ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಶಾಲಾ ಕಾರ್ಯಕ್ರಮದಲ್ಲಿ ರಾಜಕೀಯ ಭಾಷಣ ಆರೋಪ: ಶಾಸಕ ಹರೀಶ್ ಪೂಂಜಾ ವಿರುದ್ಧ ಯುವ ಕಾಂಗ್ರೆಸ್ ದೂರು.

ಶಾಲಾ ಕಾರ್ಯಕ್ರಮದಲ್ಲಿ ರಾಜಕೀಯ ಭಾಷಣ ಆರೋಪ: ಶಾಸಕ ಹರೀಶ್ ಪೂಂಜಾ ವಿರುದ್ಧ ಯುವ ಕಾಂಗ್ರೆಸ್ ದೂರು.

 



ಬೆಳ್ತಂಗಡಿ: ಸರ್ಕಾರಿ ಪ್ರಾಯೋಜಿತ ಶಾಲಾ ಕಾರ್ಯಕ್ರಮದಲ್ಲಿ ರಾಜಕೀಯ ಭಾಷಣ ಮಾಡಿರುವುದು ಹಾಗೂ ವಿದ್ಯಾರ್ಥಿಗಳಿಂದ ರಾಜಕೀಯ ಘೋಷಣೆಗಳನ್ನು ಕೂಗಿಸಿರುವ ಆರೋಪದ ಹಿನ್ನೆಲೆಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ಬೆಳ್ತಂಗಡಿ ಯುವ ಕಾಂಗ್ರೆಸ್ ವತಿಯಿಂದ ಮುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ.



ಘಟನೆಯ ಹಿನ್ನೆಲೆ

ಬೆಳ್ತಂಗಡಿ ತಾಲೂಕಿನ ಮುಂಜಾಲಕಟ್ಟೆಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನವೆಂಬರ್ 14, 2026ರಂದು ಶಾಲೆಯ ಅಭಿವೃದ್ಧಿಗೆ ಸಹಕರಿಸಿದ ಖಾಸಗಿ ಸಂಸ್ಥೆಯೊಂದಕ್ಕೆ ಅಭಿನಂದನೆ ಸಲ್ಲಿಸುವ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜಾ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಸಕರು ಮಾಡಿದ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ



ರಾಜಕೀಯ ಪಕ್ಷದ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ


ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಹರೀಶ್ ಪೂಂಜಾ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ಅವಹೇಳನಕಾರಿ ಹಾಗೂ ರಾಜಕೀಯ ಪ್ರೇರಿತ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಯುವ ಕಾಂಗ್ರೆಸ್ ದೂರಿನಲ್ಲಿ ಆರೋಪಿಸಿದೆ.



ನಿಮ್ಮ ಶಾಲೆಗೆ ಒಂದು ರೂಪಾಯಿ ಸಹಾಯ ಮಾಡದ ದರಿದ್ರ ಪಾರ್ಟಿ ಕಾಂಗ್ರೆಸ್ ಬೆಳ್ತಂಗಡಿಯಲ್ಲಿದೆ. ಅವರು ದೂರು ಕೊಟ್ಟು ಇಲ್ಲಿಯ ಶಿಕ್ಷಕರಿಗೆ ಚಿತ್ರಹಿಂಸೆ ನೀಡಿ ಶಾಲೆಯ ಕಾರ್ಯಕ್ರಮ ಬದಲಿಸಿದ್ದಾರೆ. ಇಂತಹ ದರಿದ್ರ ಪಕ್ಷವನ್ನು ನಂಬಿ ಹೋಗಬೇಡಿ, ದೇಶ ಇರುವುದು ನರೇಂದ್ರ ಮೋದಿಯವರ ನೇತೃತ್ವದಲ್ಲಿ” ಎಂಬ ಹೇಳಿಕೆಗಳನ್ನು ಶಾಸಕರು ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.


