ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಧರ್ಮಸ್ಥಳದ ವಿರುದ್ಧ ಅಪಪ್ರಚಾರ: ಶ್ರೀನಿವಾಸ ರಾವ್ ಆರೋಪ ಅಸಹಜ ಸಾವುಗಳ ಕುರಿತು ಸುಳ್ಳು ಮಾಹಿತಿ ಹರಡಲಾಗುತ್ತಿದೆ; ನ್ಯಾಯ ದೊರಕದಿದ್ದರೆ ಕಾನೂನು ಹೋರಾಟದ ಎಚ್ಚರಿಕೆ

ಧರ್ಮಸ್ಥಳದ ವಿರುದ್ಧ ಅಪಪ್ರಚಾರ: ಶ್ರೀನಿವಾಸ ರಾವ್ ಆರೋಪ ಅಸಹಜ ಸಾವುಗಳ ಕುರಿತು ಸುಳ್ಳು ಮಾಹಿತಿ ಹರಡಲಾಗುತ್ತಿದೆ; ನ್ಯಾಯ ದೊರಕದಿದ್ದರೆ ಕಾನೂನು ಹೋರಾಟದ ಎಚ್ಚರಿಕೆ

 


ಬೆಳ್ತಂಗಡಿ: ಧರ್ಮಸ್ಥಳ ಗ್ರಾಮ ಹಾಗೂ ದೇವಸ್ಥಾನಕ್ಕೆ ಅವಿನಾಭಾವ ಸಂಬಂಧವಿದ್ದು, ಇಲ್ಲಿ ಸದಾ ಶಾಂತಿ, ನೆಮ್ಮದಿ, ಸಾಮರಸ್ಯ ಹಾಗೂ ಕೋಮುಸೌಹಾರ್ದ ನೆಲೆಸಿದೆ. ಹಿಂದೂ, ಜೈನ, ಮುಸ್ಲಿಂ ಮತ್ತು ಕ್ರೈಸ್ತರು ಸೇರಿದಂತೆ ಸರ್ವಧರ್ಮೀಯರು ಶ್ರದ್ಧಾ-ಭಕ್ತಿಯಿಂದ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ. ಆದರೆ ಕ್ಷೇತ್ರದ ಪ್ರಗತಿ ಹಾಗೂ ಸೇವಾಕಾರ್ಯಗಳ ಯಶಸ್ಸಿನಿಂದ ಮತ್ಸರಗೊಂಡ ಕೆಲವರು ಅಪಪ್ರಚಾರದ ಮೂಲಕ ಕ್ಷೇತ್ರಕ್ಕೆ ಮಸಿ ಬಳಿಯುವ ವಿಫಲ ಪ್ರಯತ್ನ ಮಾಡುತ್ತಿದ್ದಾರೆ ಎಂದು ಧರ್ಮಸ್ಥಳ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಶ್ರೀನಿವಾಸ ರಾವ್ ಧರ್ಮಸ್ಥಳ ಆರೋಪಿಸಿದರು.




 ಧರ್ಮಸ್ಥಳದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದ ಗಿರೀಶ್ ಮಟ್ಟಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ, ಜಯಂತ್ ಟಿ. ಹಾಗೂ ಅವರ ಸಂಗಡಿಗರು 2000ರಿಂದ 2014ರ ಅವಧಿಯಲ್ಲಿ ಧರ್ಮಸ್ಥಳದಲ್ಲಿ 1,510 ಅಸಹಜ ಸಾವುಗಳು (ಯು.ಡಿ.ಆರ್.) ಸಂಭವಿಸಿವೆ ಎಂದು ಸುಳ್ಳು ವದಂತಿಗಳನ್ನು ಹರಡುತ್ತಿದ್ದಾರೆ ಎಂದು ದೂರಿದರು.


