ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮಹಿಳಾ ಸಬಲೀಕರಣ: ಧರ್ಮಸ್ಥಳದಲ್ಲಿ ಮಹಿಳಾ ಉದ್ದಿಮೆದಾರರ ಕಾರ್ಯಾಗಾರ..

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮಹಿಳಾ ಸಬಲೀಕರಣ: ಧರ್ಮಸ್ಥಳದಲ್ಲಿ ಮಹಿಳಾ ಉದ್ದಿಮೆದಾರರ ಕಾರ್ಯಾಗಾರ..

ಉಜಿರೆ: ಸಾಮಾಜಿಕ ಪದ್ಧತಿ ಮತ್ತು ಸಂಪ್ರದಾಯದ ಹೆಸರಿನಲ್ಲಿ ನಾವು ಸಾವಿರಾರು ವರ್ಷಗಳಿಂದ ಮಹಿಳೆಯರ ಶೋಷಣೆ ಮಾಡುತ್ತಾ ಬಂದಿದ್ದೇವೆ. ಆದರೆ ಮಹಿಳೆಯರಲ್ಲಿ ಅಪಾರ ಶಕ್ತಿ- ಸಾಮರ್ಥ್ಯ, ಬುದ್ಧಿವಂತಿಕೆ ಮತ್ತು ವ್ಯವಹಾರ ಕೌಶಲವಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಉತ್ತಮ ಅವಕಾಶ, ಪ್ರೇರಣೆ ಮತ್ತು ನಿರಂತರ ಮಾರ್ಗದರ್ಶನ ನೀಡಲಾಗುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು. ಅವರು, ಫೆ.08ರಂದು ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ   ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ನಡೆದ ಮಹಿಳಾ ಉದ್ದಿಮೆದಾರರ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಮಹಿಳಾ ಸಬಲೀಕರಣ ಅಂದರೆ ಮಹಿಳೆಯರಲ್ಲಿ ಇರುವ ತಮ್ಮ ಶಕ್ತಿ-ಸಾಮರ್ಥ್ಯ ಮತ್ತು ಕೌಶಲದ ಬಗ್ಗೆ ಅರಿವು, ಜಾಗೃತಿ ಮೂಡಿಸಿ ಸಮಾಜದ ಮುಖ್ಯವಾಹಿನಿಗೆ ತರುವುದಾಗಿದೆ. ಇಂದು ಸರ್ಕಾರ ಮತ್ತು ಸಮಾಜದಿಂದ ಸಿಗುವ ಅವಕಾಶಗಳು, ಶಿಕ್ಷಣ ಹಾಗೂ ಸಾಲ ಸೌಲಭ್ಯದ ಸದುಪಯೋಗ ಪಡೆದು ಮಹಿಳೆಯರು ಸ್ವಾವಲಂಬಿಗಳಾಗಿ ಉತ್ತಮ ವ್ಯವಹಾರದೊಂದಿಗೆ ಯಶಸ್ವಿ ಉದ್ಯಮಿಗಳಾಗಿ ಮಿಂಚುತ್ತಿದ್ದಾರೆ. ಸ್ವಚ್ಛತೆ, ಉಳಿತಾಯ, ಕುಟುಂಬ ನಿರ್ವಹಣೆಯಲ್ಲಿ ಅವರು ಯಶಸ್ವಿ ರೂವಾರಿಗಳಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಹಿಳೆಯರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಭ್ಯ, ಸುಸಂಸ್ಕೃತ ನಾಗರಿಕರನ್ನಾಗಿ ರೂಪಿಸಬೇಕು. ಮನೆಯ ಗಂಡಸರು ಮದ್ಯಪಾನದ ಚಟಕ್ಕೆ ಬಲಿಯಾಗದಂತೆ ಎಚ್ಚರಿಕೆ ವಹಿಸಬೇಕು. ತಮ್ಮ ವ್ಯವಹಾರದ ಲೆಕ್ಕಪತ್ರ ನಿರ್ವಹಣೆ, ಲಾಭ-ನಷ್ಟ ಪರಿಶೀಲನೆ ಮಾಡಿ ಸಾಲ ಮರುಪಾವತಿಯೊಂದಿಗೆ ಸಕಾಲದಲ್ಲಿ ಸರ್ಕಾರಕ್ಕೆ ತೆರಿಗೆಯನ್ನೂ ಪಾವತಿಸಬೇಕು ಎಂದು ಸಲಹೆ ನೀಡಿದರು.

