ಮೃತರನ್ನು ಶ್ರೀರಾಮಪುರ ನಿವಾಸಿಗಳಾದ ರೂಪವತಿ, ಆಕೆಯ ಮಗಳು ಸುನೀತಾ, ಪುತ್ರರಾದ ಶಿವಕುಮಾರ್ ಮತ್ತು ಶಂಕರ್, ಸೊಸೆಯಂದಿರಾದ ದಿವ್ಯಾ ಹಾಗೂ ನಳಿನಿ ಮತ್ತು ಮೊಮ್ಮಗ ಪುನೀತ್ ಎಂದು ಗುರುತಿಸಲಾಗಿದೆ.
ಎರಡು ದಶಕದ ದಾಂಪತ್ಯದಲ್ಲಿ ಕಲಹ
ಸುಮಾರು ಎರಡು ದಶಕಗಳ ಹಿಂದೆ ಸುನೀತಾಳನ್ನು ವಿವಾಹವಾಗಿದ್ದ ಇಂದುಶೇಖರ್, ರಾಜಾಜಿನಗರದ ಭಾಷ್ಯಂ ವೃತ್ತದ ಸಮೀಪ ವಾಸವಾಗಿದ್ದ. ಆರಂಭದಲ್ಲಿ ಸಾಮಾನ್ಯವಾಗಿದ್ದ ದಾಂಪತ್ಯ ಜೀವನದಲ್ಲಿ ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ವಿಚಾರಗಳಿಗೆ ಸಂಬಂಧಿಸಿದಂತೆ ಮನಸ್ತಾಪಗಳು ಹೆಚ್ಚಾಗಿದ್ದವು ಎನ್ನಲಾಗಿದೆ.
ಪತ್ನಿ ಸುನೀತಾ ತನ್ನ ತಾಯಿ ಹಾಗೂ ಸಹೋದರರೊಂದಿಗೆ ಹೆಚ್ಚು ಒಡನಾಟ ಹೊಂದಿದ್ದ ವಿಚಾರ ಇಂದುಶೇಖರ್‌ಗೆ ಅಸಮಾಧಾನ ಉಂಟುಮಾಡಿತ್ತು. ಆಕೆ ಆಗಾಗ್ಗೆ ತವರು ಮನೆಗೆ ತೆರಳುವುದಕ್ಕೂ ಆತ ನಿರ್ಬಂಧ ವಿಧಿಸಿದ್ದ ಎನ್ನಲಾಗಿದೆ. ಈ ವಿಚಾರವಾಗಿ ದಂಪತಿ ನಡುವೆ ಹಲವು ಬಾರಿ ಜಗಳ ನಡೆದಿದ್ದು, ಕುಟುಂಬದ ಹಿರಿಯರು ರಾಜಿ ಪಂಚಾಯಿತಿ ನಡೆಸಿದರೂ ಕಲಹ ಮುಂದುವರಿದಿತ್ತು.
ಒಬ್ಬೊಬ್ಬರನ್ನಾಗಿ ಮನೆಗೆ ಕರೆಸಿ ಹತ್ಯೆ
ಪ್ರಾಥಮಿಕ ತನಿಖೆಯ ಪ್ರಕಾರ, ಪತ್ನಿಯ ಕುಟುಂಬವೇ ತನ್ನ ಸಮಸ್ಯೆಗಳಿಗೆ ಕಾರಣ ಎಂದು ಭಾವಿಸಿದ್ದ ಇಂದುಶೇಖರ್, ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಎನ್ನಲಾಗಿದೆ.
ಮೊದಲು ಪತ್ನಿ ಸುನೀತಾಳನ್ನು ರುಬ್ಬುಗುಂಡಿನಿಂದ ಹಲ್ಲೆ ಮಾಡಿ ಹತ್ಯೆಗೈದ ಆರೋಪಿ, ಮೃತದೇಹವನ್ನು ಕಾರಿನಲ್ಲಿ ಸಾಗಿಸಿ ನಂದಿಬೆಟ್ಟದ ತಪ್ಪಲಿನಲ್ಲಿ ಎಸೆದಿದ್ದಾನೆ. ಬಳಿಕ ಸುನೀತಾ ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳಿದ್ದಾಳೆ ಎಂದು ನೆರೆಹೊರೆಯವರಿಗೆ ಸುಳ್ಳು ಹೇಳಿ, ಆಕೆಯ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿದ್ದಾನೆ.
