ಚಿಕ್ಕಮಗಳೂರು: ದೇವಿರಮ್ಮ ಬೆಟ್ಟ ಹತ್ತುವಾಗ ಕುಸಿದು ಬಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕನ್ಯಾಡಿ ನಿವಾಸಿ ಲಕ್ಷ್ಮಣ್ (35) ಮೃತಪಟ್ಟಿದ್ದಾರೆ.
ನ.8ರಂದು ಮಲ್ಲೇನಹಳ್ಳಿ ಕಡೆಯ ಮಾರ್ಗದಿಂದ ದೇವಿರಮ್ಮ ಬೆಟ್ಟ ಹತ್ತುತ್ತಿದ್ದ ವೇಳೆ ಲಕ್ಷ್ಮಣ್ ಏಕಾಏಕಿ ಕುಸಿದು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹವನ್ನು ಅಗ್ನಿಶಾಮಕ ಸಿಬ್ಬಂದಿ ಬೆಟ್ಟದಿಂದ ಕೆಳಕ್ಕೆ ತಂದು, ಮರಣೋತ್ತರ ಪರೀಕ್ಷೆಗಾಗಿ ಚಿಕ್ಕಮಗಳೂರಿನ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಬೆಂಗಳೂರಿನ ಬಾಷ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮಣ್, ಹೂವಿನಹಳ್ಳಿಯಲ್ಲಿರುವ ತಮ್ಮ ಬಾವನ ಮನೆಗೆ ಬಂದಿದ್ದರು. ರಾತ್ರಿ ಪ್ರಯಾಣ ಮಾಡಿ ಬಂದಿದ್ದ ಅವರು, ಬೆಳಗಿನ ಜಾವ ಬಾವನೊಂದಿಗೆ ದೇವಿರಮ್ಮ ಬೆಟ್ಟ ಹತ್ತಲು ತೆರಳಿದ್ದರು. ಬೆಟ್ಟದಲ್ಲಿ ಬೆಳಿಗ್ಗೆ ದಟ್ಟ ಮಂಜು ಮುಸುಕಿದ್ದ ವೇಳೆ ಹತ್ತುವಾಗ ಕುಸಿದು ಬಿದ್ದು ಮೃತಪಟ್ಟಿದ್ದಾರೆ.ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.





