ಬೆಳ್ತಂಗಡಿ: ಕಳೆದ ನಾಲ್ಕು ದಶಕಗಳಿಂದ ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನಗಳು ಹಾಗೂ ಉತ್ತಮ ಸೇವೆಯನ್ನು ನೀಡುತ್ತಾ ಉದ್ಯಮ ಕ್ಷೇತ್ರದಲ್ಲಿ ತನ್ನದೇ ಆದ ಗುರುತನ್ನು ಮೂಡಿಸಿರುವ ಉಜಿರೆಯ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಸಂಸ್ಥೆಯ ನೂತನ ಉತ್ಪನ್ನಗಳ ಘಟಕಕ್ಕೆ ಚಾಲನೆ ಹಾಗೂ ಶ್ರೀ ಲಕ್ಷ್ಮೀ ಪೂಜಾ ಕಾರ್ಯಕ್ರಮ ನ. 7ರಂದು ಸಂಸ್ಥೆಯ ಆವರಣದಲ್ಲಿ ನಡೆಯಿತು.
ಸಂಸ್ಥೆಯ ಮಾಲಕ ಕೆ. ಮೋಹನ್ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ನೂತನ ಉತ್ಪನ್ನಗಳ ಘಟಕಕ್ಕೆ ಚಾಲನೆ ನೀಡಿ ಮಾತನಾಡಿ,
ಲಕ್ಷ್ಮೀ ಇಂಡಸ್ಟ್ರೀಸ್ ಸಂಸ್ಥೆಯು ಕಳೆದ ಹಲವು ವರ್ಷಗಳಿಂದ ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನಗಳನ್ನು ಒದಗಿಸುವ ಮೂಲಕ ಉದ್ಯಮ ಕ್ಷೇತ್ರದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಸಂಸ್ಥೆಯ ಮಾಲಕ ಮೋಹನ್ ಕುಮಾರ್ ಅವರು ತಮ್ಮ ಉದ್ಯಮವನ್ನು ಇನ್ನಷ್ಟು ವಿಸ್ತರಿಸಿ ಮುಂದಿನ ದಿನಗಳಲ್ಲಿ ಸಾವಿರಾರು ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಮಟ್ಟಕ್ಕೆ ಬೆಳೆಯಬೇಕು ಎಂದು ಹಾರೈಸಿದರು. ಸ್ಥಳೀಯವಾಗಿ ಉದ್ಯಮಗಳು ಬೆಳವಣಿಗೆ ಹೊಂದುವುದರಿಂದ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ದೊರೆಯುವುದರ ಜೊತೆಗೆ ಉದ್ಯೋಗ ಸೃಷ್ಟಿಗೂ ಸಹಕಾರಿಯಾಗಲಿದೆ ಎಂಬ ಆಶಯ ವ್ಯಕ್ತಪಡಿಸಿದರು.
ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡ್ವೆಟ್ನಾಯ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಸಂಸ್ಥೆಯ ನೂತನ ಘಟಕದ ಬೆಳವಣಿಗೆ ಹಾಗೂ ಯಶಸ್ಸಿಗೆ ಶುಭ ಹಾರೈಸಿದರು.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಡಿಜಿಎಂ ತೇಜಸ್ವಿನಿ ವಿ.ಸಿ. ಅವರು ಮಾತನಾಡಿ, ಮೋಹನ್ ಕುಮಾರ್ ಅವರ ಸರಳತೆ, ಸಜ್ಜನಿಕೆ ಹಾಗೂ ಉದ್ಯಮದ ಮೇಲಿನ ಬದ್ಧತೆ ಮೆಚ್ಚುವಂತಹದ್ದು. ಸಂಸ್ಥೆಯ ಮುಂದಿನ ಬೆಳವಣಿಗೆ ಹಾಗೂ ಉದ್ಯಮ ವಿಸ್ತರಣೆಗೆ ಬ್ಯಾಂಕಿನಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು. ಸಂಸ್ಥೆಯು ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಗತಿ ಸಾಧಿಸಿ ಉದ್ಯಮ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಲಿ ಎಂದು ಆಶಿಸಿದರು.