ಅಲ್ಲದೆ, ಭಾಷಣದ ಕೊನೆಯಲ್ಲಿ ಶಾಲಾ ವಿದ್ಯಾರ್ಥಿಗಳಿಂದ ನರೇಂದ್ರ ಮೋದಿ ಅವರಿಗೆ ಜಯಕಾರದ ಘೋಷಣೆಗಳನ್ನು ಕೂಗಿಸಲಾಗಿದೆ ಎಂಬ ಆರೋಪವನ್ನೂ ಮಾಡಲಾಗಿದೆ.


ಶಾಲಾ ವಾತಾವರಣದಲ್ಲಿ ರಾಜಕೀಯ ಪ್ರಚಾರಕ್ಕೆ ವಿರೋಧ


ಶಾಲೆಗಳು ಮಕ್ಕಳಿಗೆ ಶಿಕ್ಷಣ, ಸಂಸ್ಕಾರ ಹಾಗೂ ಉತ್ತಮ ನಾಗರಿಕ ಮೌಲ್ಯಗಳನ್ನು ಕಲಿಸುವ ಪವಿತ್ರ ಸ್ಥಳಗಳಾಗಿದ್ದು, ಯಾವುದೇ ರಾಜಕೀಯ ಪಕ್ಷದ ಪರ ಅಥವಾ ವಿರೋಧವಾಗಿ ಪ್ರಚಾರ ನಡೆಸುವ ವೇದಿಕೆಗಳಾಗಬಾರದು ಎಂದು ಯುವ ಕಾಂಗ್ರೆಸ್ ದೂರಿನಲ್ಲಿ ತಿಳಿಸಿದೆ.


ಅಪ್ರಾಪ್ತ ವಿದ್ಯಾರ್ಥಿಗಳನ್ನು ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಹಾಗೂ ಅವರ ಮೂಲಕ ರಾಜಕೀಯ ಘೋಷಣೆಗಳನ್ನು ಕೂಗಿಸುವುದು ಮಕ್ಕಳ ಹಕ್ಕುಗಳು ಮತ್ತು ಶಿಕ್ಷಣದ ತಟಸ್ಥ ವಾತಾವರಣಕ್ಕೆ ಧಕ್ಕೆ ಉಂಟುಮಾಡುತ್ತದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.


ನಿಷ್ಪಕ್ಷಪಾತ ತನಿಖೆಗೆ ಯುವ ಕಾಂಗ್ರೆಸ್ ಆಗ್ರಹ


ಶಾಲಾ ಕಾರ್ಯಕ್ರಮದಲ್ಲಿ ರಾಜಕೀಯ ಭಾಷಣ ಮಾಡಿರುವುದು ಹಾಗೂ ವಿದ್ಯಾರ್ಥಿಗಳಿಂದ ಘೋಷಣೆ ಕೂಗಿಸಿರುವ ಆರೋಪವು ಸಾರ್ವಜನಿಕ ಶಿಕ್ಷಣ ಸಂಸ್ಥೆಗಳ ತಟಸ್ಥತೆ ಮತ್ತು ಘನತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಯುವ ಕಾಂಗ್ರೆಸ್ ಅಭಿಪ್ರಾಯಪಟ್ಟಿದೆ.


ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ನಿಷ್ಪಕ್ಷಪಾತ ತನಿಖೆ ನಡೆಸಿ ಶಾಸಕ ಹರೀಶ್ ಪೂಂಜಾ ವಿರುದ್ಧ ಕಾನೂನಿನ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬೆಳ್ತಂಗಡಿ ಯುವ ಕಾಂಗ್ರೆಸ್ ನಗರ ಸಮಿತಿಯ ಅಧ್ಯಕ್ಷ ನವೀನ್ ಕುಮಾರ್ ಕೆ ಅವರು ಮುಂಜಾಲಕಟ್ಟೆ ಪೊಲೀಸ್ ಠಾಣಾಧಿಕಾರಿಗಳಿಗೆ ಸಲ್ಲಿಸಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.


ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ಅಝರ್ ನಾವೂರು, ಜೋಶಿಲ್ ಲಾಯಿಲ ಹಾಗೂ ನಜೀರ್ ಉಪಸ್ಥಿತರಿದ್ದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!