ಸುನೀತಾ ಮತ್ತು ವಿಲ್ಮೋರ್ 8 ದಿನಗಳ ಕಾರ್ಯಾಚರಣೆಯ ಭಾಗವಾಗಿ ಬೋಯಿಂಗ್ ಸ್ಟಾರ್ಲೈನರ್ ಕ್ಯಾಪ್ಸುಲ್ ನಲ್ಲಿ ಜೂನ್ 6 ರಂದು ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಿದ್ದರು. ಈ ಇಬ್ಬರೂ ಜೂನ್ 14 ರಂದು ಭೂಮಿಗೆ ಮರಳಬೇಕಿತ್ತು. ಆದರೆ, ಬಾಹ್ಯಾಕಾಶ ನೌಕೆಯಲ್ಲಿ ಹೀಲಿಯಂ ಸೋರಿಕೆಯಿಂದಾಗಿ ತಾಂತ್ರಿಕ ಸಮಸ್ಯೆಗಳಿಂದ ಅವರು ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿದ್ದಾರೆ.
ಇಬ್ಬರನ್ನು ವಾಪಸ್ ಭೂಮಿಗೆ ಕರೆತರಲು SpaceX ಕ್ರೂ-9 ಎಂಬ ಮಿಷನ್ ಪ್ರಾರಂಭಿಸಿತು. ಇದರಲ್ಲೂ ಹಾಗ್ ಮತ್ತು ಗೋರ್ಬುನೋವ್ ಎಂಬ ಇಬ್ಬರು ಗಗನಯಾತ್ರಿಗಳಿದ್ದರು. ಇದೇ ವೇಳೆ, ಬಾಹ್ಯಾಕಾಶದಲ್ಲಿ ಸಿಲುಕಿದವರನ್ನು ಭೂಮಿಗೆ ಕರೆತರಲು ಇವರ ಜತೆ ಎರಡು ಆಸನಗಳನ್ನು ಖಾಲಿ ಕಳುಹಿಸಲಾಗಿದೆ. ಅದು ಸೆಪ್ಟೆಂಬರ್‌ನಲ್ಲಿಯೇ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದೆ. ಈ ನಾಲ್ವರೂ ಫೆಬ್ರವರಿಯಲ್ಲಿ ಹಿಂತಿರುಗುತ್ತಾರೆ ಎಂದು ನಾಸಾ ಆರಂಭದಲ್ಲಿ ಘೋಷಿಸಿತ್ತು. ಆದಾಗ್ಯೂ, ಕ್ರ‍್ಯೂ -9 ರ ಸಿಬ್ಬಂದಿಯನ್ನು ಭೂಮಿಗೆ ಮರಳಿ ತರಲು ಕ್ರ‍್ಯೂ -10 ಉಡಾವಣೆ ಮಾರ್ಚ್ಗಿಂತ ಮೊದಲು ಸಂಭವಿಸುವ ಸಾಧ್ಯತೆಗಳಿಲ್ಲ ಎಂದು ತಿಳಿದು ಬಂದಿದೆ. ಮುಂದಿನ ವರ್ಷ ಮಾರ್ಚ್ ಅಂತ್ಯ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ಅವರು ಭೂಮಿಗೆ ತಲುಪುವ ಸಾಧ್ಯತೆ ಇದೆ ಎಂದು ನಾಸಾ ಇತ್ತೀಚೆಗೆ ಬಹಿರಂಗಪಡಿಸಿದೆ.