ಉಜಿರೆ: ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ಮರದ ಬಳಕೆ ಹೆಚ್ಚಾಗಿದ್ದು, ಮರಗಳ ಅಲಭ್ಯತೆ ಹಾಗೂ ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಮರಕ್ಕೆ ಪರ್ಯಾಯವಾಗಿ ಇತರ ಕಚ್ಚಾ ವಸ್ತುಗಳಿಂದ ವಿವಿಧ ಉತ್ಪನ್ನಗಳನ್ನು ತಯಾರಿಸುವ ಪ್ರಯತ್ನ ಶ್ಲಾಘನೀಯ ಎಂದು ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಹೇಳಿದರು.ಅವರು ಭಾನುವಾರ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ವತಿಯಿಂದ ಆಯೋಜಿಸಲಾದ ನೂತನ ಉತ್ಪನ್ನಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಉತ್ಪನ್ನಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಕಟ್ಟಡ ನಿರ್ಮಾಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಮರದ ಅಗತ್ಯವಿದ್ದು, ಇತ್ತೀಚಿನ ದಿನಗಳಲ್ಲಿ ಮರಗಳ ಲಭ್ಯತೆಯೂ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮರದ ಬಳಕೆಗೆ ಪರ್ಯಾಯವಾಗಿ ಸಿಮೆಂಟ್ ಹಾಗೂ ಇತರ ವಸ್ತುಗಳಿಂದ ವಿವಿಧ ಉತ್ಪನ್ನಗಳನ್ನು ತಯಾರಿಸುವ ಮೂಲಕ ನವೀನ ಪ್ರಯತ್ನಕ್ಕೆ ಕೈಹಾಕಿರುವುದು ಉತ್ತಮ ಬೆಳವಣಿಗೆ. ಉದ್ಯಮದ ಜತೆಗೆ ಸಾಮಾಜಿಕ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿಯೂ ಮೋಹನ್ ಕುಮಾರ್ ಸಕ್ರಿಯವಾಗಿ ತೊಡಗಿಸಿಕೊಂಡಿರುವುದು ಮೆಚ್ಚುವಂತಹದ್ದು ಎಂದರು.
ಒಂದು ಉದ್ಯಮದ ಬೆಳವಣಿಗೆಗೆ ಮಾಲಕರು ಮತ್ತು ಕಾರ್ಮಿಕರ ನಡುವಿನ ಪರಸ್ಪರ ಸಹಕಾರ ಅತ್ಯಂತ ಮುಖ್ಯ. ಕಾರ್ಮಿಕರು ಮಾಲಕರಿಗೆ ಬೆಂಬಲವಾಗಿ ನಿಂತಾಗ ಸಂಸ್ಥೆಯು ಅಭಿವೃದ್ಧಿಯ ಪಥದಲ್ಲಿ ಸಾಗಲು ಸಾಧ್ಯವಾಗುತ್ತದೆ. ಉದ್ಯಮದ ಯಶಸ್ಸಿನಲ್ಲಿ ಕಾರ್ಮಿಕರ ಸಹಕಾರ ಮತ್ತು ಪರಿಶ್ರಮ ಪ್ರಮುಖ ಪಾತ್ರ ವಹಿಸುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಶಾಖೆಗಳನ್ನು ತೆರೆದು ಸೇವೆಯನ್ನು ವಿಸ್ತರಿಸುವ ಮೂಲಕ ಆಯಾ ಪ್ರದೇಶಗಳ ಅಭಿವೃದ್ಧಿಗೂ ಮೋಹನ್ ಕುಮಾರ್ ಕೊಡುಗೆ ನೀಡಿದ್ದಾರೆ ಎಂದು ಅವರು ಶ್ಲಾಘಿಸಿದರು.
