ಬೆಂಗಳೂರು: ರಾಜ್ಯದ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಗಳ ಸದಸ್ಯ ಸ್ಥಾನಗಳಿಗೆ ವರ್ಗವಾರು ಮೀಸಲಾತಿ ನಿಗದಿಪಡಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ರಾಜ್ಯದ 31 ಜಿಲ್ಲೆಗಳಿಗೂ ಈ ಮೀಸಲಾತಿ ಅನ್ವಯವಾಗಲಿದ್ದು, ಒಟ್ಟು ಸದಸ್ಯ ಸ್ಥಾನಗಳ ಪೈಕಿ ಶೇ.50ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.
ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮದಡಿ ಬುಧವಾರ ಅಧಿಸೂಚನೆ ಹೊರಡಿಸಲಾಗಿದ್ದು, ಈ ಹಿಂದೆ ಪ್ರಕಟಿಸಿದ್ದ ಮೀಸಲಾತಿ ಅಧಿಸೂಚನೆಗಳನ್ನು ರದ್ದುಗೊಳಿಸಲಾಗಿದೆ.
1,229 ಜಿಪಂ ಸ್ಥಾನಗಳಿಗೆ ಮೀಸಲಾತಿ
ರಾಜ್ಯದ 31 ಜಿಲ್ಲೆಗಳಲ್ಲಿ ಒಟ್ಟು 1,229 ಜಿಲ್ಲಾ ಪಂಚಾಯಿತಿ ಸದಸ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಲಾಗಿದೆ. ಇದರಲ್ಲಿ ಪರಿಶಿಷ್ಟ ಜಾತಿಗೆ 225 ಸ್ಥಾನಗಳಿದ್ದು, 121 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಪರಿಶಿಷ್ಟ ಪಂಗಡದ 102 ಸ್ಥಾನಗಳ ಪೈಕಿ 59, ಹಿಂದುಳಿದ ವರ್ಗ ‘ಅ’ದ 183 ಸ್ಥಾನಗಳಲ್ಲಿ 98 ಹಾಗೂ ಹಿಂದುಳಿದ ವರ್ಗ ‘ಬ’ದ 43 ಸ್ಥಾನಗಳಲ್ಲಿ 25 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.
ಸಾಮಾನ್ಯ ವರ್ಗದ 576 ಸ್ಥಾನಗಳ ಪೈಕಿ 268 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.
3,656 ತಾಪಂ ಸ್ಥಾನಗಳಿಗೂ ಮೀಸಲಾತಿ
ರಾಜ್ಯದ ತಾಲೂಕು ಪಂಚಾಯಿತಿಗಳ ಒಟ್ಟು 3,656 ಸದಸ್ಯ ಸ್ಥಾನಗಳಿಗೆ ವರ್ಗವಾರು ಮೀಸಲಾತಿ ನಿಗದಿಪಡಿಸಲಾಗಿದೆ. ಈ ಪೈಕಿ 1,905 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.
ಪರಿಶಿಷ್ಟ ಜಾತಿಯ 733 ಸ್ಥಾನಗಳಲ್ಲಿ 429, ಪರಿಶಿಷ್ಟ ಪಂಗಡದ 394 ಸ್ಥಾನಗಳಲ್ಲಿ 287, ಹಿಂದುಳಿದ ವರ್ಗ ‘ಅ’ದ 508 ಸ್ಥಾನಗಳಲ್ಲಿ 306 ಹಾಗೂ ಹಿಂದುಳಿದ ವರ್ಗ ‘ಬ’ದ 111 ಸ್ಥಾನಗಳಲ್ಲಿ 64 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಸಾಮಾನ್ಯ ವರ್ಗದ 1,910 ಸ್ಥಾನಗಳ ಪೈಕಿ 819 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.
ರಾಜ್ಯಪಾಲರ ಆದೇಶದ ಅನುಸಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ನಿರ್ದೇಶಕ ಕೃಷ್ಣಮೂರ್ತಿ ಕೆ.ಎಚ್. ಅವರು ಅಧಿಸೂಚನೆಗಳಿಗೆ ಅಂಕಿತ ಹಾಕಿದ್ದಾರೆ.
ಮೀಸಲಾತಿ ಅಧಿಸೂಚನೆ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಮುಂದಿನ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ. ಚುನಾವಣಾ ವೇಳಾಪಟ್ಟಿ ಶೀಘ್ರದಲ್ಲೇ ಪ್ರಕಟವಾಗುವ ಸಾಧ್ಯತೆ ಇದೆ.