ಬುರುಡೆ ಗ್ಯಾಂಗ್‌ನ ಸದಸ್ಯರು ವಿವಿಧ ಕಚೇರಿಗಳು, ಆಯೋಗಗಳು ಹಾಗೂ ನ್ಯಾಯಾಲಯಗಳಿಗೆ ತೆರಳಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಮಾಹಿತಿ ಹಕ್ಕಿನಡಿ ಪಡೆದ ಮಾಹಿತಿಯ ಪ್ರಕಾರ 2000ರಿಂದ 2014ರ ಅವಧಿಯಲ್ಲಿ ಧರ್ಮಸ್ಥಳ ಹಾಗೂ ಸುತ್ತಮುತ್ತ ಒಟ್ಟು 374 ಅಸಹಜ ಸಾವುಗಳು ಸಂಭವಿಸಿರುವುದಾಗಿ ತಿಳಿಸಿದರು.



ಬೆಳ್ತಂಗಡಿ ತಾಲ್ಲೂಕು 81 ಗ್ರಾಮಗಳನ್ನು ಹೊಂದಿದ್ದು, ಜಿಲ್ಲೆಯಲ್ಲೇ ಅತಿ ದೊಡ್ಡ ತಾಲ್ಲೂಕಾಗಿದೆ. ಆರಂಭದಲ್ಲಿ ಬೆಳ್ತಂಗಡಿ ತಾಲ್ಲೂಕು ಕೇಂದ್ರದಲ್ಲಿ ಮಾತ್ರ ಪೊಲೀಸ್ ಠಾಣೆ ಇದ್ದು, ಇತ್ತೀಚಿನ ವರ್ಷಗಳಲ್ಲಿ ಪುಂಜಾಲಕಟ್ಟೆ, ವೇಣೂರು ಹಾಗೂ ಧರ್ಮಸ್ಥಳದಲ್ಲಿ ಪೊಲೀಸ್ ಠಾಣೆಗಳು ಆರಂಭಗೊಂಡಿವೆ ಎಂದು ವಿವರಿಸಿದರು.


ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರೂ ಇದೇ ಸಂಖ್ಯೆಯನ್ನು ಉಲ್ಲೇಖಿಸಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಶ್ರೀನಿವಾಸ ರಾವ್, ಸುಳ್ಳು ಮಾಹಿತಿ ಹಾಗೂ ಅಪಪ್ರಚಾರದಿಂದ ಧರ್ಮಸ್ಥಳಕ್ಕೆ ಕಳಂಕ ಉಂಟಾಗಿದೆ ಎಂದರು.


ಗ್ರಾಮಕ್ಕೆ ಸಂಬಂಧಿಸಿದ ಯಾವುದೇ ತೀರ್ಮಾನ ಕೈಗೊಳ್ಳುವ ಮೊದಲು ಗ್ರಾಮಸ್ಥರ ಅಹವಾಲುಗಳನ್ನು ಆಲಿಸಬೇಕು ಎಂದು ಅವರು ಸಲಹೆ ನೀಡಿದರು. ಈ ಸಂಬಂಧ ಮುಖ್ಯಮಂತ್ರಿ, ಗೃಹ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಎಲ್ಲಾ ಶಾಸಕರಿಗೆ ಮನವಿಯ ಪ್ರತಿಯನ್ನು ಕಳುಹಿಸಿಕೊಡಲಾಯಿತು.


ಸಭೆಯಲ್ಲಿ ವಕೀಲ ಕೇಶವ ಬೆಳಾಲು ಸೇರಿದಂತೆ ಹಲವು ಗ್ರಾಮಸ್ಥರು ಉಪಸ್ಥಿತರಿದ್ದು, ಸಕ್ರಿಯವಾಗಿ ಭಾಗವಹಿಸಿದರು. ಸೂಕ್ತ ನ್ಯಾಯ ದೊರಕದಿದ್ದಲ್ಲಿ ಮುಂದಿನ ದಿನಗಳಲ್ಲಿ ಕಾನೂನು ರೀತಿಯಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಶ್ರೀನಿವಾಸ ರಾವ್ ಎಚ್ಚರಿಕೆ ನೀಡಿದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!