ಉದ್ಯಮದಲ್ಲಿ ಹೊಸತನ ಮತ್ತು ದೂರದೃಷ್ಟಿ ಅಗತ್ಯ
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಉದ್ಯಮಿ ಹಾಗೂ ಶಶಿ ಕ್ಯಾಟರಿಂಗ್ ಸರ್ವಿಸಸ್ ಪ್ರೈ.ಲಿ. ಸಂಸ್ಥೆಯ ಶಶಿಧರ ಶೆಟ್ಟಿ ನವಶಕ್ತಿ ಮಾತನಾಡಿ, ಕಾಲಘಟ್ಟಕ್ಕೆ ಅನುಗುಣವಾಗಿ ಉದ್ಯಮದಲ್ಲಿ ಬದಲಾವಣೆ ಹಾಗೂ ಹೊಸತನವನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಮೋಹನ್ ಕುಮಾರ್ ತಮ್ಮ ಉದ್ಯಮದಲ್ಲಿ ನಿರಂತರವಾಗಿ ಹೊಸ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ ಎಂದರು.
ಉದ್ಯಮಿಗಳಲ್ಲಿ ಕನಸು, ದೂರದೃಷ್ಟಿ ಹಾಗೂ ಹೊಸತನವನ್ನು ಅಳವಡಿಸಿಕೊಳ್ಳುವ ಮನೋಭಾವ ಇರಬೇಕು. ಹೊಸ ಶಾಖೆಗಳನ್ನು ಆರಂಭಿಸುವ ಮೂಲಕ ಉದ್ಯಮವನ್ನು ಯಶಸ್ವಿಯಾಗಿ ವಿಸ್ತರಿಸಿರುವ ಮೋಹನ್ ಕುಮಾರ್ ಅವರ ಸಾಧನೆ ಗಮನಾರ್ಹ. ಉದ್ಯಮ ನಡೆಸುವುದು ಸುಲಭದ ಮಾತಲ್ಲ. ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರುವ ಸಂದರ್ಭದಲ್ಲಿ ಅನೇಕ ಸವಾಲುಗಳು ಎದುರಾಗುತ್ತವೆ. ಅವುಗಳನ್ನು ಸಮರ್ಥವಾಗಿ ಎದುರಿಸಿ ಮುನ್ನಡೆಯುವುದು ಉದ್ಯಮಿಯ ಯಶಸ್ಸಿನ ಲಕ್ಷಣವಾಗಿದೆ ಎಂದು ಹೇಳಿದರು.
ಬೆಳ್ತಂಗಡಿಯಂತಹ ಪ್ರದೇಶದಲ್ಲಿ ಉದ್ಯಮವನ್ನು ಬೆಳೆಸುವುದು ಸಾಹಸದ ಕೆಲಸ. ಆದರೂ ಸತತ ಪರಿಶ್ರಮ, ದೃಢಸಂಕಲ್ಪ ಹಾಗೂ ಕಾರ್ಯನಿಷ್ಠೆಯಿಂದ ಮೋಹನ್ ಕುಮಾರ್ ಅದನ್ನು ಸಾಧ್ಯವಾಗಿಸಿದ್ದಾರೆ. ಉದ್ಯಮಿಯಾಗಿದ್ದರೂ ಸಾಮಾಜಿಕ ಚಟುವಟಿಕೆಗಳಲ್ಲಿ ಸಾಮಾನ್ಯರಂತೆ ಬೆರೆಯುವ ಅವರ ಗುಣ ಮೆಚ್ಚುವಂತದ್ದು. ಪ್ರತಿವರ್ಷ ಉದ್ಯಮದಲ್ಲಿ ಹೊಸತನವನ್ನು ಪರಿಚಯಿಸುವ ಮೂಲಕ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಶಶಿಧರ ಶೆಟ್ಟಿ ಅಭಿಪ್ರಾಯಪಟ್ಟರು.