ಉಜಿರೆ ವರ್ತಕರ ಸಂಘದ ಅಧ್ಯಕ್ಷ ಪ್ರಸಾದ್ ಬಿ.ಎಸ್. ಉದ್ಯಮಿ ರಾಜೇಶ್ ಶೆಟ್ಟಿ ನವಶಕ್ತಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಸ್ಥೆಯ ನೂತನ ಘಟಕಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿ ಗಣ್ಯರನ್ನು ಸಂಸ್ಥೆಯ ಮಾಲಕ ಕೆ. ಮೋಹನ್ ಕುಮಾರ್, ಶ್ರೀಮತಿ ರೇಶ್ಮಾ ಮೋಹನ್ ಕುಮಾರ್, ಶ್ರೀಮತಿ ಲೀಲಾವತಿ, ರಾಜು ಮೇಸ್ತ್ರಿ, ಮೌಲ್ಯಲಕ್ಷ್ಮೀ ಹಾಗೂ ಮಾನ್ವಿಲಕ್ಷ್ಮೀ ಅವರು ಆತ್ಮೀಯವಾಗಿ ಸ್ವಾಗತಿಸಿ ಗೌರವಿಸಿದರು.
ನಾಲ್ಕು ದಶಕಗಳ ಉದ್ಯಮ ಅನುಭವ, ಗುಣಮಟ್ಟದ ಉತ್ಪನ್ನಗಳು ಹಾಗೂ ಗ್ರಾಹಕ ಸ್ನೇಹಿ ಸೇವೆಯ ಮೂಲಕ ಗುರುತಿಸಿಕೊಂಡಿರುವ ಲಕ್ಷ್ಮೀ ಇಂಡಸ್ಟ್ರೀಸ್ ಸಂಸ್ಥೆಯ ನೂತನ ಉತ್ಪನ್ನಗಳ ಘಟಕದ ಆರಂಭವು ಸಂಸ್ಥೆಯ ಬೆಳವಣಿಗೆಯಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದ್ದು, ಮುಂದಿನ ದಿನಗಳಲ್ಲಿ ಉದ್ಯಮ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡುವ ನಿರೀಕ್ಷೆ ಮೂಡಿಸಿದೆ.
ಉಜಿರೆಯ ಲಕ್ಷ್ಮೀ ಇಂಡಸ್ಟ್ರೀಸ್ ಸಂಸ್ಥೆಯ ನೂತನ ಘಟಕವು ಯಶಸ್ಸಿನ ಹೊಸ ಅಧ್ಯಾಯಕ್ಕೆ ನಾಂದಿ ಹಾಡಲಿ ಎಂಬ ಹಾರೈಕೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
ನಾಳೆ ನ 08 ನೂತನ ಉತ್ಪನ್ನ ಲೋಕಾರ್ಪಣಾ ಕಾರ್ಯಕ್ರಮ, ಹಲವು ಗಣ್ಯರು ಭಾಗಿ:
ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಸಂಸ್ಥೆಯ ನೂತನ ಉತ್ಪನ್ನಗಳ ಲೋಕಾರ್ಪಣಾ ಸಮಾರಂಭ ನಾಳೆ ನ.8ರಂದು ಬೆಳಗ್ಗೆ 10ಗಂಟೆಗೆ ಉಜಿರೆಯಲ್ಲಿ ನಡೆಯಲಿದೆ. ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಅವರು ಲೋಕಾರ್ಪಣೆಗೊಳಿಸಲಿರುವರು. ಶಾಸಕ ಹರೀಶ್ ಪೂಂಜ, ಬರೋಡದ ಉದ್ಯಮಿ ಹಾಗೂ ಶಶಿ ಕ್ಯಾಟರಿಂಗ್ ಸರ್ವಿಸಸ್ ಪ್ರೈ.ಲಿ. ಸಂಸ್ಥೆಯ ಶಶಿಧರ ಶೆಟ್ಟಿ ನವಶಕ್ತಿ ಗುರುವಾಯನಕೆರೆ, ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಯು. ಶರತ್ ಕೃಷ್ಣ ಪಡ್ವೆಟ್ನಾಯ, , ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಮಂಗಳೂರು ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್, ಬೆಳ್ತಂಗಡಿ ,ಬೆಸ್ಟ್ ಪೌಂಡೇಶನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ.