ಅಮೃತ ಜೀವನ ಪ್ರಯಾಸ್ ಚಿಂತನ ಕೃತಿ ಬಿಡುಗಡೆಗೊಳಿಸಿದ ಸಿಡ್ಬಿ ಅಧ್ಯಕ್ಷ ಶಿವಸುಬ್ರಹಮಣ್ಯ ರಾಮನ್ ಅವರು ಒಂದು ಸಾವಿರ ಕೋಟಿ ರೂ. ಸಾಲ ಮಂಜೂರಾತಿ ಪತ್ರವನ್ನು ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥರಿಗೆ ನೀಡಿದರು. ಬಳಿಕ ಸಿಡ್ಬಿಯ ಪ್ರಯಾಸ್ ಯೋಜನೆಯಡಿಯಲ್ಲಿ ಉದ್ದಿಮೆ ಮಾಡುವವರಿಗೆ ಕಡಿಮೆ ಬಡ್ಡಿದರದಲ್ಲಿ ಬೇಕಾದಷ್ಟು ಸಾಲ ನೀಡಲಾಗುತ್ತದೆ. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆಯವರ ನೇತೃತ್ವದಲ್ಲಿ ಮಹಿಳಾ ಸಬಲೀಕರಣ ಸಾಧನೆ ಶ್ಲಾಘನೀಯ ಎಂದ ಅವರು ಶೇ. ನೂರರಷ್ಟು ಸಾಲ ಮರುಪಾವತಿ ಬಗ್ಗೆ ವಿಶೇಷ ಅಭಿನಂದನೆ ಸಲ್ಲಿಸಿದರು.ಮಹಿಳಾ ಉದ್ದಿಮೆದಾರರು ಉದ್ಯಮ ನೋಂದಾವಣೆ ಮಾಡಿಕೊಂಡು ಲೆಕ್ಕಪತ್ರ ನಿರ್ವಹಣೆಯೊಂದಿಗೆ ಸರ್ಕಾರಕ್ಕೆ ಕೊಡಬೇಕಾದ ತೆರಿಗೆಯನ್ನು ಸಕಾಲದಲ್ಲಿ ಪಾವತಿಸಬೇಕು. ಜಿ.ಎಸ್.ಟಿ. ಆದಾಯ ತೆರಿಗೆ, ಪಾನ್ ಕಾರ್ಡ್ ಬಗ್ಗೆ ಯಾವುದೇ ಭಯ, ಆತಂಕ ಬೇಡ. ಎಲ್ಲರೂ ಸ್ವಾವಲಂಬನೆಯೊAದಿಗೆ ಜೀವನಮಟ್ಟ ಸುಧಾರಣೆ ಮಾಡಿ ಸುಖ-ಶಾಂತಿ, ನೆಮ್ಮದಿಯ ಜೀವನ ನಡೆಸಿ ಎಂದು ಅವರು ಶುಭ ಹಾರೈಸಿದರು. ಮಂಗಳೂರಿನ ಅನಂತ ಭಟ್, ಡ್ಯಾಫಿನಿಸ್ಟೆಲ್ಲಾ ಡಿ’ಸೋಜಾ, ಸಿರಿ ಸಂಸ್ಥೆಯ ಪ್ರಸನ್ನ ತೆರಿಗೆ ಪಾವತಿ ಮತ್ತು ಲೆಕ್ಕಪತ್ರ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. ಸುಮಾರು 350 ಮಹಿಳಾ ಉದ್ಯಮಿಗಳು ಭಾಗವಹಿಸಿದ್ದ ಕಾರ್ಯಾಗಾರದಲ್ಲಿ ಬಂಟ್ವಾಳದ ಯಶಸ್ವಿ ಮಹಿಳಾ ಉದ್ಯಮಿ ಯೋಗಿತಾ ತಮ್ಮ ಯಶೋಗಾಥೆಯನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಹೇಮಾವತಿ ವೀ. ಹೆಗ್ಗಡೆ, ಸಿಡ್ಬಿಯ ಮುಖ್ಯ ಮಹಾಪ್ರಬಂಧಕ ರವಿತ್ಯಾಗಿ ಮತ್ತು ಉಪಮಹಾಪ್ರಬಂಧಕ ನಿತಿನ್ ಶುಕ್ಲಾ ಉಪಸ್ಥಿತರಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್. ಎಚ್. ಮಂಜುನಾಥ್ ಸ್ವಾಗತಿಸಿದರು. ಶಿವಾನಂದ ಆಚಾರ್ಯ ಧನ್ಯವಾದವಿತ್ತರು. ಪೂಜಾ ಪಕ್ಕಳ ಕಾರ್ಯಕ್ರಮ ನಿರ್ವಹಿಸಿದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!