ಬೆಳ್ತಂಗಡಿ: ಗ್ರಾಮದ ಜನರಿಗೆ ಆರೋಗ್ಯ ಸೇವೆ ನೀಡುತ್ತಿದ್ದ ಡಾ. ಪ್ರದೀಪ್ ಎ. ಆಟಿಕುಕ್ಕೆ ಅವರ ಆರೋಗ್ಯ ಕ್ಲಿನಿಕ್‌ಗೆ ಅ. 6ರ ರಾತ್ರಿ ದುಷ್ಕರ್ಮಿಗಳು ಡೀಸೆಲ್ ಸುರಿದು ಬೆಂಕಿ ಹಚ್ಚಿದ ಘಟನೆಗೆ ನಾವೂರು ಗ್ರಾಮಸ್ಥರು ಹಾಗೂ ವಿವಿಧ ಸಂಘ-ಸಂಸ್ಥೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥರನ್ನು ಶೀಘ್ರ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಘಟನೆಯಿಂದ ಕ್ಲಿನಿಕ್‌ನಲ್ಲಿದ್ದ ಔಷಧಿಗಳು ಹಾಗೂ ಇತರ ವೈದ್ಯಕೀಯ ಸಾಮಗ್ರಿಗಳು ಸುಟ್ಟು ಭಸ್ಮವಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಹಾಗೂ ಆಕ್ರೋಶ ಮೂಡಿದೆ. ಆರೋಗ್ಯ ಸೇವೆ ನೀಡುವ ಕೇಂದ್ರವನ್ನೇ ಗುರಿಯಾಗಿಸಿಕೊಂಡು ಬೆಂಕಿ ಹಚ್ಚಿರುವುದು ಅತ್ಯಂತ ಗಂಭೀರ ವಿಚಾರವಾಗಿದ್ದು, ಇಂತಹ ಕೃತ್ಯಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.
ಘಟನೆಯನ್ನು ಖಂಡಿಸಿ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ (ರಿ.), ನಾವೂರು ವತಿಯಿಂದ ಅ. 8ರಂದು ಬೆಳಿಗ್ಗೆ 8ರಿಂದ 8.25ರವರೆಗೆ ಶ್ರೀ ಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ ವಿಷ್ಣುಸಹಸ್ರನಾಮ ಪಠಣ ಹಾಗೂ ವಿಶೇಷ ಪ್ರಾರ್ಥನೆ ನಡೆಯಿತು. ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣದ ತಪ್ಪಿತಸ್ಥರು ಶೀಘ್ರ ಪತ್ತೆಯಾಗಿ, ಅವರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು ಎಂದು ಪ್ರಾರ್ಥಿಸಲಾಯಿತು.
ನೂರಾರು ಜನರಿಂದ ಖಂಡನಾ ಸಭೆ
ವಿಶೇಷ ಪ್ರಾರ್ಥನೆಯ ಬಳಿಕ ಬೆಳಿಗ್ಗೆ 9.15ಕ್ಕೆ ನಾವೂರು ಆರೋಗ್ಯ ಕ್ಲಿನಿಕ್ ಆವರಣದಲ್ಲಿ ಸಾರ್ವಜನಿಕ ಸಮಾಲೋಚನಾ ಹಾಗೂ ಖಂಡನಾ ಸಭೆ ನಡೆಯಿತು. ಸಭೆಯಲ್ಲಿ ನೂರಾರು ಗ್ರಾಮಸ್ಥರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಗಣ್ಯರು ಭಾಗವಹಿಸಿ ಘಟನೆಯನ್ನು ಒಕ್ಕೊರಲಿನಿಂದ ಖಂಡಿಸಿದರು.
ಆರೋಗ್ಯ ಸೇವೆ ನೀಡುವ ಕ್ಲಿನಿಕ್ ಮೇಲೆ ನಡೆದಿರುವ ಕೃತ್ಯವು ಸಮಾಜದ ಸುರಕ್ಷತೆ ಹಾಗೂ ಮಾನವೀಯ ಮೌಲ್ಯಗಳಿಗೆ ವಿರುದ್ಧವಾಗಿದೆ. ಗ್ರಾಮದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಪರಸ್ಪರ ನಂಬಿಕೆಯನ್ನು ಕಾಪಾಡುವ ನಿಟ್ಟಿನಲ್ಲಿ ಇಂತಹ ಘಟನೆಗಳ ಹಿಂದಿರುವವರನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಯಿತು.
“ಔಷಧಿಗಳು ಭಸ್ಮವಾಗಿವೆ, ಇಚ್ಛಾಶಕ್ತಿ ಭಸ್ಮವಾಗಿಲ್ಲ”
ಸಭೆಯಲ್ಲಿ ಮಾತನಾಡಿದ ಡಾ. ಪ್ರದೀಪ್ ಎ. ಆಟಿಕುಕ್ಕೆ ಅವರು ಭಾವುಕರಾಗಿ ತಮ್ಮ ಅನಿಸಿಕೆ ಹಂಚಿಕೊಂಡರು.
