ಬೆಳ್ತಂಗಡಿ:ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಕ್ಕಾಗಿ ಹೋರಾಟ ಮುಂದುವರಿಯಲಿದೆ. ನ್ಯಾಯಕ್ಕಾಗಿ ಒಂದಾಗಿರುವ ಜನರು ಭಿಕ್ಷೆ ಬೇಡಲು ಬಂದವರಲ್ಲ; ಸತ್ಯ, ಧರ್ಮ ಮತ್ತು ನ್ಯಾಯಕ್ಕಾಗಿ ಧ್ವನಿ ಎತ್ತಲು ಸೇರಿದ್ದಾರೆ ಎಂದು ಮಹೇಶ್ ಶೆಟ್ಟಿ ತಿಮರೋಡಿ ಹೇಳಿದರು..ಅವರು ಶನಿವಾರ ಬೆಳ್ತಂಗಡಿಯಲ್ಲಿ ನಡೆದ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ , ಪ್ರಜಾಪ್ರಭುತ್ವ ವೇದಿಕೆ ಬೆಳ್ತಂಗಡಿ, ವತಿಯಿಂದ ಸುಪ್ರೀಂ ಕೋರ್ಟ್ ನಲ್ಲಿ ಕಾನೂನಾತ್ಮಕವಾಗಿ ಶ್ರಮಿಸಿದ ಸುಪ್ರೀಂ ಕೋರ್ಟ್ ನ ನ್ಯಾಯವಾದಿಗಳಿಗೆ ಹಾಗೂ ಸುದೀರ್ಘವಾಗಿ ಕಾನೂನು ಹೋರಾಟದಲ್ಲಿ ಶ್ರಮಿಸಿದ ಎಲ್ಲಾ ನ್ಯಾಯವಾದಿಗಳಿಗೆ ಮತ್ತು ನಿಸ್ವಾರ್ಥವಾಗಿ ನ್ಯಾಯಪರ ಹೋರಾಟದಲ್ಲಿ ಭಾಗಿಯಾದ ಎಲ್ಲಾ ಸೌಜನ್ಯ ಪರ ಹೋರಾಟಗಾರರಿಗೆ ಗೌರವದ ಅಭಿನಂದನಾ ಸಭೆಯಲ್ಲಿ ಮಾತನಾಡಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳನ್ನು ವ್ಯಂಗ್ಯವಾಗಿ ಟೀಕಿಸಿದ ಅವರು, ಸಾಕ್ಷ್ಯ ನಾಶದ ಆರೋಪಗಳ ಕುರಿತು ಪೊಲೀಸ್ ಇಲಾಖೆ, ಸಿಐಡಿ ಮತ್ತು ಸಿಬಿಐ ಉತ್ತರ ನೀಡಬೇಕು.ಆಗಿನ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಗೋಯಲ್ ಅವರು ಉಲ್ಲೇಖಿಸಿದ್ದ ಎರಡು ವಿಡಿಯೋಗಳು ಎಲ್ಲಿವೆ , ಈ ಕುರಿತು ಸರ್ಕಾರ ಸ್ಪಷ್ಟನೆ ನೀಡಬೇಕು ಪ್ರಕರಣದ ತನಿಖೆಯಲ್ಲಿ ನಡೆದಿರುವ ಬೆಳವಣಿಗೆಗಳು ಮತ್ತು ಸಾರ್ವಜನಿಕರಲ್ಲಿರುವ ಅನುಮಾನಗಳಿಗೆ ಉತ್ತರ ಸಿಗಬೇಕು..ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಕುರಿತು ಗಂಭೀರವಾಗಿ ಗಮನಹರಿಸಿ ನ್ಯಾಯ ಒದಗಿಸಬೇಕು .ಎಸ್‌ಐಟಿ ತನಿಖೆಯ ಸಂದರ್ಭದಲ್ಲಿ ಚಿನ್ನಯ್ಯನನ್ನು ಹೆದರಿಸಿ ಬೆದರಿಸಿ, ತಮ್ಮ ಹೋರಾಟಕ್ಕೆ ಷಡ್ಯಂತ್ರದ ಹಣೆಪಟ್ಟಿ ಕಟ್ಟಲಾಗಿದೆ . ತಮ್ಮನ್ನು ಗಡಿಪಾರು ಮಾಡಲು ಪ್ರಯತ್ನಿಸಿದವರ ವಿರುದ್ಧವೂ ಟೀಕಿಸಿದ ಅವರು, ಇಂತಹ ಕ್ರಮಗಳಿಂದ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟವನ್ನು ತಡೆಯಲು ಸಾಧ್ಯವಿಲ್ಲ.