ಅ.03ರಂದು ಕರ್ತವ್ಯದಲ್ಲಿದ್ದ ಸೋಮನಗೌಡ ಅವರು ನಗರದ ಮಳಿಗೆಯೊಂದಕ್ಕೆ ತೆರಳಿದ್ದರು. ಈ ವೇಳೆ ಹಠಾತ್ ಕುಸಿದು ಬಿದ್ದಿದ್ದು ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಅಷ್ಟರಲ್ಲಾಗಲೇ ಮೃತಪಟ್ಟಿದ್ದಾರೆಂದು ತಪಾಸಣೆ ನಡೆಸಿದ ವೈದ್ಯರು ತಿಳಿಸಿದ್ದಾರೆ.
2016 ರ ಬ್ಯಾಚ್‌ನ ಸೋಮನಗೌಡ ಚೌಧರಿ ಮಂಗಳೂರು ಸಿಎಆರ್ ಕಾನ್ಸ್ಟೇಬಲ್ ಆಗಿ ವೃತ್ತಿಗೆ ಸೇರ್ಪಡೆಗೊಂಡಿದ್ದರು. ಬಳಿಕ ಹೆಡ್ ಕಾನ್ಸ್ಟೇಬಲ್ ಆಗಿ ಬಡ್ತಿ ಪಡೆದು, ಸದ್ಯ ನಗರದ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಕಂಟ್ರೋಲ್ ರೂಂ ಇನ್ಸ್ಪೆಕ್ಟರ್ರ ವಾಹನ ಚಾಲಕನಾಗಿ ಕರ್ತವ್ಯದಲ್ಲಿದ್ದರು.
ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ಡಿಸಿಪಿಗಳಾದ ಸಿದ್ದಾರ್ಥ್ ಗೋಯಲ್, ದಿನೇಶ್ ಕುಮಾರ್, ಕೇಂದ್ರ ಉಪ ವಿಭಾಗದ ಎಸಿಪಿ ಮಹೇಶ್, ಪೊಲೀಸ್ ಅಧಿಕಾರಿಗಳು, ಸಹೋದ್ಯೋಗಿ ಸಿಬ್ಬಂದಿ ವರ್ಗವು ಸೋಮನಗೌಡ ಅವರ ಮೃತದೇಹಕ್ಕೆ ಅಂತಿಮ ಗೌರವ ಸಲ್ಲಿಸಿ, ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ. ಬಳಿಕ, ಅವರ ತವರು ಜಿಲ್ಲೆಯಾದ ವಿಜಯಪುರಕ್ಕೆ ಮೃತದೇಹವನ್ನು ಕಳುಹಿಸಿ ಕೊಡಲಾಗಿದೆ. ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.