“ಆಗಬಾರದ ಘಟನೆ ಆಗಿ ಹೋಗಿದೆ. ಮೊದಲು ವಿದ್ಯುತ್ ಅವಘಡ ಆಗಿರಬೇಕು, ಕೃಷ್ಣ ಮುನಿಸಿಕೊಂಡಿದ್ದಾನೆ ಎಂದು ತಿಳಿದುಕೊಂಡಿದ್ದೆ. ಆದರೆ ಬೆಂಕಿ ಹಚ್ಚಿರುವುದು ಸ್ಪಷ್ಟವಾಯಿತು. ಧರ್ಮವನ್ನು ಮೀರಿ ಊರಿನವರು ನನ್ನ ಜೊತೆಗೆ ನಿಂತಾಗ ತುಂಬಾ ಸಂತೋಷವಾಯಿತು. ಈ ಸುದ್ದಿ ಮಾಧ್ಯಮಗಳ ಮೂಲಕ ಎಲ್ಲೆಡೆ ತಲುಪಿದೆ. ಮುಂದೆ ಇಂತಹ ಕೃತ್ಯ ನಡೆಯಬಾರದು,” ಎಂದು ಅವರು ಹೇಳಿದರು.
“ಔಷಧಿಗಳು ಭಸ್ಮವಾಗಿವೆ, ಆದರೆ ಇಚ್ಛಾಶಕ್ತಿ ಭಸ್ಮವಾಗಿಲ್ಲ. ನಿಮ್ಮೆಲ್ಲರ ಪ್ರೀತಿ, ಸಹಕಾರ ಹೀಗೆ ಇರಲಿ. ಈ ಬೆಂಕಿಯನ್ನು ಎಲ್ಲರೂ ಸೇರಿ ನಂದಿಸುತ್ತೀರಿ ಎಂಬ ನಂಬಿಕೆ ಇದೆ,” ಎಂದು ಡಾ. ಪ್ರದೀಪ್ ಭಾವುಕರಾಗಿ ನುಡಿದರು.
ಡಾ. ಪ್ರದೀಪ್ ಅವರ ಮಾತಿಗೆ ಸ್ಪಂದಿಸಿದ ಸಾರ್ವಜನಿಕರು, “ಆರೋಗ್ಯ ಕಾಪಾಡುವ ಔಷಧಿಗಳಿಗೆ ಬೆಂಕಿ ಹಚ್ಚಿದವರಿಗೆ ಶಿಕ್ಷೆಯಾಗಲೇಬೇಕು. ಡಾ. ಪ್ರದೀಪ್ ಅವರೊಂದಿಗೆ ನಾವೆಲ್ಲರೂ ಇದ್ದೇವೆ,” ಎಂದು ಒಗ್ಗಟ್ಟಿನಿಂದ ಬೆಂಬಲ ವ್ಯಕ್ತಪಡಿಸಿದರು.
ಪೊಲೀಸ್ ಠಾಣೆಗೆ ಮನವಿ
ಖಂಡನಾ ಸಭೆಯ ಬಳಿಕ ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಒಟ್ಟಾಗಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ತೆರಳಿ ಮನವಿ ಸಲ್ಲಿಸಿದರು. ಕ್ಲಿನಿಕ್‌ಗೆ ಬೆಂಕಿ ಹಚ್ಚಿದ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ, ಕೃತ್ಯ ಎಸಗಿದವರನ್ನು ಶೀಘ್ರ ಪತ್ತೆಹಚ್ಚಿ ಬಂಧಿಸಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು.
ಘಟನೆಯ ಹಿನ್ನೆಲೆಯಲ್ಲಿ ಗ್ರಾಮಸ್ಥರು ಒಗ್ಗಟ್ಟಿನಿಂದ ನಿಂತಿರುವುದು ಗಮನ ಸೆಳೆಯಿತು. ಆರೋಗ್ಯ ಸೇವೆಯಂತಹ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವವರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯವೂ ಕೇಳಿಬಂತು.
ಗಣ್ಯರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳ ಉಪಸ್ಥಿತಿ
ಖಂಡನಾ ಸಭೆಯಲ್ಲಿ ಶಾಸಕ ಹರೀಶ್ ಪೂಂಜ, ಉದ್ಯಮಿ ಶಶಿಧರ್ ಶೆಟ್ಟಿ ಬರೋಡಾ, ಮಾಜಿ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಸಂಪತ್ ಸುವರ್ಣ, ಜಗದೀಶ್ ಪ್ರಸಾದ್, ಕಟ್ಟಡ ಮಾಲಕರಾದ ಶೇಖರ್ ಪೂಜಾರಿ, ತನುಜಾ ಶೇಖರ್, ಹರೀಶ್ ಸಾಲ್ಯಾನ್, ಗಣೇಶ್ ಗೌಡ, ಡಾ. ಹರಿಕಿರಣ್, ನಿವೃತ್ತ ಪ್ರಾಂಶುಪಾಲ ಟಿ.ಪಿ. ಆ್ಯಂಟನಿ, ರಾಜಶೇಖರ್, ಡಾ. ಅನುಜಾ, ವಿ.ಜಿ. ಪ್ರವೀಣ್ ನಡ, ವಿಜಯ ಹೊಡಿಕಾರ್ ಸೇರಿದಂತೆ ನೂರಾರು ಗ್ರಾಮಸ್ಥರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕ್ಲಿನಿಕ್ ಮೇಲಿನ ಬೆಂಕಿ ಕೃತ್ಯವನ್ನು ಖಂಡಿಸುವುದರ ಜೊತೆಗೆ, ಗ್ರಾಮದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಾಮಾಜಿಕ ಭದ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಸಂಕಲ್ಪವನ್ನು ಸಭೆಯಲ್ಲಿ ವ್ಯಕ್ತಪಡಿಸಲಾಯಿತು.