ಮಹಾತ್ಮ ಗಾಂಧೀಜಿಯವರು ಮಹಿಳೆಯರು ಮಧ್ಯರಾತ್ರಿಯಲ್ಲಿಯೂ ನಿರ್ಭೀತಿಯಿಂದ ಸಂಚರಿಸುವಂತಿರಬೇಕು ಎಂಬ ಕನಸು ಕಂಡಿದ್ದರು ಎಂದು ಸ್ಮರಿಸಿದ ತಿಮರೋಡಿ, ಮಹಿಳೆಯರ ಸುರಕ್ಷತೆಯ ವಿಚಾರದಲ್ಲಿ ಇಂದಿನ ಪರಿಸ್ಥಿತಿಯನ್ನು ಪ್ರಶ್ನಿಸಿದ್ದಾರೆ. ಹಗಲಿನಲ್ಲಿಯೇ ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಕೊಲೆಗಳಂತಹ ಘಟನೆಗಳು ನಡೆಯುತ್ತಿದೆ.ಸೌಜನ್ಯ ಪ್ರಕರಣದ ತನಿಖಾಧಿಕಾರಿ ಯೋಗೀಶ್ ವಿರುದ್ಧ ಕ್ರಮ ಕೈಗೊಂಡರೆ ಸತ್ಯ ಹೊರಬರಲಿದೆ ಪ್ರಕರಣದ ಎಲ್ಲ ಆಯಾಮಗಳನ್ನೂ ಮರುಪರಿಶೀಲಿಸಿ .ಸಾರ್ವಜನಿಕರ ಸಮ್ಮುಖದಲ್ಲಿ ನ್ಯಾಯಕ್ಕಾಗಿ ಹೋರಾಟ ಮುಂದುವರಿಸುವುದಾಗಿ ತಿಳಿಸಿದ ಅವರು, ನ್ಯಾಯ ದೊರೆಯುವವರೆಗೂ ವಿರಮಿಸುವುದಿಲ್ಲ ಎಂದರು.
ಸಭೆಯಲ್ಲಿ ಸೌಜನ್ಯಳ ತಾಯಿ ಕುಸುಮಾವತಿ ಪಾಂಗಳ, ಹೋರಾಟಗಾರರಾದ ಗಿರೀಶ್ ಮಟ್ಟಣ್ಣವರ್, ಪ್ರಸನ್ನ ರವಿ, ತಮ್ಮಣ್ಣ ಶೆಟ್ಟಿ, ದಿನೇಶ್ ಗಾಣಿಗ, ಜಯಂತ್ ಟಿ, ಅಹೋರಾತ್ರ ಮತ್ತು ಕೃಷ್ಣಪ್ಪ ಗೌಡ ದೇವಸ್ಯ, ಸುರೇಶ್ ಯೆಯ್ಯಾಡಿ ಮುಂಬೈ, ಹೈಕೋರ್ಟ್ ವಕೀಲರಾದ ಮೋಹಿತ್ ಕುಮಾರ್, ವಿಜಯ್ ವಾಸು ಪೂಜಾರಿ, ನವೀನ್ ಕುಮಾರ್ ಉಪಸ್ಥಿತರಿದ್ದರು. ಹೋರಾಟಗಾರರು ಮಾತನಾಡಿ, 14 ವರ್ಷಗಳ ಹಿಂದೆ ಕೊಲೆಯಾದ ಸೌಜನ್ಯಳಿಗೆ ನ್ಯಾಯ ದೊರೆಯಬೇಕು, ಕೊಲೆ ನಡೆಸಿದ ಆರೋಪಿಗಳನ್ನು ತನಿಖಾ ತಂಡ ಪತ್ತೆ ಹಚ್ಚಬೇಕು ಎಂದು ಒತ್ತಾಯಿಸಿದರು.
ಮುಖೇಶ್ ಶೆಟ್ಟಿ ವಂದೇ ಮಾತರಂ ಹಾಡಿದರು. ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಅನಿಲ್ ಕುಮಾರ್ ಅಂತರ ಸ್ವಾಗತಿಸಿದರು.ಉಜಿರೆ ಕುಂಜರ್ಪದಿಂದ ಬೆಳ್ತಂಗಡಿಯವರೆಗೆ "ನ್ಯಾಯದ ನಡಿಗೆ ಮೌನ ಮೆರವಣಿಗೆ" ಹಾಗೂ ಬೆಳ್ತಂಗಡಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮೀಸಲಿಟ್ಟ ಮೈದಾನದಲ್ಲಿ ನಡೆದ ಅಭಿನಂದನಾ ಸಭೆಯಲ್ಲಿ ಸೌಜನ್ಯ ಪರ ಹೋರಾಟಗಾರರು,ಸಹಸ್ರಾರು ಮಂದಿ ನಾಗರಿಕರು ಭಾಗಿಯಾದರು.