ಶಿಸ್ತು, ದಕ್ಷತೆ ಮತ್ತು ಉದ್ಯಮಶೀಲತೆ ಯಶಸ್ಸಿನ ಮೂಲ
ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಯು. ಶರತ್ ಕೃಷ್ಣ ಪಡ್ವೆಟ್ನಾಯ ಮಾತನಾಡಿ, ಶಿಸ್ತು, ದಕ್ಷತೆ, ಉದ್ಯಮಶೀಲತೆ ಹಾಗೂ ಎಲ್ಲರನ್ನು ಒಗ್ಗೂಡಿಸಿಕೊಂಡು ಮುನ್ನಡೆಯುವ ಗುಣಗಳಿದ್ದರೆ ಉದ್ಯಮವನ್ನು ಯಶಸ್ವಿಯಾಗಿ ಮುನ್ನಡೆಸಲು ಸಾಧ್ಯ. ಈ ಎಲ್ಲ ಗುಣಗಳು ಮೋಹನ್ ಕುಮಾರ್ ಅವರಲ್ಲಿವೆ ಎಂದರು.
ಕಂಡ ಕನಸನ್ನು ನನಸಾಗಿಸಿ ಸಾಧನೆ ತೋರಿರುವ ಮೋಹನ್ ಕುಮಾರ್, ಉತ್ಪನ್ನಗಳ ಗುಣಮಟ್ಟವನ್ನು ನಿರಂತರವಾಗಿ ಕಾಯ್ದುಕೊಂಡು ಬಂದಿದ್ದಾರೆ. ಉದ್ಯಮದ ಲಾಭದ ಬಹುಭಾಗವನ್ನು ಸಮಾಜಕ್ಕೆ ವಿನಿಯೋಗಿಸುವ ಮೂಲಕ ಸಾಮಾಜಿಕ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದಾರೆ. ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಅವರ ಕೊಡುಗೆ ಮಹತ್ವದ್ದಾಗಿದೆ ಎಂದು ಹೇಳಿದರು.
38 ವರ್ಷಗಳ ಕನಸಿನ ಪಯಣ
ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಮಾಲಕ ಕೆ. ಮೋಹನ್ ಕುಮಾರ್ ಸ್ವಾಗತಿಸಿ ಮಾತನಾಡಿ, 38 ವರ್ಷಗಳ ಹಿಂದೆ ತಂದೆಯವರು ಯಾವ ಕನಸಿನೊಂದಿಗೆ ಸಂಸ್ಥೆಯನ್ನು ಪ್ರಾರಂಭಿಸಿದ್ದರೋ, ಆ ಕನಸನ್ನು ಎಲ್ಲರ ಸಹಕಾರದೊಂದಿಗೆ ಮುನ್ನಡೆಸಿಕೊಂಡು ಬಂದಿದ್ದೇನೆ ಎಂದರು.
ಎಲ್ಲರೂ ನಿದ್ದೆಯಲ್ಲಿ ಕನಸು ಕಾಣುತ್ತಾರೆ. ಆದರೆ ತಾನು ಎಚ್ಚರವಾಗಿದ್ದಾಗಲೇ ಬದುಕಿನ ಕನಸುಗಳನ್ನು ಕಂಡು, ಅವುಗಳನ್ನು ನನಸಾಗಿಸಲು ನಿರಂತರವಾಗಿ ಶ್ರಮಿಸಿದ್ದೇನೆ. ಸಂಸ್ಥೆಯ ಬೆಳವಣಿಗೆಯಲ್ಲಿ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಎ.ಸಿ.ಸಿ.ಇ.(ಐ) ಬೆಳ್ತಂಗಡಿ ಅಧ್ಯಕ್ಷ ಸುರೇಶ್ ಬಂಗೇರ, ಲೀಲಾವತಿ, ರಾಜು ಮೇಸ್ತ್ರಿ, ರೇಶ್ಮಾ ಮೋಹನ್ ಕುಮಾರ್ ಉಪಸ್ಥಿತರಿದ್ದರು.
ಅಜಿತ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿದರು.






