ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಬೆಳ್ತಂಗಡಿ ವ್ಯಾಪಾರಸ್ಥರ ಗೋಳು ಕೇಳುವವರಾರು? ಹೆದ್ದಾರಿ ಕಾಮಗಾರಿ ಅವ್ಯವಸ್ಥೆ: ಅಂಗಡಿಗಳ ಮುಂಭಾಗದ ಹೊಂಡ ಮುಚ್ಚದೆ ವ್ಯಾಪಾರಕ್ಕೆ ತೀವ್ರ ತೊಂದರೆ ದೀಪಾವಳಿ ವ್ಯಾಪಾರದ ನಿರೀಕ್ಷೆಯಲ್ಲಿದ್ದ ವರ್ತಕರಿಗೆ ನಿರಾಸೆ; ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ಆಕ್ರೋಶ.

ಬೆಳ್ತಂಗಡಿ ವ್ಯಾಪಾರಸ್ಥರ ಗೋಳು ಕೇಳುವವರಾರು? ಹೆದ್ದಾರಿ ಕಾಮಗಾರಿ ಅವ್ಯವಸ್ಥೆ: ಅಂಗಡಿಗಳ ಮುಂಭಾಗದ ಹೊಂಡ ಮುಚ್ಚದೆ ವ್ಯಾಪಾರಕ್ಕೆ ತೀವ್ರ ತೊಂದರೆ ದೀಪಾವಳಿ ವ್ಯಾಪಾರದ ನಿರೀಕ್ಷೆಯಲ್ಲಿದ್ದ ವರ್ತಕರಿಗೆ ನಿರಾಸೆ; ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ಆಕ್ರೋಶ.

 


ಬೆಳ್ತಂಗಡಿ: ಪುಂಜಾಲಕಟ್ಟೆ–ಚಾರ್ಮಾಡಿ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಭರದಿಂದ ಸಾಗುತ್ತಿದ್ದರೂ, ಬೆಳ್ತಂಗಡಿ ನಗರದಲ್ಲಿ ಕಾಮಗಾರಿಯ ಅವ್ಯವಸ್ಥೆಯಿಂದ ಸ್ಥಳೀಯ ವ್ಯಾಪಾರಸ್ಥರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಸ್ತೆ ಬದಿಯಲ್ಲಿ ಚರಂಡಿ ನಿರ್ಮಾಣಕ್ಕಾಗಿ ಅಂಗಡಿಗಳ ಮುಂಭಾಗದಲ್ಲಿ ದೊಡ್ಡ ದೊಡ್ಡ ಹೊಂಡಗಳನ್ನು ಅಗೆದು ಹಾಗೆಯೇ ಬಿಡಲಾಗಿದ್ದು, ದೀಪಾವಳಿ ಹಬ್ಬದ ವ್ಯಾಪಾರದ ನಿರೀಕ್ಷೆಯಲ್ಲಿದ್ದ ವರ್ತಕರಿಗೆ ಭಾರೀ ನಿರಾಸೆ ಎದುರಾಗಿದೆ.









ದೀಪಾವಳಿ ಹಬ್ಬದ ಸಂದರ್ಭದಲ್ಲಿ ಉತ್ತಮ ವ್ಯಾಪಾರ ನಡೆಯಬಹುದು ಎಂಬ ನಿರೀಕ್ಷೆಯಲ್ಲಿ ಎಲೆಕ್ಟ್ರಾನಿಕ್ಸ್,ಮೊಬೈಲ್ ಸೇರಿದಂತೆ ವಿವಿಧ ಅಂಗಡಿಗಳ ವ್ಯಾಪಾರಸ್ಥರು ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ಸರಕುಗಳನ್ನು ಖರೀದಿಸಿದ್ದರು. ಆದರೆ ಅಂಗಡಿಗಳ ಮುಂಭಾಗದಲ್ಲಿ ಚರಂಡಿ ಕಾಮಗಾರಿಗಾಗಿ ಅಗೆದಿರುವ ಹೊಂಡಗಳಿಂದ ಗ್ರಾಹಕರು ಅಂಗಡಿಗಳಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಹಬ್ಬದ ವ್ಯಾಪಾರಕ್ಕೆ ಅಡ್ಡಿಯಾಗಿದ್ದು, ವ್ಯಾಪಾರಸ್ಥರು ಆರ್ಥಿಕ ಸಂಕಷ್ಟದ ಆತಂಕದಲ್ಲಿದ್ದಾರೆ.