ಇದಾದ ಬಳಿಕ ಶಿವಕುಮಾರ್ ಮತ್ತು ಶಂಕರ್ ಅವರನ್ನು ಮನೆಗೆ ಕರೆಸಿ ಮದ್ಯದ ಪಾರ್ಟಿ ನಡೆಸಿದ್ದಾನೆ. ನಂತರ ರುಬ್ಬುಗುಂಡಿನಿಂದ ಹಲ್ಲೆ ಮಾಡಿ ಇಬ್ಬರನ್ನೂ ಹತ್ಯೆಗೈದಿದ್ದಾನೆ ಎನ್ನಲಾಗಿದೆ. ಬಳಿಕ ಶಂಕರ್ ಪತ್ನಿ ನಳಿನಿ, ಶಿವಕುಮಾರ್ ಪತ್ನಿ ದಿವ್ಯಾ, ಅತ್ತೆ ರೂಪವತಿ ಹಾಗೂ ಶಂಕರ್ ಪುತ್ರ ಪುನೀತ್‌ನನ್ನೂ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಕ್ಷ್ಯ ನಾಶಕ್ಕೆ ಯತ್ನ
ಏಳು ಮಂದಿಯನ್ನು ಹತ್ಯೆಗೈದ ಬಳಿಕ ಮೃತದೇಹಗಳನ್ನು ಒಂದೇ ಸ್ಥಳದಲ್ಲಿ ಇರಿಸದೆ ವಿವಿಧ ಪ್ರದೇಶಗಳಿಗೆ ಸಾಗಿಸಿ ಎಸೆದಿದ್ದಾನೆ. ಮನೆಯಲ್ಲಿದ್ದ ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಿ, ಕೃತ್ಯಕ್ಕೆ ಬಳಸಿದ್ದ ರುಬ್ಬುಗುಂಡನ್ನು ರಾಸಾಯನಿಕ ವಸ್ತುಗಳಿಂದ ತೊಳೆದು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಳಿನಿ ತಾಯಿ ನೀಡಿದ ದೂರಿನಿಂದ ಪ್ರಕರಣ ಬಯಲು
ಮಗಳು ಕಾಣೆಯಾಗಿರುವ ಬಗ್ಗೆ ನಳಿನಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ತನಿಖೆ ಕೈಗೊಂಡ ಪೊಲೀಸರು ಪ್ರಕರಣದ ಭೀಕರ ಸತ್ಯವನ್ನು ಬಯಲಿಗೆಳೆದಿದ್ದಾರೆ. ಸದ್ಯ ಆರೋಪಿ ಇಂದುಶೇಖರ್‌ನನ್ನು ಬಂಧಿಸಲಾಗಿದ್ದು, ಮೃತದೇಹಗಳನ್ನು ಸಾಗಿಸಲು ಬಳಸಿದ್ದ ಕಾರು ಸೇರಿದಂತೆ ಕೃತ್ಯಕ್ಕೆ ಸಂಬಂಧಿಸಿದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ನಂದಿಬೆಟ್ಟದಲ್ಲಿ ಪುನೀತ್ ಮೃತದೇಹ ಪತ್ತೆ
ಆರೋಪಿಯ ಮಾಹಿತಿ ಆಧರಿಸಿ ಪೊಲೀಸರು ನಂದಿಬೆಟ್ಟ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಹಲವು ಗಂಟೆಗಳ ಹುಡುಕಾಟದ ಬಳಿಕ ಪುನೀತ್‌ನ ಮೃತದೇಹ ಪತ್ತೆಯಾಗಿದೆ. ಉಳಿದ ಆರು ಮಂದಿಯ ಮೃತದೇಹಗಳ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿದಿದೆ.
ಹತ್ಯೆ ನಡೆದ ಸ್ಥಳ, ಮೃತದೇಹಗಳನ್ನು ಸಾಗಿಸಿದ ಮಾರ್ಗ ಹಾಗೂ ಸಾಕ್ಷ್ಯ ನಾಶಕ್ಕೆ ಆರೋಪಿ ನಡೆಸಿರುವ ಪ್ರಯತ್ನಗಳ ಕುರಿತು ತನಿಖೆ ನಡೆಸಲು ಉತ್ತರ ವಿಭಾಗದ ಮೂವರು ಎಸಿಪಿಗಳನ್ನೊಳಗೊಂಡ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.





