ದಾದಿಯರು, ನೌಕರರು, ಸ್ವಯಂಸೇವಕರು ಹಾಗೂ ಸಿಬ್ಬಂದಿ ಆರೈಕೆಯಿಂದ ಸೋಂಕಿತರಲ್ಲಿ ಭಯ ಆತಂಕ ನಿವಾರಿಸಿ, ನವಚೈತನ್ಯದೊಂದಿಗೆ ಧೈರ್ಯ ಮತ್ತು ಆತ್ಮವಿಶ್ವಾಸ ಮೂಡಿಸಿದೆ. ಪ್ರತಿ ದಿನ ಬೆಳಿಗ್ಗೆ ಉಪಾಹಾರ, 11 ಗಂಟೆಗೆ ಕಷಾಯ ಮತ್ತು ಬಿಸ್ಕೆಟ್, ಮಧ್ಯಾಹ್ನ ಊಟ, ಸಂಜೆ ಕಾಫಿ, ಟೀ, ಕಷಾಯ, ತಿಂಡಿ ಹಾಗೂ ರಾತ್ರಿ ಊಟ ಮತ್ತು ಊಟ ಮಾಡದವರಿಗೆ ಉಪಾಹಾರವನ್ನು ಧರ್ಮಸ್ಥಳದ ವತಿಯಿಂದ ಒದಗಿಸಲಾಗಿತ್ತು. ಸಿರಿ ಸಂಸ್ಥೆಯ ಮೂಲಕ ಎಲ್ಲರಿಗೂ ಉಚಿತ ಬಟ್ಟೆಯನ್ನೂ ನೀಡಲಾಗಿತ್ತು.
ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ಹೆಗ್ಗಡೆಯವರು, ಡಿ. ಹರ್ಷೇಂದ್ರಕುಮಾರ್ ಮಾರ್ಗದರ್ಶನದಲ್ಲಿ ಶಾಸಕ ಹರೀಶ್ ಪೂಂಜ ಅವರ ಸಹಕಾರದೊಂದಿಗೆ ಸೋಂಕಿತರಿಗೆ ಮನೆಯ ವಾತಾವರಣದ ಭಾವನೆ ಮೂಡಿಬರುವಂತೆ ಸ್ವಚ್ಛ ಹಾಗೂ ಪ್ರಶಾಂತ ಪರಿಸರದಲ್ಲಿ ಆರೋಗ್ಯಸೇವೆ ನೀಡಲಾಗಿದೆ. ಶಾಸಕರು ಆಗಾಗ ಕೇಂದ್ರಕ್ಕೆ ಭೇಟಿ ನೀಡಿ ಸೋಂಕಿತರ ಯೋಗಕ್ಷೇಮ ವಿಚಾರಿಸಿ ಧೈರ್ಯ ತುಂಬಿದ್ದಾರೆ.
ಆರೋಗ್ಯ ಇಲಾಖೆ ವತಿಯಿಂದ ತಾ.ಆರೋಗ್ಯಧಿಕಾರಿ ಡಾ. ಕಲಾಮಧು ನೇತೃತ್ವದಲ್ಲಿ ಡಾ. ಆಕಾಶ್, ಡಾ. ಚೆನ್ನಕೇಶವ, ಡಾ. ಸುಮನಾ, ಡಾ. ಸೋನಾ, ದಾದಿ ಗೀತಾ ಹಾಗೂ ಧರ್ಮಸ್ಥಳದ ವತಿಯಿಂದ 3 ಮಂದಿ ದಾದಿಯರು, ಸಿಯೋನ್ ಆಶ್ರಮದ 10 ಮಂದಿ ದಾದಿಯರು ಹಾಗೂ 8 ಜನ ಶಿಕ್ಷಕರು, ಗ್ರಾಮಾಭಿವೃದ್ಧಿ ಯೋಜನೆಯ ವಿಪತ್ತು ನಿರ್ವಹಣೆಯ 10 ಮಂದಿ ಸದಸ್ಯರು ಸೇವೆಯಲ್ಲಿ ನಿರತರಾಗಿದ್ದರು.
ಸಂಘಟಿತ ಪ್ರಯತ್ನ:ಬೆಳ್ತಂಗಡಿ ತಹಶೀಲ್ದಾರ್ ಮಹೇಶ್. ಜೆ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್ ಭೇಟಿ ನೀಡಿ ಸೂಕ್ತ ನಿರ್ದೇಶನದೊಂದಿಗೆ ಮಾರ್ಗದರ್ಶಿ ಅಧಿಕಾರಿಯಾಗಿ ಪಶುವೈದ್ಯ ಇಲಾಖೆಯ ಹಿರಿಯ ಅಧಿಕಾರಿ ಡಾ. ಕೆ. ಜಯಕೀರ್ತಿ ಜೈನ್ ಅವರು ಎಲ್ಲರ ಸಂಘಟಿತ ಪ್ರಯತ್ನ, ಸಹಕಾರದೊಂದಿಗೆ ಉತ್ತಮ ಸೇವೆ ನೀಡಿದ್ದಾರೆ. ಧರ್ಮಸ್ಥಳ ಗ್ರಾ.ಪಂ. ಅಧ್ಯಕ್ಷೆ ಜಯ ಎಂ. ಗೌಡ, ಉಪಾಧ್ಯಕ್ಷ ಶ್ರೀನಿವಾಸ ರಾವ್ ಹಾಗೂ ಸರ್ವ ಸದಸ್ಯರು, ಪಿ.ಡಿ.ಒ. ಉಮೇಶ್, ಕೆ. ಮತ್ತು ಟಾಸ್ಕ್ ಫೋರ್ಸ್ ಸದಸ್ಯರು ನಿರಂತರ ಸಹಕಾರ ಮತ್ತು ಸೇವೆ ಅನನ್ಯ.
ಅಧಿಕಾರಿಗಳ ಅಭಿನಂದನೆ:ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಜಿ.ಪಂ. ಸಿ.ಇ.ಒ. ಡಾ.ಕುಮಾರ್ ಅವರೂ ಆರೈಕೆ ಕೇಂದ್ರಕ್ಕೆ ಭೇಟಿ ನೀಡಿ, ಕೇಂದ್ರದಲ್ಲಿನ ಸ್ವಚ್ಛತೆ, ದಕ್ಷತೆಯೊಂದಿಗೆ ನೀಡುತ್ತಿರುವ ಸೌಜನ್ಯ ಪೂರ್ಣ ಸೇವೆಗೆ ಅಭಿನಂದಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಶೀಘ್ರದಲ್ಲೇ ಉಳಿದವರೂ ಶಿಫ್ಟ್:ಇನ್ನೂ 70ಕ್ಕೂ ಹೆಚ್ಚು ಮಂದಿ ಚೇತರಿಸಿಕೊಳ್ಳಬೇಕಿದ್ದು, ಶೀಘ್ರದಲ್ಲೇ ಅವರನ್ನೂ ಮರಳಿ ಆಶ್ರಮಕ್ಕೆ ಕರೆದೊಯ್ಯುವ ಪ್ರಯತ್ನಗಳು ನಡೆಯುತ್ತಿವೆ.
ಯಾವುದೇ ಪ್ರಾಣಹಾನಿ ಸಂಭವಿಸದೆ ಸುರಕ್ಷಿತವಾಗಿ ತಮ್ಮ ಆಶ್ರಮ ಸೇರಿರುವುದು ಆರೈಕೆ ಕೇಂದ್ರದ ನಿಸ್ವಾರ್ಥ ಸೇವೆಗೆ ಹಿಡಿದ ಕೈಗನ್ನಡಿಯಾಗಿದೆ.