ಹಬ್ಬದ ವ್ಯಾಪಾರಕ್ಕೆ ಕಾಮಗಾರಿ ಅಡ್ಡಿ


ನಗರದಲ್ಲಿ ಕಳೆದ ಕೆಲವು ದಿನಗಳಿಂದ ರಸ್ತೆ ಬದಿಯಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಅಂಗಡಿಗಳ ಮುಂಭಾಗದಲ್ಲಿ ದೊಡ್ಡ ಹೊಂಡಗಳನ್ನು ಅಗೆಲಾಗಿದೆ. ದೀಪಾವಳಿ ಹಬ್ಬದ ಮುಂಚಿತವಾಗಿ ಈ ಹೊಂಡಗಳನ್ನು ಮುಚ್ಚಿ, ಗ್ರಾಹಕರು ಅಂಗಡಿಗಳಿಗೆ ಸುಲಭವಾಗಿ ಬರುವಂತೆ ವ್ಯವಸ್ಥೆ ಮಾಡಬೇಕೆಂದು ವ್ಯಾಪಾರಸ್ಥರು ಮನವಿ ಮಾಡಿಕೊಂಡಿದ್ದರು. ಆದರೆ ಕಾಮಗಾರಿ ಪೂರ್ಣಗೊಳಿಸದೇ ಅಂಗಡಿಗಳ ಮುಂಭಾಗವನ್ನು ಹಾಗೆಯೇ ಬಿಡಲಾಗಿದೆ.

ವರ್ಷವಿಡೀ ನಿರೀಕ್ಷಿಸುವ ವ್ಯಾಪಾರದಲ್ಲಿ ದೀಪಾವಳಿ ಪ್ರಮುಖವಾಗಿದ್ದು, ಈ ಸಂದರ್ಭದಲ್ಲಿ ಹೆಚ್ಚಿನ ವ್ಯಾಪಾರ ನಡೆಯುತ್ತದೆ. ಹಬ್ಬದ ವ್ಯಾಪಾರಕ್ಕಾಗಿ ಸಾಲ ಮಾಡಿ ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ವಿವಿಧ ವಸ್ತುಗಳನ್ನು ಸಂಗ್ರಹಿಸಿದ್ದ ವ್ಯಾಪಾರಸ್ಥರಿಗೆ ಇದೀಗ ಗ್ರಾಹಕರ ಕೊರತೆ ಎದುರಾಗಿದೆ. ಅಂಗಡಿಗಳ ಮುಂಭಾಗದಲ್ಲಿ ಹೊಂಡಗಳಿರುವುದರಿಂದ ವಾಹನಗಳ ನಿಲುಗಡೆ ಹಾಗೂ ಗ್ರಾಹಕರ ಓಡಾಟಕ್ಕೂ ತೊಂದರೆಯಾಗುತ್ತಿದೆ.


ಗುತ್ತಿಗೆದಾರರ ಸಿಬ್ಬಂದಿಗಳಿಂದ ಉಡಾಫೆ ಉತ್ತರಕ್ಕೆ ವರ್ತಕರ ಅಸಮಾಧಾನ


ಅಂಗಡಿಗಳ ಮುಂಭಾಗದಲ್ಲಿ ತಾತ್ಕಾಲಿಕವಾಗಿ ವ್ಯಾಪಾರಕ್ಕೆ ಅನುಕೂಲವಾಗುವ ರೀತಿಯಲ್ಲಿ ವ್ಯವಸ್ಥೆ ಮಾಡಿಕೊಡುವಂತೆ ಗುತ್ತಿಗೆದಾರರನ್ನು ವ್ಯಾಪಾರಸ್ಥರು ವಿನಂತಿಸಿಕೊಂಡಿದ್ದಾರೆ. ಆದರೆ ಈ ಮನವಿಗೆ ಸೂಕ್ತ ಸ್ಪಂದನೆ ದೊರೆಯದೆ, ಗುತ್ತಿಗೆದಾರರ ಸಿಬ್ಬಂದಿಯೊಬ್ಬರಿಂದ ಉಡಾಫೆಯ ಉತ್ತರ ಬರುತ್ತಿದೆ ಎಂದು ವರ್ತಕರು ಆರೋಪಿಸಿದ್ದಾರೆ.

'ನಮ್ಮ ಸಂಕಷ್ಟವನ್ನು ಕೇಳುವವರಾರು? ಈಗಾಗಲೇ ವ್ಯಾಪಾರವಿಲ್ಲ. ದೀಪಾವಳಿ ಹಬ್ಬದ ವ್ಯಾಪಾರದ ನಿರೀಕ್ಷೆಯಲ್ಲಿದ್ದ ನಮಗೆ ಅಂಗಡಿಗಳ ಮುಂಭಾಗದಲ್ಲಿ ಹೊಂಡಗಳನ್ನು ಅಗೆದು ಹಾಕಿರುವುದರಿಂದ ಗ್ರಾಹಕರು ಬಾರದ ಸ್ಥಿತಿ ನಿರ್ಮಾಣವಾಗಿದೆ. ಸಾಲ ಮಾಡಿ ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿದ್ದೇವೆ. ವ್ಯಾಪಾರವೇ ನಡೆಯದಿದ್ದರೆ ನಮ್ಮ ಗತಿ ಏನು?' ಎಂದು ವ್ಯಾಪಾರಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ರಸ್ತೆ ಅಭಿವೃದ್ಧಿ ಕಾಮಗಾರಿಗೆ ವ್ಯಾಪಾರಸ್ಥರ ವಿರೋಧವಿಲ್ಲ. ಆದರೆ ಇಡೀ ವರ್ಷದ ಪ್ರಮುಖ ವ್ಯಾಪಾರ ದೀಪಾವಳಿ ಸಂದರ್ಭದಲ್ಲಿ ನಡೆಯುವುದರಿಂದ ಹಬ್ಬ ಮುಗಿದ ಬಳಿಕ ಅಂಗಡಿಗಳ ಮುಂಭಾಗದ ಕಾಮಗಾರಿ ಆರಂಭಿಸುವಂತೆ ಮನವಿ ಮಾಡಿಕೊಂಡಿದ್ದರೂ ಅದನ್ನು ಪರಿಗಣಿಸದೆ ವ್ಯಾಪಾರಸ್ಥರನ್ನು ಸಂಕಷ್ಟಕ್ಕೆ ದೂಡಲಾಗಿದೆ ಎಂಬುದು ವರ್ತಕರ ಅಸಮಾಧಾನವಾಗಿದೆ.


ಮಳೆಯಿಂದ ಹೊಂಡಗಳಲ್ಲಿ ನೀರು; ಹೆಚ್ಚಿದ ಸಮಸ್ಯೆ


ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದ ಅಂಗಡಿಗಳ ಮುಂಭಾಗದಲ್ಲಿ ಅಗೆದಿರುವ ಹೊಂಡಗಳಲ್ಲಿ ನೀರು ನಿಂತಿದ್ದು, ವ್ಯಾಪಾರಸ್ಥರು ಹಾಗೂ ಗ್ರಾಹಕರಿಗೆ ಮತ್ತಷ್ಟು ತೊಂದರೆಯಾಗುತ್ತಿದೆ. ಹೊಂಡಗಳಲ್ಲಿ ನೀರು ತುಂಬಿರುವುದರಿಂದ ಅಂಗಡಿಗಳಿಗೆ ಪ್ರವೇಶಿಸುವುದು ಕಷ್ಟವಾಗಿದ್ದು, ಗ್ರಾಹಕರು ಅಂಗಡಿಗಳತ್ತ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾಮಗಾರಿಯನ್ನು ತಾತ್ಕಾಲಿಕವಾಗಿ ಸರಿಪಡಿಸುವಂತೆ ಸೂಚಿಸಿದರೂ ಗುತ್ತಿಗೆದಾರರ ಕಡೆಯಿಂದ 'ಮಾಡುವುದಿಲ್ಲ, ಏನು ಮಾಡುತ್ತೀರಿ?' ಎಂಬ ಧರ್ಪದ ಉತ್ತರ ಬರುತ್ತಿದೆ ಎಂದು ವ್ಯಾಪಾರಸ್ಥರು ಆರೋಪಿಸಿದ್ದಾರೆ.


ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಪಂದಿಸಲಿ


ಹೆದ್ದಾರಿ ಅಭಿವೃದ್ಧಿ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ವ್ಯಾಪಾರಸ್ಥರು ಸಹಕಾರ ನೀಡಲು ಸಿದ್ಧರಿದ್ದರೂ, ಸಾರ್ವಜನಿಕರಿಗೆ ಹಾಗೂ ವ್ಯಾಪಾರಸ್ಥರಿಗೆ ಅನಗತ್ಯ ತೊಂದರೆ ಉಂಟಾಗದಂತೆ ಕಾಮಗಾರಿ ನಡೆಸಬೇಕೆಂಬುದು ಅವರ ಆಗ್ರಹವಾಗಿದೆ. ಹಬ್ಬದ ಸಂದರ್ಭದಲ್ಲಿ ವ್ಯಾಪಾರಕ್ಕೆ ಅನುಕೂಲವಾಗುವಂತೆ ಅಂಗಡಿಗಳ ಮುಂಭಾಗದ ಹೊಂಡಗಳನ್ನು ತಕ್ಷಣ ಮುಚ್ಚಿ, ಗ್ರಾಹಕರು ಸುಗಮವಾಗಿ ಅಂಗಡಿಗಳಿಗೆ ಬರುವ ವ್ಯವಸ್ಥೆ ಮಾಡಬೇಕು.

ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರು ವ್ಯಾಪಾರಸ್ಥರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ದೀಪಾವಳಿ ವ್ಯಾಪಾರದ ನಿರೀಕ್ಷೆಯಲ್ಲಿ ಬಂಡವಾಳ ಹೂಡಿರುವ ವ್ಯಾಪಾರಸ್ಥರಿಗೆ ಭಾರೀ ಆರ್ಥಿಕ ನಷ್ಟ ಉಂಟಾಗುವ ಆತಂಕ ಎದುರಾಗಿದೆ.

ವ್ಯಾಪಾರಸ್ಥರ ಸಂಕಷ್ಟಕ್ಕೆ ಸ್ಪಂದಿಸುವವರು ಯಾರು? ಕಾಮಗಾರಿ ಅವ್ಯವಸ್ಥೆಗೆ ಕಡಿವಾಣ ಹಾಕಿ ವರ್ತಕರಿಗೆ ನ್ಯಾಯ ದೊರಕಿಸಿಕೊಡಲು ಸಂಬಂಧಪಟ್ಟ ಅಧಿಕಾರಿಗಳು ಮುಂದಾಗುವರೇ ಎಂಬುದನ್ನು ಕಾದು ನೋಡಬೇಕಾಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!